ADVERTISEMENT

ಪ್ರಜಾವಾಣಿಯಲ್ಲಿ 25 ವರ್ಷಗಳ ಹಿಂದೆ: ಶುಕ್ರವಾರ – 12–09–1997

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2022, 19:31 IST
Last Updated 11 ಸೆಪ್ಟೆಂಬರ್ 2022, 19:31 IST
   

l ಕೇಂದ್ರ ಸರ್ಕಾರಿ ನೌಕರರ ವೇತನ: ಒಪ್ಪಂದಕ್ಕೆ ಸಹಿ

ನವದೆಹಲಿ, ಸೆಪ್ಟೆಂಬರ್ 11– ಐದನೇ ವೇತನ ಆಯೋಗದ ಶಿಫಾರಸುಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ನೌಕರರ ಸಂಘಗಳು ಒಪ್ಪಂದಕ್ಕೆ ಸಹಿ ಹಾಕಿವೆ. ಇದರಿಂದ ಸೆಪ್ಟೆಂಬರ್‌ 24ರಂದು ನಡೆಸಲು ಉದ್ದೇಶಿಸಿದ್ದ ಅನಿರ್ದಿಷ್ಟ ಅವಧಿಯ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ.

15 ಅಂಶಗಳ ಒಪ್ಪಂದಕ್ಕೆ ಸಿಬ್ಬಂದಿ ಸಚಿವಾಲಯದ ಕಾರ್ಯದರ್ಶಿ ಅರವಿಂದ ವರ್ಮಾ ಹಾಗೂ ನೌಕರರ ಜಂಟಿ ಸಲಹಾ ಸಮಿತಿಯ ಪ್ರಧಾನ ಕಾರ್ಯದರ್ಶಿ
ಯು. ಪುರೋಹಿತ್‌ ಸಹಿ ಹಾಕಿದರು.

ADVERTISEMENT

l ಜಗನ್ನಾಥ್‌ ಮಿಶ್ರಾ ಬಂಧನಕ್ಕೆ ವಾರಂಟ್‌

ಪಟ್ನಾ, ಸೆಪ್ಟೆಂಬರ್‌ 11 (ಯುಎನ್‌ಐ)– ಮೇವು ಹಗರಣದ ಒಳಸಂಚಿನ ಆರೋಪ ಎದುರಿಸುತ್ತಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್‌ ಮುಖಂಡ ಜಗನ್ನಾಥ್‌ ಮಿಶ್ರಾ ಅವರ ವಿರುದ್ಧ ಇಂದು ಸಿಬಿಐನ ನಿಯೋಜಿತ ನ್ಯಾಯಾಲಯ ಜಾಮೀನುರಹಿತ ವಾರಂಟ್‌ ಹೊರಡಿಸಿದೆ.

ಮೇವು ಹಗರಣದ ಆರೋಪ
ಎದುರಿಸುತ್ತಿರುವ ರಾಜಕೀಯ ವ್ಯಕ್ತಿಗಳ ಪೈಕಿ ಮಿಶ್ರಾ ಅವರೊಬ್ಬರೇ ಇನ್ನೂ ಬಂಧನಕ್ಕೆ
ಒಳಗಾಗಿಲ್ಲ.‌

ನಿನ್ನೆಗೆ ಸುಪ್ರೀಂ ಕೋರ್ಟ್‌ ಅವರಿಗೆ ನೀಡಿದ್ದ ನಿರೀಕ್ಷಣಾ ಜಾಮೀನಿನ ಅವಧಿ ಮುಗಿದಿತ್ತು. ನಿನ್ನೆಯೇ ಪಟ್ನಾ ಹೈಕೋರ್ಟ್‌ ಮಿಶ್ರಾ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ತಾತ್ಕಾಲಿಕ ಪರಿಹಾರ ನೀಡಲೂನಿರಾಕರಿಸಿತ್ತು.

l ಉ.ಪ್ರ: ಕಲ್ಯಾಣ್‌ ಸಿಂಗ್‌ಗೇ ಮುಖ್ಯಮಂತ್ರಿ ಪಟ್ಟ – ಬಿಜೆಪಿ

ನವದೆಹಲಿ, ಸೆಪ್ಟೆಂಬರ್‌ 11 (ಪಿಟಿಐ)– ಕಲ್ಯಾಣ್‌ ಸಿಂಗ್‌ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನಾಗಿ ಮಾಡುವ ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಜೆಪಿ ಇಂದು ರಾತ್ರಿ ಸ್ಪಷ್ಟಪಡಿಸಿದೆ.

ರಾಜ್ಯ ವಿಧಾನಸಭೆಯ ಸ್ಪೀಕರ್‌ ಹುದ್ದೆ ಕುರಿತು ಬಹುಜನ ಸಮಾಜ ಪಕ್ಷದ
(ಬಿಎಸ್‌ಪಿ) ಜತೆಗೆ ತಲೆದೋರಿರುವ ವಿವಾದ ಪರಿಹಾರ ಕಾಣುವ ಮೊದಲೇ ಬಿಜೆಪಿಯ ಈ ನಿಲುವು ಬಹಿರಂಗಗೊಂಡಿದೆ.

ಮಾಜಿ ಪ್ರಧಾನಿ ಎ.ಬಿ. ವಾಜಪೇಯಿ ಅವರ ನಿವಾಸದಲ್ಲಿ ಸಭೆ ಸೇರಿದ್ದ ಬಿಜೆಪಿ ಹಿರಿಯ ನಾಯಕರ ಸಭೆ, ಮುಖ್ಯಮಂತ್ರಿ ಹುದ್ದೆಗೆ ಕಲ್ಯಾಣ್‌ ಸಿಂಗ್‌ ಅವರೇ ಪಕ್ಷದ ಅಭ್ಯರ್ಥಿ ಎಂಬ ನಿರ್ಧಾರಕ್ಕೆ ಅಂಟಿ ಕೊಂಡಿದೆ. ಬಿಜೆಪಿ ಅಧ್ಯಕ್ಷ ಎಲ್‌.ಕೆ. ಅಡ್ವಾಣಿ, ಮಾಜಿ ಅಧ್ಯಕ್ಷ ಮುರಳಿ ಮನೋಹರ ಜೋಷಿ, ಉತ್ತರಪ್ರದೇಶದ ಬಿಜೆಪಿ ಅಧ್ಯಕ್ಷ ರಾಜನಾಥ ಸಿಂಗ್‌, ಪಕ್ಷದ ಮುಖಂಡರಾದ ಕಲ್‌ರಾಜ್‌ ಮಿಶ್ರಾ, ಲಾಲ್‌ಜಿ ಟಂಡನ್‌ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.