ADVERTISEMENT

ಸ್ಫೂರ್ತಿಯ ಉದ್ಯಮಿ | ಉದ್ಯಮದಲ್ಲಿ ಉಳಿಯಲು, ಬೆಳೆಯಲು...

ಎಂ.ಶ್ರೀನಿವಾಸ
Published 19 ಮೇ 2021, 19:31 IST
Last Updated 19 ಮೇ 2021, 19:31 IST
ತನ್ಮಯೀ ವಿಶ್ವನಾಥ್
ತನ್ಮಯೀ ವಿಶ್ವನಾಥ್   

ತಾವು ಉದ್ಯಮಿಯಾಗಲು ತಂದೆ ಮತ್ತು ಸಹೋದರನೇ ಕಾರಣ ಎನ್ನುತ್ತಾರೆ ತನ್ಮಯಿ ವಿಶ್ವನಾಥ್‌. ‘ನನ್ನ ತಂದೆಗೆ ವ್ಯಾಪಾರದಲ್ಲಿ ಬಹಳ ಆಸಕ್ತಿ. ಇದೇ ನನಗೆ ದೊಡ್ಡ ಪ್ರೇರಣೆ ನೀಡಿತು. ನನ್ನ ಔದ್ಯಮಿಕ ಪ್ರಯಾಣದುದ್ದಕ್ಕೂ ಅವರು ಬೆಂಬಲವಾಗಿ ನಿಂತಿದ್ದರು. ನನ್ನ ಸಹೋದರ ಕುಂಸಿ ನಿಖಿಲ್‌ ಸಹ ಉತ್ತರ ಅಮೆರಿಕದಲ್ಲಿ ಕಂಪನಿಯ ಮಾರುಕಟ್ಟೆ ಯೋಜನೆಗಳನ್ನು ನೋಡಿಕೊಳ್ಳುವುದರ ಜೊತೆಗೆ ನನಗೆ ಪ್ರೇರಕ ಶಕ್ತಿಯೂ ಹೌದು’ ಎಂದು ಅವರು ಹೇಳುತ್ತಾರೆ.

ತನ್ಮಯಿ ಅವರ ತಂದೆ ಕುಂಸಿ ವಿಶ್ವನಾಥ್‌ ಅವರು 1984ರಲ್ಲಿ ಬೆಂಗಳೂರು ವಾಲ್ವ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಇದನ್ನು ಬಿಪಿಪಿಎಲ್‌ ಟರ್ಬೈನ್‌ ಪಾರ್ಟ್ಸ್‌ ಎಂದೂ ಕರೆಯುತ್ತಾರೆ) ಕಂಪನಿ ಆರಂಭಿಸಿದರು. ಕೆಲವು ಖ್ಯಾತ ಎಂಜಿನಿಯರಿಂಗ್‌ ಕಂಪನಿಗಳಲ್ಲಿ ಕೆಲಸ ಮಾಡಿದ ನಂತರ ಅವರು ತಮ್ಮದೇ ಆದ, ಪ್ರಿಸಿಷನ್‌ ಎಂಜಿನಿಯರಿಂಗ್‌ ಬಿಡಿಭಾಗಗಳನ್ನು ತಯಾರಿಸುವ ಕಂಪನಿ ಶುರು ಮಾಡಿದರು.

ಕೋಯಿಕ್ಕೋಡ್‌ನ ಭಾರತೀಯ ಆಡಳಿತ ನಿರ್ವಹಣೆ ಸಂಸ್ಥೆಯಲ್ಲಿ (ಐಐಎಂ) ಎಂಬಿಎ ಪದವಿ ಪಡೆದ ತನ್ಮಯಿ ಅವರು ಸ್ವಲ್ಪ ಸಮಯ ಕಾಗ್ನಿಜೆಂಟ್‌ ಮತ್ತು ಕೆಪಿಎಂಜಿ ಕಂಪನಿಗಳಲ್ಲಿ ಕೆಲಸ ಮಾಡಿದರು. ಅಮೆರಿಕದಲ್ಲಿಯೂ ಉದ್ಯೋಗ ನಿಭಾಯಿಸಿದರು. ಬಳಿಕ ತಮ್ಮದೇ ಉದ್ಯಮಕ್ಕೆ ಕೈಹಾಕಿದರು.

ADVERTISEMENT

ಆರಂಭದಲ್ಲಿ ಅವರು ತಮ್ಮ ತಂದೆಯ ಕಂಪನಿಯ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಡಲು ನೆರವಾಗುತ್ತಿದ್ದರು. ಉತ್ಪನ್ನಗಳಿಗೆ ಇದ್ದ ಅಧಿಕ ಬೇಡಿಕೆಯನ್ನು ಗಮನಿಸಿದ ಅವರು ಇನ್ನಷ್ಟು ಉತ್ಪಾದನೆಗೆ ಅವಕಾಶ ಇರುವುದನ್ನು ಮನಗಂಡರು. ಹಾಗಾಗಿ ತಂದೆಯ ಕೆಲಸಗಳಿಗೆ ಸಂಪೂರ್ಣವಾಗಿ ಕೈಜೋಡಿಸಿದರು. ‘ಎಂಜಿನಿಯರಿಂಗ್‌ ಉದ್ಯಮವೇ ವೈವಿಧ್ಯಮಯ. ನಟ್‌, ಬೋಲ್ಟ್‌ಗಳು ಇಲ್ಲಿವೆ. ರಾಕೆಟ್‌ಗಳಲ್ಲಿ ಬಳಸುವ ಬಿಡಿಭಾಗಗಳೂ ಇಲ್ಲಿವೆ’ ಎಂದು ತನ್ಮಯಿ ಹೇಳುತ್ತಾರೆ.

