ADVERTISEMENT

25 ವರ್ಷಗಳ ಹಿಂದೆ: ಶ್ರೀನಿವಾಸುಲು ನೇಮಕ ರದ್ದು ಊರ್ಜಿತ

ಶನಿವಾರ 15–5–1999

​ಪ್ರಜಾವಾಣಿ ವಾರ್ತೆ
Published 14 ಮೇ 2024, 19:14 IST
Last Updated 14 ಮೇ 2024, 19:14 IST
25 ವರ್ಷಗಳ ಹಿಂದೆ
25 ವರ್ಷಗಳ ಹಿಂದೆ   

ಶ್ರೀನಿವಾಸುಲು ನೇಮಕ ರದ್ದು ಊರ್ಜಿತ

ಬೆಂಗಳೂರು, ಮೇ 14– ರಾಜ್ಯದ ಪೊಲೀಸ್‌ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ ಹುದ್ದೆಗೆ ಟಿ.ಶ್ರೀನಿವಾಸುಲು ಅವರನ್ನು ಸರ್ಕಾರ ನೇಮಕ ಮಾಡಿರುವುದನ್ನು ರದ್ದುಗೊಳಿಸಿ, ಹಿರಿಯ ಅಧಿಕಾರಿ ಸಿ.ದಿನಕರ್‌ ಸೇರಿದಂತೆ ಅರ್ಹರ ಹೆಸರು ಪರಿಶೀಲಿಸಿ ನೇಮಕ ಮಾಡಬೇಕೆಂದು ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್‌ ಇಂದು ಎತ್ತಿಹಿಡಿದಿದೆ.

ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸರ್ಕಾರ ಮತ್ತು ಪೊಲೀಸ್‌ ಮಹಾನಿರ್ದೇಶಕರಾದ ಟಿ.ಶ್ರೀನಿವಾಸುಲು ಅವರಿಂದ ಸುಪ್ರೀಂ ಕೋರ್ಟಿನಲ್ಲಿ ವಿಶೇಷ ಮನವಿ ಅರ್ಜಿ ಸಲ್ಲಿಸಲಾಗಿತ್ತು. ವಿಭಾಗೀಯ ನ್ಯಾಯಪೀಠ ಈ ಅರ್ಜಿಗಳನ್ನು ತಳ್ಳಿಹಾಕಿರುವುದರಿಂದ, ಸರ್ಕಾರ ಈಗ ಮಹಾನಿರ್ದೇಶಕ ಹಾಗೂ ಮಹಾನಿರೀಕ್ಷಕ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಬೇಕಾಗಿದೆ.

ADVERTISEMENT

ವಿಶೇಷ ನ್ಯಾಯಾಲಯ ರಚನೆ ಕ್ರಮ ಎತ್ತಿಹಿಡಿದ ಸುಪ್ರೀಂ ಕೋರ್ಟ್‌

ನವದೆಹಲಿ, ಮೇ 14 (ಪಿಟಿಐ, ಯುಎನ್‌ಐ)– ಎಐಎಡಿಎಂಕೆ ನಾಯಕಿ ಜಯಲಲಿತಾ ಹಾಗೂ ಇತರರ ವಿರುದ್ಧದ ಭ್ರಷ್ಟಾಚಾರ ಪ್ರಕರಣಗಳ ತ್ವರಿತ ವಿಚಾರಣೆಗೆ 1997ರಲ್ಲಿ ಮೂರು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಿದ್ದ ತಮಿಳುನಾಡಿನ ಡಿಎಂಕೆ ನೇತೃತ್ವದ ಸರ್ಕಾರದ ಕ್ರಮವನ್ನು ಸುಪ್ರೀಂ ಕೋರ್ಟ್‌ ಇಂದು ಎತ್ತಿಹಿಡಿಯಿತು.

ಇದರಿಂದಾಗಿ, ಅದರ ಕ್ರಮಬದ್ಧತೆಯನ್ನು ಪ್ರಶ್ನಿಸಿದ್ದ ಜಯಲಲಿತಾ ಹಾಗೂ ವಿಶೇಷ ನ್ಯಾಯಾಲಯಗಳಿಂದ ಈ ಮೊಕದ್ದಮೆಗಳನ್ನು ಹಿಂತೆಗೆದುಕೊಂಡು ಇತರ ನಿತ್ಯದ
ನ್ಯಾಯಾಲಯಗಳಿಗೆ ವರ್ಗಾಯಿಸಿ ಫೆಬ್ರುವರಿ 5ರಂದು ಅಧಿಸೂಚನೆ ಹೊರಡಿಸಿದ್ದ ಕೇಂದ್ರ ಸರ್ಕಾರಕ್ಕೆ ಮುಖಭಂಗವಾದಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.