‘ಕಾನೂನನ್ನು ವ್ಯಾಖ್ಯಾನಿಸುವಾಗ ಸ್ತ್ರೀವಾದಿ ಚಿಂತನೆಯನ್ನು ನಿಮ್ಮೊಳಗೆ ರೂಢಿಸಿಕೊಳ್ಳಿ ಎಂದು ನಾನು ನಿಮಗೆ ಸಲಹೆ ನೀಡುತ್ತೇನೆ’– ಇದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಧನಂಜಯ ಯಶವಂತ ಚಂದ್ರಚೂಡ್ (ಡಿ.ವೈ.ಚಂದ್ರಚೂಡ್) ಅವರು ದೆಹಲಿಯ ನ್ಯಾಷನಲ್ ಲಾ ಯುನಿವರ್ಸಿಟಿಯ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಹೇಳಿದ ಕಿವಿಮಾತು. ಈ ಮಾತು ಕಿವಿಮಾತಾಗಿ ಉಳಿಯಲಿಲ್ಲ, ದೊಡ್ಡ ಸುದ್ದಿಯಾಯಿತು. ಚರ್ಚೆ, ವಿವಾದವೂ ಆಯಿತು. ಚಂದ್ರಚೂಡ್ ಅವರ ವ್ಯಕ್ತಿತ್ವವೇ ಹಾಗೆ. ಹೇಳಬೇಕಿರುವುದನ್ನು ಅವರು ನೇರವಾಗಿ ಹೇಳುತ್ತಾರೆ. ಅವರಲ್ಲಿ ಅಳುಕು ಇರುವುದಿಲ್ಲ. ಹಾಗಂತ ಅವರು ಕಠೋರ ವ್ಯಕ್ತಿ ಅಲ್ಲವೇ ಅಲ್ಲ. ತಾಯಿ ಹೃದಯದವರು. ಶೋಷಣೆಗೆ ಒಳಗಾದವರು, ಮಹಿಳೆಯರು, ತೃತೀಯ ಲಿಂಗಿಗಳು, ಅನ್ಯಾಯಕ್ಕೆ ಒಳಗಾದವರು ಇಂಥವರ ಬಗ್ಗೆ ಅಪಾರವಾದ ಕಳಕಳಿ ಉಳ್ಳವರು.
ಮಹಿಳೆಯರ ಮೇಲಿನ ಅಪರಾಧಗಳನ್ನು ತಪ್ಪಿಸುವುದರ ಕುರಿತು, ಕಾನೂನನ್ನು ಮಹಿಳಾ ದೃಷ್ಟಿಕೋನದಲ್ಲಿ ನೋಡುವುದರ ಕುರಿತು ಚಂದ್ರಚೂಡ್ ಬಹಳ ಬಾರಿ ಮಾತನಾಡಿದ್ದಾರೆ. ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದ ದಿನಗಳ ಬಗ್ಗೆ ಚಂದ್ರಚೂಡ್ ಅವರು ಯಾವತ್ತೂ ಸಂಭ್ರಮದಿಂದಲೇ ಮಾತನಾಡುತ್ತಾರೆ. ಆ ದಿನಗಳು ತಮ್ಮ ಮನಸ್ಸಿನಲ್ಲಿ ಮಾರ್ದವ ತುಂಬಿದ್ದು ಹೇಗೆ ಎಂಬುದನ್ನು ಹಲವು ಬಾರಿ ಅವರು ಹೇಳಿಕೊಂಡಿದ್ದಾರೆ. ನ್ಯಾಯಮೂರ್ತಿ ರಂಜನಾ ದೇಸಾಯಿ ಅವರೊಂದಿಗೆ ಕೆಲಸ ಮಾಡಿದ ದಿನಗಳು ಮಹಿಳೆಯರ ಮೇಲಿನ ಅಪರಾಧಗಳ ನ್ಯಾಯ ತೀರ್ಮಾನವನ್ನು ಹೇಗೆ ಮಾಡಬೇಕು ಎಂಬುದರ ಕುರಿತ ತಮ್ಮ ಧೋರಣೆಯನ್ನೇ ಬದಲಿಸಿತು. ಸಮಾಜದ ವಾಸ್ತವಗಳಿಗೆ ಕಾನೂನನ್ನು ಅನ್ವಯಿಸುವಾಗ ಸ್ತ್ರೀವಾದಿ ಮನೋಧೋರಣೆ ಅಗತ್ಯ ಎಂಬುದನ್ನು ರಂಜನಾ ಅವರಿಂದ ಕಲಿತೆ ಎಂಬುದನ್ನು ಚಂದ್ರಚೂಡ್ ನೆನಪಿಸಿಕೊಂಡಿದ್ದಾರೆ.
