ರೈಲು ಬೋಗಿಗೆ ಬೆಂಕಿ: 44 ಜನರ ಸಾವು
ಅಲಹಾಬಾದ್, ಅ.31– ಹೌರಾಗೆ ಹೋಗುತ್ತಿದ್ದ ಅಪ್ಪರ್ ಇಂಡಿಯಾ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ಇಂದು ಬೆಳಿಗ್ಗೆ ಬೆಂಕಿ ಹೊತ್ತಿಕೊಂಡ ಕಾರಣ ಕನಿಷ್ಠ 44 ಮಂದಿ ಪ್ರಯಾಣಿಕರು ಮೃತಪಟ್ಟರು.
ಇಲ್ಲಿಗೆ 60 ಕಿ.ಮೀ ದೂರದಲ್ಲಿರುವ ಮನೋಹರ್ ಗಂಜ್ ರೈಲು ನಿಲ್ದಾಣದ ಸಮೀಪದಲ್ಲಿ ಸಂಭವಿಸಿದ ಈ ಬೆಂಕಿ ಅವಘಡದಲ್ಲಿ 35 ಮಂದಿ ಗಾಯಗೊಂಡರು.
ದುರಂತಕ್ಕೀಡಾದ ಈ ನತದೃಷ್ಟರೆಲ್ಲ ಎರಡನೇ ದರ್ಜೆ ಬೋಗಿಯಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ಬೋಗಿಯಲ್ಲಿದ್ದ ಪ್ರಯಾಣಿಕರೊಬ್ಬರ ಬಳಿಯಿದ್ದ ಸ್ಫೋಟಕ ವಸ್ತು ಸಿಡಿದು ಬೋಗಿಗೆ ಬೆಂಕಿ ಹೊತ್ತಿಕೊಂಡಿತೆಂದು ಗಾಯಗೊಂಡ ಕೆಲವರು ತಿಳಿಸಿದ್ದಾರೆ.
ಮೃತಪಟ್ಟವರಲ್ಲಿ ಹಲವರು ಬೆಂಕಿಗೆ ಆಹುತಿಯಾದರೆ, ಇನ್ನೂ ಕೆಲವರು ಭೀತರಾಗಿ ಬೆಂಕಿಯಿಂದ ಪಾರಾಗಲು ರೈಲಿನಿಂದ ಹೊರಕ್ಕೆ ಹಾರಿದಾಗ ಮೃತರಾದರು.
ಸದ್ಯದ ಪರಿಸ್ಥಿತಿ ಬದವಲಾವಣೆಗೆ ಜನತೆಯ ತವಕ: ಜೆ.ಪಿ
ನವದೆಹಲಿ, ಅ.31– ತಮ್ಮ ಸುತ್ತಮುತ್ತ ಏನಾಗುತ್ತಿದೆ ಎಂಬುದು ಜನತೆಗೆ ಗೊತ್ತು. ಆದರೆ ಸದ್ಯದ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ಭಾವಿಸಿದ್ದಾರೆ ಎಂದು ಸರ್ವೋದಯ ನಾಯಕ ಜಯಪ್ರಕಾಶ ನಾರಾಯಣ್ ಇಂದು ಇಲ್ಲಿ ಹೇಳಿದರು.
ಸರ್ದಾರ್ ಪಟೇಲ್ ಜಯಂತಿ ಸಮಿತಿ ಏರ್ಪಡಿಸಿದ್ದ ಸರ್ದಾರ್ ಪಟೇಲರ 99ನೇ ಜನ್ಮದಿನೋತ್ಸವದಲ್ಲಿ ಮಾತನಾಡಿದ ಅವರು ಬದಲಾವಣೆಯನ್ನು ಜನತೆ ಬಯಸಿದ್ದಾರೆಂಬುದು ಕಳೆದ ವರ್ಷದ ಚುನಾವಣೆಗಳಿಂದ ವೇದ್ಯ ಎಂದು ಹೇಳಿದರು.
ಉತ್ತರ ಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಕೇವಲ ಶೇ 32ರಷ್ಟು ಮತದಾರರ ಬೆಂಬಲ ಪಡೆದು ಅಧಿಕಾರಕ್ಕೆ ಬಂದಿತು. ಉಳಿದ ಶೇ 68ರಷ್ಟು ಮತಗಳು ವಿವಿಧ ವಿರೋಧ ಪಕ್ಷಗಳಿಗೆ ಹಂಚಿಹೋಯಿತು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.