ರಾಜ್ಯಕ್ಕೆ ‘ಕರ್ನಾಟಕ’ ನಾಮಕರಣದ ಬಗ್ಗೆ ಅರಸು ನಿಲುವು
ಬೆಂಗಳೂರು, ನ. 1– ರಾಜ್ಯದ ಹೆಸರು ಬದಲಾವಣೆ ಆಗಬೇಕೆಂದು ಹಿಂದೆ ಪ್ರತಿಪಾದಿಸುತ್ತಿದ್ದವರ ಮುಖಂಡತ್ವ ಸದುದ್ದೇಶವನ್ನು ಹೊಂದಿರಲಿಲ್ಲ ಎಂಬ ಕಾರಣದ ಮೇಲೆ ಆ ಕಾಲದಲ್ಲಿ ಹಾಲಿ ಮುಖ್ಯಮಂತ್ರಿ ದೇವರಾಜ ಅರಸು ಅವರು ಹೆಸರು ಬದಲಾವಣೆಯನ್ನು ವಿರೋಧಿಸಿದ್ದರು.
ರಾಜಾಜಿನಗರದಲ್ಲಿ ‘ಅನುಭವನ ಪ್ರಿಂಟರ್ಸ್’ ಅನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಅರಸು ಅವರು, ಒಂದೊಮ್ಮೆ ವಿರೋಧಿಸಿ ನಂತರ ಬೆಂಬಲ ಸೂಚಿಸಿ ಕರ್ನಾಟಕ ಎಂದು ನಾಮಕರಣ ಆಗುವುದಕ್ಕೆ ಮುಂದಾದ ತಮ್ಮ ನಿಲುವನ್ನು ವಿವರಿಸಿದರು.
‘1972ರ ನಂತರ ನಾಮಕರಣ ಪ್ರಶ್ನೆ ಬಂದಾಗ ನಾನೇ ಅದನ್ನು (ಕರ್ನಾಟಕ ಎಂದು ಹೆಸರಿಡುವ ಬಗ್ಗೆ ನಿರ್ಣಯ) ಶಾಸನಸಭೆಯಲ್ಲಿ ಮಂಡನೆ ಮಾಡಿದೆ. ಇಡೀ ಶಾಸನಸಭೆ ಒಮ್ಮತದಿಂದ ನಿರ್ಣಯಕ್ಕೆ ಒಪ್ಪಿಗೆ ನೀಡಿತು. ಕಠಿಣ ಹೂವನ್ನು ಎತ್ತಿದಷ್ಟು ಹಗುರವಾಯಿತು’ ಎಂದರು.
‘ಕರ್ನಾಟಕ ಎಂದು ಹೆಸರಿಡಲು ಮುಂದಾಗಿರುವುದು ನನ್ನ ವೈಯಕ್ತಿಕ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಅಲ್ಲ’ ಎಂದು ಪ್ರತಿಪಾದಿಸಿದ ಅವರು, ‘ನನ್ನ ಉದ್ದೇಶ ಒಳ್ಳೆಯದೋ, ಕೆಟ್ಟದ್ದೋ ಎಂದು ಸಾರ್ವಜನಿಕರೇ ವಿಮರ್ಶಿಸಲಿ. ಉದ್ದೇಶದಲ್ಲಿ ಸ್ವಾರ್ಥ ಇರುತ್ತಿದ್ದರೆ ಕೆಲಸ ಇಷ್ಟು ಯಶಸ್ವಿಯಾಗುತ್ತಿರಲಿಲ್ಲ’ ಎಂದು ಹೇಳಿದರು.
–––
ಫಲ ನೀಡದ ಅನಿರೀಕ್ಷಿತ ಇಂದಿರಾ– ಜೆ.ಪಿ. ಚರ್ಚೆ
ನವದೆಹಲಿ, ನ. 1– ಬಿಹಾರದಲ್ಲಿ ಆರಂಭಿಸಿರುವ ತಮ್ಮ ಚಳವಳಿಯನ್ನು ಮತ್ತಷ್ಟು ಚುರುಕುಗೊಳಿಸುವುದಾಗಿ, ಪ್ರಧಾನಮಂತ್ರಿ ಇಂದಿರಾಗಾಂಧಿ ಜತೆ ಇಂದು ಬೆಳಿಗ್ಗೆ ಇಲ್ಲಿ 90 ನಿಮಿಷಗಳ ಚರ್ಚೆ ಮುಗಿಯುತ್ತಿದ್ದಂತೆ ಜಯಪ್ರಕಾಶ್ ನಾರಾಯಣ್ ಘೋಷಿಸಿದರು.
ಇಂದಿರಾಗಾಂಧಿ ಜತೆ ಯಾವುದೇ ಒಪ್ಪಂದ ಸಾಧ್ಯವಾಗಲಿಲ್ಲ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.
ಇಂತಹ ಸಮಯದಲ್ಲಿ ಸಂತೋಷಪಡುವುದಾದರೂ ಹೇಗೆ? ಎಂದ ಅವರು, ಈಗಾಗಲೇ ಆರಂಭಿಸಿರುವ ಚಳವಳಿಯಲ್ಲಿ ಹೀಂದೇಟು ಹಾಕುವುದು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಪದಗಳಲ್ಲಿ ಹೇಳಿದರು.
ಗಫೂರ್ ಸಂಪುಟದ ಪದಚ್ಯುತಿ, ಬಿಹಾರ ವಿಧಾನಸಭೆ ವಿಸರ್ಜನೆ ಸೇರಿದಂತೆ ಭ್ರಷ್ಟಾಚಾರ, ಹಣದುಬ್ಬರ ಮತ್ತು ಶಿಕ್ಷಣ ವಿಧಾನಗಳ ವಿರುದ್ಧ ಬಿಹಾರದಲ್ಲಿ ಚಳವಳಿ ಆರಂಭಿಸಿದ ನಂತರ ಇದೇ ಮೊದಲ ಬಾರಿಗೆ ಇಂದಿರಾ– ಜೆ.ಪಿ ಸಮಾಗಮವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.