ಅಪಾರ ವಿದ್ವತ್ತು ಚಂದ್ರಚೂಡ್ ಅವರ ಬಹುದೊಡ್ಡ ಆಸ್ತಿ. 1959ರ ನವೆಂಬರ್ 11ರಂದು ಹುಟ್ಟಿದ ಅವರು 1979ರಲ್ಲಿ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಿಂದ ಅರ್ಥಶಾಸ್ತ್ರ ಮತ್ತು ಗಣಿತದಲ್ಲಿ ಆನರ್ಸ್ ಪದವಿ ಪಡೆದರು. ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದದ್ದು 1982ರಲ್ಲಿ. 1983ರಲ್ಲಿ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇನ್‌ಲಾಕ್ಸ್ ವಿದ್ಯಾರ್ಥಿವೇತನ ಪಡೆದು ಸ್ನಾತಕೋತ್ತರ ಪದವಿಗೆ ಸೇರಿಕೊಂಡಿದ್ದ ಅವರಿಗೆ ‘ಕಾನೂನುಗಳ ಸಂಘರ್ಷ’ ಕೋರ್ಸ್‌ನಲ್ಲಿ ಅತಿ ಹೆಚ್ಚು ಅಂಕ ಪಡೆದದ್ದಕ್ಕಾಗಿ ಜೋಸೆಫ್ ಎಚ್ ಬೀಲ್ ಬಹುಮಾನವೂ ಸಿಕ್ಕಿತು. 1986ರ ವರೆಗೆ ಹಾರ್ವರ್ಡ್‌ನಲ್ಲಿಯೇ ಇದ್ದ ಅವರು ಪಿಎಚ್.ಡಿಯನ್ನೂ ಅಲ್ಲಿಂದಲೇ ಪಡೆದುಕೊಂಡರು. ಶಿಕ್ಷಣ ಪೂರ್ಣಗೊಳಿಸಿದ ಬಳಿಕ ಮಹಾರಾಷ್ಟ್ರ ವಕೀಲರ ಸಂಘದಲ್ಲಿ ನೋಂದಣಿ ಮಾಡಿಕೊಂಡರು.
ಅವರ ಮನಸ್ಸು ಜನರ ಕಷ್ಟಗಳಿಗಾಗಿ ಸದಾ ಮಿಡಿಯುತ್ತಿರುತ್ತದೆ ಎಂಬುದನ್ನು ಅವರ ವಕೀಲಿಕೆಯ ದಿನಗಳಿಂದಲೇ ಗುರುತಿಸಬಹುದು. 1997ರಲ್ಲಿ, ಎಚ್‌ಐವಿ ಸೋಂಕು ತಗಲಿತು ಎಂಬ ಕಾರಣಕ್ಕೆ ಕೆಲಸದಿಂದ ವಜಾ ಮಾಡಲಾದ ವ್ಯಕ್ತಿಯೊಬ್ಬರ ಪರವಾಗಿ ಚಂದ್ರಚೂಡ್ ವಾದಿಸಿದ್ದರು. ಸೋಂಕು ತಗಲಿದೆ ಎಂಬ ಕಾರಣಕ್ಕೆ ವ್ಯಕ್ತಿಗೆ ಬದುಕುವ ಹಕ್ಕನ್ನು ನಿರಾಕರಿಸಲಾಗದು ಎಂದು ಅವರು ಪ್ರತಿಪಾದಿಸಿದ್ದರು. ಜೀತದ ಮಹಿಳೆಯರು, ಧಾರ್ಮಿಕ ಮತ್ತು ಭಾಷಿಕ ಅಲ್ಪಸಂಖ್ಯಾತರ ಪರವಾಗಿ ಹಲವು ಪ್ರಕರಣಗಳಲ್ಲಿ ಅವರು ವಾದಿಸಿದ್ದರು.
