ಸಚಿವರ ವಿರುದ್ಧ ಸಿಬಿಐ ತನಿಖೆ ಪ್ರಧಾನಿ ಅನುಮತಿಗೆ ಪ್ರಸ್ತಾವ
ನವದೆಹಲಿ, ಜ. 11 (ಪಿಟಿಐ)– ಪ್ರಧಾನಿ ಅವರ ಪೂರ್ವಾನುಮತಿ ಇಲ್ಲದೆಯೇ ಸೇವೆಯಲ್ಲಿರುವ ಅಥವಾ ಮಾಜಿ ಕೇಂದ್ರ ಸಚಿವರುಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಯಾವುದೇ ಕ್ರಮ ಜರುಗಿಸುವುದಕ್ಕೆ ತಡೆ ಹಾಕಲು ಸರ್ಕಾರ ಉದ್ದೇಶಿಸಿದೆ.
ಈ ಪ್ರಸ್ತಾವದ ಪ್ರಕಾರ, ಸೇವೆಯಲ್ಲಿರುವ ಅಥವಾ ಮಾಜಿ ಕೇಂದ್ರ ಸಚಿವರುಗಳ ವಿರುದ್ಧ ಶೋಧ ಸೇರಿದಂತೆ ಯಾವುದೇ ರೀತಿಯ ವಿಚಾರಣೆ ಕೈಗೊಳ್ಳುವ ಮೊದಲು ಸಿಬಿಐ, ಪ್ರಧಾನಿಯ ಅನುಮತಿ ಪಡೆಯಬೇಕಾಗುತ್ತದೆ.
ಉತ್ತರ– ದಕ್ಷಿಣ ಕರ್ನಾಟಕ ಭೇದ ಬೇಡ: ಪ್ರಧಾನಿ ಕರೆ
ಬೆಳಗಾವಿ, ಜ. 11– ಉತ್ತರ ಕರ್ನಾಟಕ –ದಕ್ಷಿಣ ಕರ್ನಾಟಕ ಎಂಬ ಭೇದಭಾವ ಮಾಡುವುದು ಬೇಡ ಎಂದು ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಇಂದು ಇಲ್ಲಿ ಕಳಕಳಿಯ ಮನವಿ ಮಾಡಿದರು.
ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗಾವಿ ಮಧ್ಯವರ್ತಿ ಸಹಕಾರಿ ಬ್ಯಾಂಕಿನ (ಡಿ.ಸಿ.ಸಿ) ಅಮೃತ ಮಹೋತ್ಸವವನ್ನು ಉದ್ಘಾಟಿಸಿ ಭಾರಿ ಬಹಿರಂಗ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಹುಬ್ಬಳ್ಳಿ ರೈಲ್ವೆ ಕಾರ್ಯಾಗಾರದ ಅಭಿವೃದ್ಧಿಗೆ ₹37 ಕೋಟಿಯನ್ನು ತಾವು ಮಂಜೂರು ಮಾಡಿದಾಗ ‘ಅದು ಹಾಸನ ಎಂದೇನೂ ಮಾಡಲಿಲ್ಲ’ ಎಂದರು.
ತಾವು ಕೇವಲ ಹಾಸನದ ಪ್ರಧಾನಿ ಮತ್ತು ಒಕ್ಕಲಿಗರ ನಾಯಕ ಎಂದು ‘ವ್ಯವಸ್ಥಿತವಾಗಿ ಬಿಂಬಿಸುವ ಪ್ರಯತ್ನವನ್ನು’ ಪರೋಕ್ಷವಾಗಿ ಪ್ರಸ್ತಾಪಿಸಿ ಮಾತನಾಡಿದ ದೇವೇಗೌಡರು, ಕೃಷ್ಣಾ ಮೇಲ್ದಂಡೆ ಯೋಜನೆಗೆ ₹124 ಕೋಟಿ ನೆರವನ್ನು ಕೇಂದ್ರದಿಂದ ಬಿಡುಗಡೆ ಮಾಡಿದಾಗ ಅಲ್ಲಿ ತಮ್ಮ ಬೀಗರು ಇದ್ದಾರೆ ಎಂದು ತಿಳಿದಿರಲಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.