‘ಬೆಂಗಳೂರು ವಾಲ್ವ್ಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯು ಏರೋಸ್ಪೇಸ್‌ ಮತ್ತು ಗ್ಯಾಸ್‌ ಟರ್ಬೈನ್‌ ಉದ್ಯಮಗಳಿಗೆ ಅಗತ್ಯವಿರುವ ಹೈಪ್ರಿಸಿಷನ್‌ ಬಿಡಿಭಾಗಗಳನ್ನು ಉತ್ಪಾದಿಸುವುದರತ್ತ ಗಮನ ಹರಿಸಿತ್ತು. ಅಲ್ಲದೇ ನಿಕಲ್‌ ಆಧಾರಿತ ಸೂಪರ್‌ ಮಿಶ್ರ ಲೋಹಗಳು ಸೇರಿದಂತೆ ಅಧಿಕ ಕ್ಷಮತೆಯ ಕೌಶಲ ಅಗತ್ಯವಿರುವ ಯಂತ್ರಗಳನ್ನೂ ನಾವು ತಯಾರಿಸುತ್ತಿದ್ದೆವು’ ಎಂದು ತನ್ಮಯಿ ನೆನಪಿಸಿಕೊಳ್ಳುತ್ತಾರೆ.

ಕೋವಿಡ್‌ ಸಾಂಕ್ರಾಮಿಕದಿಂದಾಗಿ ವಿಮಾನ ಪ್ರಯಾಣ ಬಹಳ ಕಡಿಮೆ ಆಯಿತು. ಇದರಿಂದಾಗಿ, ವಾಣಿಜ್ಯ ಉದ್ದೇಶದ ವಿಮಾನಯಾನ ಉದ್ಯಮದ ಮೇಲೆ ದುಷ್ಪರಿಣಾಮ ಉಂಟಾಯಿತು. ‘ಬೆಂಗಳೂರು ವಾಲ್ವ್ಸ್‌ ಪ್ರೈವೇಟ್‌ ಲಿಮಿಟೆಡ್‌ಗೆ ಇದು ಬಹಳ ದೊಡ್ಡ ಪ್ರಮಾಣದಲ್ಲಿ ತೊಂದರೆ ಆಗಲಿಲ್ಲ. ಕಂಪನಿಯ ಮಾರುಕಟ್ಟೆಯು ಬಹಳ ವಿಸ್ತಾರವಾದ ನೆಲೆ ಹೊಂದಿದ್ದರಿಂದ ಹಾಗೂ ಗ್ರಾಹಕರು ವಿಭಿನ್ನ ಉದ್ಯಮ ವಲಯಗಳಲ್ಲಿ ಸೇರಿದವರಾದ್ದರಿಂದ ನಮ್ಮ ಕಂಪನಿಯ ಕೆಲಸ ಎಂದಿನಂತೆ ನಡೆಯಿತು’ ಎನ್ನುತ್ತಾರೆ ತನ್ಮಯಿ.

ಉದ್ಯಮದಲ್ಲಿ ಯಶಸ್ವಿಯಾಗಲು ಸಕಾರಾತ್ಮಕ ಚಿಂತನೆ, ಸಾಂಘಿಕ ಕೆಲಸ ಮತ್ತು ಹೊಸತನವನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ಅವರು ಹೇಳುತ್ತಾರೆ. ಮಾರುಕಟ್ಟೆ ಹೇಗೆ ಬೇರೆ ರೂಪಗಳನ್ನು ಪಡೆದುಕೊಳ್ಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡು ತಂತ್ರಜ್ಞಾನ ಮತ್ತು ಬೇಡಿಕೆಗೆ ತಕ್ಕಂತೆ ಬದಲಾವಣೆಗಳನ್ನು ತರುವುದರಿಂದ ಉದ್ಯಮ ರಂಗದಲ್ಲಿ ಉಳಿದು ಬೆಳೆಯಬಹುದು ಎಂದು ಅವರು ನಂಬಿದ್ದಾರೆ. ಉದ್ಯಮಿಯಾಗಲು ಬಯಸುವ ಎಲ್ಲರಿಗೂ ತನ್ಮಯಿ ಅವರು ನೀಡುವ ಸಲಹೆ ಇದು; ‘ಉದ್ಯಮ ಬೇಗ ಆರಂಭಿಸಿ, ಸಂಕಷ್ಟದ ಸಮಯದಲ್ಲಿಯೂ ಸಕಾರಾತ್ಮಕತೆ ಇರಲಿ ಮತ್ತು ಉದ್ವೇಗಕ್ಕೆ ಒಳಗಾಗಬೇಡಿ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.