ADVERTISEMENT

ಪ್ರಜಾವಾಣಿ 25 ವರ್ಷಗಳ ಹಿಂದೆ| ವರುಣಾ ನಾಲೆ ಕಾಮಗಾರಿ ನಿಲ್ಲದು: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2023, 23:40 IST
Last Updated 29 ಜೂನ್ 2023, 23:40 IST
ಪ್ರಜಾವಾಣಿ 25 ವರ್ಷಗಳ ಹಿಂದೆ
ಪ್ರಜಾವಾಣಿ 25 ವರ್ಷಗಳ ಹಿಂದೆ   

ದಕ್ಷಿಣ ಕನ್ನಡದಲ್ಲಿ ಮಳೆಗೆ 4 ಬಲಿ

ಮಂಗಳೂರು, ಜೂನ್‌ 29– ದಕ್ಷಿಣ ಕನ್ನಡ ಜಿಲ್ಲೆ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂಗಾರು ತೀವ್ರವಾಗಿದೆ. ಕಳೆದ ಮೂರು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಲ್ವರನ್ನು ಬಲಿ ತೆಗೆದುಕೊಂಡಿದೆ.

ಈ ನಾಲ್ವರ ಸಾವು ಈ ಬಾರಿಯ ಮುಂಗಾರಿನ ಮೊದಲ ಬಲಿಯಾಗಿದೆ.

ನಿನ್ನೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನೀರುಮಾರ್ಗ ಪ್ರದೇಶದಲ್ಲಿ ಹೆಂಚಿನ ಮನೆಯೊಂದು ಕುಸಿದು ಮನೆಯಲ್ಲಿದ್ದ ಏಳು ಮಂದಿಯಲ್ಲಿ ಈ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 

ADVERTISEMENT

ವರುಣಾನಾಲೆ ಕಾಮಗಾರಿ ನಿಲ್ಲದು– ಸಿದ್ದರಾಮಯ್ಯ

ಮೈಸೂರು, ಜೂನ್‌ 29– ಯಾವುದೇ ಕಾರಣಕ್ಕೂ ವರುಣಾ ನಾಲೆ ಕಾಮಗಾರಿ ನಿಲ್ಲುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಜುಲೈ ವೇಳೆಗೆ ನೀರು ಬಿಡಲು ಸಾಧ್ಯವಾಗುವುದಾಗಿ ಈ ಮೊದಲು ಭಾವಿಸಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ 52 ಕಿ.ಮೀ.ವರೆಗೆ ಸೆಪ್ಟೆಂಬರ್‌– ಅಕ್ಟೋಬರ್‌ ವೇಳೆಗೆ ವರುಣಾ ನಾಲೆ ಮೂಲಕ ಬೇಸಾಯಕ್ಕೆ ನೀರು ಬಿಡಲು ಸಾಧ್ಯವಾಗಬಹುದು ಎಂದು ಇಂದು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

ಮಂಡ್ಯ ಜಿಲ್ಲಾ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಕನ್ನಂಬಾಡಿಯಲ್ಲಿ ಕೆಲ ಜನ ನಡೆಸಿದ ದಾಂಧಲೆ, ಬೆಂಕಿ, ಗಲಾಟೆ ಮೊದಲಾದ ಪ್ರಕರಣ ಪ್ರಸ್ತಾಪಿಸಿದ ಅವರು 1979ರಲ್ಲಿ ಆದ ವರುಣಾ ನಾಲೆ ಒಪ್ಪಂದಕ್ಕೆ ಮಂಡ್ಯ ಜಿಲ್ಲೆಯ ಅನೇಕ ಪ್ರಮುಖರು ಸಹಿಹಾಕಿರುತ್ತಾರೆ. ಆ ರೀತಿ ಸಹಿ ಹಾಕಿದವರಲ್ಲಿ ಮಾಜಿ ಸಂಸತ್‌ ಸದಸ್ಯ ಜಿ.ಮಾದೇಗೌಡ ಕೂಡ ಒಬ್ಬರಿದ್ದಿರಬಹುದು ಎಂದರು.

ಆದರೆ, ವರುಣಾ ನಾಲೆ ಕಾಮಗಾರಿ ವಿರುದ್ಧ ಈಗ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಲಾಗುತ್ತಿದೆ ಎಂದು ವಿಷಾದಿಸಿದ ಅವರು ಆ ಮೂಲಕ ಜನತೆಯನ್ನು ತಪ್ಪು ದಾರಿಗೆಳೆಯಲಾಗುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.