ವಿಜಯಪುರ ಜಿಲ್ಲೆ ಕೊಲ್ಹಾರ ತಾಲ್ಲೂಕಿನ ಕಲಗುರ್ಕಿ ಹುಟ್ಟೂರು. ಬದುಕು ಕಟ್ಟಿಕೊಂಡಿದ್ದು ನಿಡಗುಂದಿ ತಾಲ್ಲೂಕಿನ ಮುದ್ದಾಪುರದಲ್ಲಿ. ಚಿಕ್ಕಂದಿನಿಂದಲೂ ಭಜನಾ ಪದಗಳನ್ನು ಕೇಳುವುದು, ಹಾಡುವುದು ಎಂದರೆ ಇಷ್ಟ. ಬಾಲ್ಯದಿಂದಲೇ ಜನಪದ ಕಲೆಯತ್ತ ಮುಖ ಮಾಡಿ ಏಕತಾರಿ ಹೇಳುವುದನ್ನು ಕರಗತ ಮಾಡಿಕೊಂಡಿದ್ದರು. ರಾಜ್ಯ ಮತ್ತು ರಾಷ್ಟ್ರಮಟ್ಟದ ಹಲವು ಕಡೆ ಕಾರ್ಯಕ್ರಮಗಳಲ್ಲಿ ತಮ್ಮ ಗಾಯನದ ಮೂಲಕ ಜನರ ಮನಸ್ಸಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅವರೇ ವೀರಭದ್ರಪ್ಪ ದಳವಾಯಿ.
1970ರ ದಶಕದಲ್ಲಿ ಆಕಾಶವಾಣಿ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ, ಪಕ್ಕದ ಹುಲ್ಲೂರಿನ ಖ್ಯಾತ ಭಜನಾ ಕಲಾವಿದ ಗುರುಪಾದಪ್ಪ ಚಲವಾದಿ ಅವರ ಜೊತೆಗೂಡಿದ್ದರು ವೀರಭದ್ರಪ್ಪ. ಸುಮಾರು 20 ವರ್ಷಗಳ ಕಾಲ ಧಾರವಾಡದ ಆಕಾಶವಾಣಿ ಕೇಂದ್ರದಲ್ಲಿ ವರ್ಷಕ್ಕೆರೆಡು ಕಾರ್ಯಕ್ರಮ ನೀಡುತ್ತಲೇ ಶ್ರೋತೃಬಳಗವನ್ನು ವಿಸ್ತರಿಸಿಕೊಂಡರು. ಇವರು ಆಕಾಶವಾಣಿಯ ‘ಬಿ’ ಗ್ರೇಡ್ ಕಲಾವಿದರಾಗಿದ್ದರು. ಅಲ್ಲಿ ಭಜನಾ ಪದ ಹಾಡುತ್ತಿದ್ದರು.
ಯಾರಾದರೂ ಮೃತಪಟ್ಟರೆ ಇವರದ್ದೇ ಭಜನಾ ಮಂಡಳಿಯ ಉಪಸ್ಥಿತಿ. ರಾತ್ರಿಯಿಡೀ ಹಾಡುವುದು ಹವ್ಯಾಸವಾಯಿತು. ಆದರೆ, ದೊರಕುತ್ತಿದ್ದದ್ದು ನೂರು ರೂಪಾಯಿ ಮಾತ್ರ. ಅದು ಹೊಟ್ಟೆಪಾಡಿಗೆ ಸಾಲುತ್ತಿರಲಿಲ್ಲ. ಸಂಸಾರ ದೊಡ್ಡದಾದಂತೆ ಭಜನೆ ಬಿಟ್ಟು ಹೋಟೆಲ್ ಹಾಗೂ ಕೃಷಿ ಕಾಯಕದಲ್ಲಿ ತೊಡಗಿದರು ವೀರಭದ್ರಪ್ಪ. ತಮ್ಮ ಬದುಕಿನ 79ನೇ ವಯಸ್ಸಿನ ಸಾಯುವ ಕೊನೆಯ ದಿನವರೆಗೂ ಹೋಟೆಲ್ ಹಾಗೂ ಕೃಷಿ ಕಾಯಕದಲ್ಲಿ ಅವರು ತೊಡಗಿಕೊಂಡಿದ್ದರು.
