ಮುಲಾಯಂ ಸರ್ಕಾರಕ್ಕೆ ಕಾನ್ಶಿರಾಂ ಬೆಂಬಲ ಅಚಲ
ಲಖನೌ, ಜುಲೈ 10 (ಯುಎನ್‌ಐ)– ಪಕ್ಷಾಂತರಕ್ಕೆ ಪ್ರಚೋದನೆ ನೀಡುವುದರ ವಿರುದ್ಧ ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರಿಗೆ ಇಂದು ಇಲ್ಲಿ ಎಚ್ಚರಿಕೆ ನೀಡಿದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ)ದ ವರಿಷ್ಠ ನಾಯಕ ಕಾನ್ಶಿರಾಂ, ರಾಜ್ಯ ಸರ್ಕಾರಕ್ಕೆ ಬೆಂಬಲ ಮುಂದುವರಿಸಲು ನಿರ್ಧರಿಸಿದರು.
ಐತಿಹಾಸಿಕ ಬೇಗಂ ಹಜರತ್‌ಮಹಲ್ ಪಾರ್ಕ್‌ನಲ್ಲಿ ಏರ್ಪಡಿಸಿದ್ದ ಭಾರಿ ಪಕ್ಷಾಂತರ ವಿರೋಧಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ರಾಹ್ಮಣ್ಯವನ್ನು ಪ್ರತಿನಿಧಿಸುವ ಕಾಂಗೈ, ಬಿಜೆಪಿ ಮತ್ತು ಜನತಾ ದಳಗಳು ಈ ಅವಕಾಶದ ದುರುಪಯೋಗ ಪಡೆಯಬಾರದು ಎಂಬ ಉದ್ದೇಶದಿಂದ ಮುಲಾಯಂ ಸರ್ಕಾರಕ್ಕೆ ಬಿಎಸ್‌ಪಿ ಬೆಂಬಲ ಮುಂದುವರೆಸಿದೆ ಎಂದರು.
ಸಮಾಜವಾದಿ ಪಕ್ಷದ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರು ಮುಖ್ಯಮಂತ್ರಿಯಾಗಿರುವ ಉತ್ತರ ಪ್ರದೇಶದ ಅಲ್ಪಸಂಖ್ಯಾತ ಸಮ್ಮಿಶ್ರ ಸರ್ಕಾರದಲ್ಲಿ ಬಿಎಸ್‌ಪಿ ಕೂಡಾ ಭಾಗಿಯಾಗಿದೆ. ಬಿಎಸ್‌ಪಿಯನ್ನು ಒಡೆಯಲು ಮುಲಾಯಂ ಯತ್ನಿಸುತ್ತಿದ್ದಾರೆ ಎಂದು ನಿನ್ನೆ ಇಲ್ಲಿ ಆರೋಪ ಮಾಡಿದ್ದ ಕಾನ್ಶಿರಾಂ ಅವರು ರಾಜ್ಯ ಸರ್ಕಾರಕ್ಕೆ ಬೆಂಬಲ ವಾಪಸ್ ಪಡೆಯಲು ಗಂಭೀರವಾಗಿ ಯೋಚಿಸುತ್ತಿರುವೆ ಎಂದು ‘ಬಾಂಬ್’ ಹಾಕಿದ್ದರು.
ಆಳ್ವ ನಿರ್ಗಮನ: ಸಂಧಾನಕ್ಕೆ ನಿರಾಸಕ್ತಿ
ಬೆಂಗಳೂರು, ಜುಲೈ 10– ರಾಜೀನಾಮೆ ನೀಡಿರುವ ಡಾ. ಜೀವರಾಜ ಆಳ್ವ ಅವರು ಮತ್ತೆ ಪಕ್ಷಕ್ಕೆ ಬರುವಂತೆ ಅವರ ಮನ ಒಲಿಸಬೇಕೆಂದು ಅವರ ಆಪ್ತರು ಜನತಾ ದಳದ ವರಿಷ್ಠ ನಾಯಕರಿಗೆ ದುಂಬಾಲು ಬಿದ್ದಿರುವುದು ಕಂಡು ಬಂದಿದೆ.
ಆದರೆ ಪಕ್ಷ ಬಿಟ್ಟರೆ ತಮ್ಮ ಬಗ್ಗೆ ಭಾರೀ ಅನುಕಂಪ ಹಾಗೂ ಬೆಂಬಲ ದೊರೆಯುತ್ತದೆ ಎಂಬ ಆಳ್ವ ಅವರ ನಿರೀಕ್ಷೆ ಅಷ್ಟೇನು ಕೈಗೂಡದೇ ಇರುವುದು ಅಚ್ಚರಿ ಮೂಡಿಸಿದೆ.
ನೇಪಾಳ ಪ್ರಧಾನಿ ಕೊಯಿರಾಲ ರಾಜೀನಾಮೆ
ಕಠ್ಮಂಡು, ಜುಲೈ 10 (ಎಪಿ)– ನೇಪಾಳದ ಪ್ರಧಾನಿ ಗಿರಿಜಾಪ್ರಸಾದ್ ಕೊಯಿರಾಲ ರಾಜೀನಾಮೆ ನೀಡಿದ್ದಾರೆ.
ಪ್ರತಿನಿಧಿ ಸಭೆಯಲ್ಲಿ ಆಡಳಿತ ನೇಪಾಳಿ ಕಾಂಗ್ರೆಸ್ ಬಹುಮತ ಕಳೆದುಕೊಂಡ ಹಿನ್ನೆಲೆಯಲ್ಲಿ ಅವರು ಇಂದು ತಮ್ಮ ರಾಜೀನಾಮೆ ಪತ್ರವನ್ನು ದೊರೆ ಬೀರೆಂದ್ರ ಅವರಿಗೆ ಸಲ್ಲಿಸಿದರು ಎಂದು ಸರ್ಕಾರಿ ರೇಡಿಯೋ ವರದಿ ಮಾಡಿದೆ. ಸಂಸತ್ತನ್ನು ವಿಸರ್ಜಿಸಿ ಹೊಸದಾಗಿ ಚುನಾವಣೆ ನಡೆಸುವಂತೆ ಅವರು ಶಿಫಾರಸು ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.