ಭಜನಾ ಪದ ಹಾಡುವುದು ಕಡಿಮೆಯಾದ ನಂತರ ಆತ್ಮತೃಪ್ತಿಗಾಗಿ ತತ್ವಪದಗಳನ್ನು ಹಾಡಲು ಶುರುಮಾಡಿದ್ದರು. ಆದರೆ, ಮನಸ್ಸನ್ನು ಕೇಂದ್ರೀಕರಿಸುವ ಮಾರ್ಗವಾಗಿ ಏಕತಾರಿ ವಾದ್ಯ ನುಡಿಸುವುದನ್ನು ಕರಗತ ಮಾಡಿಕೊಂಡು ಎಲ್ಲೆಲ್ಲಿ ಜಾಗ ಸಿಗುತ್ತದೆಯೋ ಅಲ್ಲಲ್ಲಿ ಕುಳಿತು ಹಾಡುವುದೇ ಅವರ ಹವ್ಯಾಸವಾಯಿತು. ಹಲವರು ಇವರ ಹಾಡುಗಾರಿಕೆಯನ್ನು ಹೀಯಾಳಿಸಿದರೂ, ಅದನ್ನು ಕೇಳಿಸಿಕೊಳ್ಳದಂತೆ ತಮ್ಮೊಳಗೆ ಲೀನವಾಗುತ್ತಾ ಹಾಡುವುದು ಅವರಿಗೆ ಅಭ್ಯಾಸವಾಗಿತ್ತು. ಹೋಟೆಲ್‌ನಲ್ಲಿ, ತೋಟಗಳಲ್ಲಿ, ಮನೆಯಲ್ಲಿ ಹಾಡುಗಳನ್ನು ಹಾಡುವುದೇ ಕಾಯಕ.
ಹಳ್ಳಿಗಳಿಗೆ ಸೀಮಿತವಾಗಿದ್ದ ಇವರ ಕಲೆಯನ್ನು ಗುರುತಿಸಿ ಪ್ರೋತ್ಸಾಹಿಸಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವು ಅಧಿಕಾರಿಗಳು. ಅವರು ನಾನಾ ಕಡೆ ವೇದಿಕೆ ಕಲ್ಪಿಸಿದ್ದು, ಹಳ್ಳಿಗಷ್ಟೆ ಸೀಮಿತವಾಗಿದ್ದ ಏಕತಾರಿ ಕಲೆಯನ್ನು ಐದು ರಾಜ್ಯಗಳಲ್ಲಿ ಪ್ರದರ್ಶಿಸಲು ಕಾರಣವಾಯಿತು.
ಮೈಸೂರು ದಸರಾ, ನವರಸಪುರ, ಪಟ್ಟದಕಲ್ಲು, ಕಂದಬೋತ್ಸವ, ಅಯ್ಯನ ಗುಡಿ ಉತ್ಸವ, ರಾಜ್ಯ ಮಟ್ಟದ ಗಿರಿಜನ ಉತ್ಸವ, ಸಿಕ್ಕಿಂನ ಇಂಫಾಲ್‌ನಲ್ಲಿ ನಡೆದ ಹೊರನಾಡು ಉತ್ಸವ, ಗೋವಾದ ಪಣಜಿ, ಕೇರಳದ ಕಾಸರಗೋಡು ಸೇರಿ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ನಾನಾ ಕಡೆ ವೀರಭದ್ರಪ್ಪ ದಳವಾಯಿ ತಮ್ಮ ತಂಡದ ಜತೆಗೂಡಿ ಪ್ರದರ್ಶನ ನೀಡಿದ್ದಾರೆ. ಇಟಗಿಯ ತಬಲಾ ಮೇಷ್ಟ್ರು ಚಾಂದ್‌ಸಾಬ್ ವಾಲೀಕಾರರ ಜತೆ ಸೇರಿ ಬಸವರಾಜ ಬಿರಾದಾರ, ಶಿವಪ್ಪ ಮಾದರ, ಹನುಮಂತ ಬಿರಾದಾರ ಹಿಮ್ಮೇಳ ಜತೆ ಏಕತಾರಿ ಪದಗಳನ್ನು ವೀರಭದ್ರಪ್ಪ ಹಾಡುತ್ತಿದ್ದರು.
ಈ ಭಾಗದಲ್ಲಿ ಪ್ರಚಲಿತರಾಗಿರುವ ನಿಡಗುಂದಿ ತಾಲ್ಲೂಕಿನ ಬಳಬಟ್ಟಿಯ ಮೌನಪ್ಪ ಅಜ್ಜನವರ ತತ್ವಪದಗಳಿಂದ ಹೆಚ್ಚು ಪ್ರಭಾವಿತರಾಗಿದ್ದರು. ಆ ತತ್ವಪದಗಳನ್ನೇ ಭಜನಾರೂಪದಲ್ಲಿ ಹಾಡುತ್ತಿದ್ದರು. ಮೌನಪ್ಪ ಅಜ್ಜನವರ ಸಾಹಿತ್ಯ, ಅವರ ತತ್ವಪದಗಳು ಬಾಯಿಂದ ಬಾಯಿಗೆ ಹರಡಿವೆ. ಆದರೆ, ಲಿಖಿತರೂಪದಲ್ಲಿ ದೊರೆಯುವುದು ಅತಿ ಕಡಿಮೆ. ಶಿಶುನಾಳ ಷರೀಫರಂತೆಯೇ ಅವರು ಅಧ್ಯಾತ್ಮ ಜೀವಿಯಾಗಿದ್ದರು. ಆದರೆ, ಅವರ ಹಾಗೂ ಅವರ ಸಾಹಿತ್ಯದ ಬಗ್ಗೆ ಅಧ್ಯಯನ, ಪ್ರಚಾರದ ಕೊರತೆ ಹೆಚ್ಚು ಎಂದು ಪ್ರತಿ ಕಾರ್ಯಕ್ರಮಕ್ಕೂ ಮೊದಲು ಹೇಳುತ್ತಿದ್ದ ವೀರಭದ್ರಪ್ಪ, ಅವರನ್ನು ನೆನೆಸಿಕೊಂಡೇ ಹಾಡನ್ನು ಹಾಡುತ್ತಿದ್ದರು. ಜೊತೆಗೆ ಕಡಕೋಳ ಮಲ್ಲಪ್ಪ, ಶಿಶುನಾಳ ಷರೀಫ, ಬಬಲಾದಿ ಶಿವಶರಣ ಹಲವು ಪದಗಳನ್ನು ಹಾಡುತ್ತಿದ್ದರು.
ವೀರಭದ್ರಪ್ಪ ಕಲಿತಿದ್ದು ಏಳನೇ ತರಗತಿಯಾದರೂ ತಮ್ಮ ಕಲಾಪ್ರೌಢಿಮೆಯಿಂದ ಕರ್ನಾಟಕ ಜಾನಪದ ಅಕಾಡೆಮಿಯ 2022ನೇ ಸಾಲಿನ ಪ್ರಶಸ್ತಿ ಪಡೆದಿದ್ದರು. ವಿಜಯಪುರ ಜಿಲ್ಲಾಡಳಿತ ನೀಡುವ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಮಟ್ಟದ ಸನಾದಿ ಅಪ್ಪಣ್ಣ ಪ್ರಶಸ್ತಿ ಸೇರಿ ನಾನಾ ಸಂಘ–ಸಂಘಟನೆಗಳ ಪ್ರಶಸ್ತಿಗಳು ಅವರಿಗೆ ಸಂದಿದ್ದವು.
ವೀರಭದ್ರಪ್ಪನವರ ಪುತ್ರ, ಗೊಂಬೆಯಾಟದ ಕಲಾವಿದ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಸರ್ಕಾರಿ ಪ್ರೌಡಶಾಲೆಯ ಶಿಕ್ಷಕ ಸಿದ್ದು ಬಿರಾದಾರ, ಬಾಲ್ಯದಿಂದಲೇ ತಮ್ಮ ತಂದೆಯವರ ಕಲೆ ನೋಡಿದ್ದರು. ತಂದೆಯ ಕಲೆಗೆ ಹೆಚ್ಚು ವೇದಿಕೆ ಕಲ್ಪಿಸಲು ಅವರೂ ಶ್ರಮಿಸಿದ್ದರು.
ಸಾಂಸ್ಕೃತಿಕ ಸಂರಕ್ಷಣೆಗಾಗಿ ಮಹರ್ಷಿ ವಾಲ್ಮೀಕಿ ಸಾಂಸ್ಕೃತಿಕ ಸಂರಕ್ಷಣಾ ಕಲಾ ಸಂಘ ಸ್ಥಾಪಿಸಿ, ಅದರ ಮೂಲಕ ಕಾರ್ಯಕ್ರಮ ನೀಡುತ್ತಿದ್ದ ದಳವಾಯಿ, ಮುದ್ದಾಪುರದಲ್ಲಿ ನಾಲ್ಕು ಗುಂಟೆಯಷ್ಟು ತಮ್ಮ ಸ್ವಂತ ಜಾಗವನ್ನು ನೀಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ₹ 25 ಲಕ್ಷ ವೆಚ್ಚದಲ್ಲಿ ಸಾಂಸ್ಕೃತಿಕ ಭವನ ನಿರ್ಮಿಸಲು ಕಾರಣರಾಗಿದ್ದರು. ಆರ್ಥಿಕವಾಗಿ ಹಿಂದುಳಿದ, ದೀನ ದಲಿತ ಕಲಾವಿದರಿಗೆ ಪ್ರೋತ್ಸಾಹ ನೀಡಿ, ಅವರ ಕಲೆಗಳ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಿದ್ದರು. ವೀರಭದ್ರಪ್ಪ ಏಕತಾರಿ ಹಿಡಿದು ಹಾಡುತ್ತ ನಿಂತರೆ ಜಗತ್ತನ್ನೇ ಮರೆಸುವ ಶಕ್ತಿ ಹೊಂದಿದ್ದರು. ಇದೇ ಅಕ್ಟೋಬರ್ 2ರಂದು ಗಾಂಧಿ ಜಯಂತಿ ದಿನ ಅವರು ನಿಧನರಾದರು. ಅವರ ಏಕತಾರಿ ಸ್ವರ ಹೊಮ್ಮಿಸದೆ ಶಾಂತವಾಗಿರುವುದನ್ನು ನೋಡಿದಾಗಲೆಲ್ಲ ಅವರ ನಾದದ ನೆನಪು ಮರುಕಳಿಸುತ್ತದೆ.
‘ಏಕತಾರಿ’, ‘ಏಕ್ ತಾರ್’ ಅಂದರೆ ಒಂದೇ ತಂತಿಯಿಂದ ನಾದ ಹೊಮ್ಮಿಸುವ ವಾದ್ಯ. ಕುಂಬಳಕಾಯಿಗೆ ಒಂದೇ ತಂತಿಯನ್ನು ಕಟ್ಟಿ ಅದರ ಮೂಲಕ ನಾದ ಹೊಮ್ಮಿಸುವ ಸಂಗೀತ ಉಪಕರಣ ಇದಾಗಿದೆ. ಇದೇ ಶಬ್ದ ವಿನ್ಯಾಸದಲ್ಲಿ ದೋತಾರ್, ತೀನ್ ತಾರ್, ಸೀತಾರ್ (ಅಂದರೆ, ಆರು ತಂತಿ) ಕೂಡ ಇವೆ.
ಏಕಾಗ್ರತೆಗಾಗಿ ಹಾಗೂ ರಾಗಸಿದ್ಧಿಗಾಗಿ ಏಕತಾರಿ ಹಲವು ಅಧ್ಯಾತ್ಮ ಜೀವಿಗಳಿಗೆ ಸಾಥಿಯಂತೆ. ಒಂದೇ ತಂತಿಯಿಂದ ನಾದ ಹೊಮ್ಮಿಸಿ, ನಮ್ಮ ರಾಗಕ್ಕೆ ತಂತಿಯ ನಾದವನ್ನು ಹೊಂದಿಸಿ ಹಾಡುವ ವಾದ್ಯವಿದು.
ಸೂಫಿ ಸಂತರು, ನಾಥಪಂಥದ ಹಲವು ಅಧ್ಯಾತ್ಮಜೀವಿಗಳು, ಸಂತರು ಮೊದಲಾದವರ ತಂಬೂರಿ ಏಕತಾರಿಯದ್ದಾಗಿತ್ತು. ಮಾನವ ದೇಹವು ತಂತಿವಾದ್ಯವಾಗಿ ರೂಪಾಂತರಗೊಳ್ಳುವ ಈ ಕ್ರಿಯೆ ಯಲ್ಲಮ್ಮ ಸಂಪ್ರದಾಯದಲ್ಲಿ ಹಳ್ಳಿ ಹಳ್ಳಿಗಳಲ್ಲಿ ಇನ್ನೂ ಜೀವಂತವಿದೆ. ಆದರೆ, ಅವರು ನುಡಿಸುವುದು ಚೌಡಿಕೆ. ಏಕತಾರಿಯಾಗಿದ್ದರೂ ಅದು ತಂಬೂರಿಯಲ್ಲ.
ಉತ್ತರ ಕರ್ನಾಟಕದ ಬಹುತೇಕ ದೇವಸ್ಥಾನಗಳಲ್ಲಿ ಏಕತಾರಿಗಳನ್ನು ತೂಗಿಬಿಟ್ಟಿರುವುದು ಕಾಣುತ್ತೇವೆ. ಈಗ ಅದನ್ನು ನುಡಿಸುವ ಕಲಾವಿದರು ಮಾತ್ರ ಕಡಿಮೆಯಾಗಿದ್ದಾರೆ. ಪ್ರತಿ ಭಜನಾ ಪದ, ತತ್ವಪದಗಳಲ್ಲಿ ಏಕತಾರಿ ಮೊದಲೆಲ್ಲ ಇರುತ್ತಿತ್ತು. ಈಗ ಆ ಜಾಗವನ್ನು ಹಾರ್ಮೋನಿಯಂ ಹಾಗೂ ತಬಲಾ ಆವರಿಸಿಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.