ಚಂದ್ರಚೂಡ್ ನ್ಯಾಯಪಂಡಿತನಷ್ಟೇ ಅಲ್ಲದೆ, ಉತ್ತಮ ಶಿಕ್ಷಕನೂ ಹೌದು. 1988ರಿಂದ 1997ರವರೆಗೆ ಅವರು ಬಾಂಬೆ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. 1998 ಚಂದ್ರಚೂಡ್ ಪಾಲಿಗೆ ಮಹತ್ವದ ವರ್ಷ. ಅವರಿಗೆ ಹಿರಿಯ ವಕೀಲ ಪದವಿ ಸಿಕ್ಕಿತು. ಆಗ ಅವರಿಗೆ 38 ವರ್ಷವಷ್ಟೇ ಆಗಿತ್ತು. 40 ವರ್ಷ ದಾಟುವುದಕ್ಕೆ ಮೊದಲು ಹಿರಿಯ ವಕೀಲ ಪದವಿ ನೀಡಿಕೆ ಬಹಳ ವಿರಳ. ಅದೇ ವರ್ಷ ಅವರನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿಯೂ ನೇಮಿಸಲಾಯಿತು. 2000ನೇ ಇಸವಿಯ ಮಾರ್ಚ್ 29ರಂದು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕ ಆಗುವ ತನಕ ಈ ಹುದ್ದೆಯಲ್ಲಿ ಅವರು ಇದ್ದರು. 2013ರ ಅಕ್ಟೋಬರ್ 31ರಂದು ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2016ರ ಮೇ 13ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದುಕೊಂಡರು. ಇದೇ ಬುಧವಾರ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ಮಟ್ಟಿಗೆ ಇದು ಅತ್ಯಂತ ಧನ್ಯತೆಯ ಕ್ಷಣವಾಗಬಹುದು. ಏಕೆಂದರೆ, ಅವರ ತಂದೆ ಯಶವಂತ ವಿಷ್ಣು ಚಂದ್ರಚೂಡ್ ಅವರು ಕೂಡ ಭಾರತದ ಮುಖ್ಯ ನ್ಯಾಯಮೂರ್ತಿ ಆಗಿದ್ದರು. 1978ರ ಫೆಬ್ರುವರಿಯಿಂದ 1985ರ ಜುಲೈವರೆಗೆ ಅವರು ಈ ಹುದ್ದೆಯಲ್ಲಿ ಇದ್ದರು. ಅತಿ ದೀರ್ಘ ಕಾಲ ಈ ಹುದ್ದೆಯಲ್ಲಿದ್ದ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಅವರಿಗೆ ಇದೆ. ಡಿ.ವೈ. ಚಂದ್ರಚೂಡ್ ಅವರು 2024ರ ನವೆಂಬರ್ 10ರವರೆಗೆ ಮುಖ್ಯ ನ್ಯಾಯಮೂರ್ತಿ ಆಗಿ ಇರಲಿದ್ದಾರೆ.
ದೂರಗಾಮಿ ಪರಿಣಾಮಗಳನ್ನು ಉಂಟು ಮಾಡುವಂತಹ ಮತ್ತು ಅತ್ಯಂತ ಮಹತ್ವದ್ದಾದ ಹಲವು ತೀರ್ಪುಗಳನ್ನು ಚಂದ್ರಚೂಡ್ ನೀಡಿದ್ದಾರೆ. ಅವರು ನೀಡಿರುವ ತೀರ್ಪುಗಳೇ ಅವರ ವ್ಯಕ್ತಿತ್ವವನ್ನು ಬಿಚ್ಚಿಡುತ್ತದೆ ಎಂಬುದು ವಿಶೇಷ. ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ಮತ್ತು ಭಾರತ ಸರ್ಕಾರ ನಡುವಣ ಪ್ರಕರಣದಲ್ಲಿ ಚಂದ್ರಚೂಡ್ ಅವರು ಭಿನ್ನಮತದ ತೀರ್ಪು ನೀಡಿ, ಆಧಾರ್ ಮಸೂದೆಯನ್ನು ಹಣಕಾಸು ಮಸೂದೆಯಾಗಿ ಅಂಗೀಕರಿಸಿದ್ದು ಅಸಾಂವಿಧಾನಿಕ ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದರು.
ಸಲಿಂಗ ಸಂಭೋಗವನ್ನು ಅಪರಾಧಮುಕ್ತಗೊಳಿಸಿದ ಪ್ರಕರಣದಲ್ಲಿ ಸಹಮತದ, ಆದರೆ ಪ್ರತ್ಯೇಕ ತೀರ್ಪು ಕೊಟ್ಟಿದ್ದರು. ಈ ಓಬಿರಾಯನ ಕಾಲದ ವಸಾಹತು ಕಾಯ್ದೆಯು ಜನರ ಮೂಲಭೂತ ಹಕ್ಕಿನ ಉಲ್ಲಂಘನೆ ಎಂದು ಹೇಳಿದ್ದರು. ಕೇರಳದ ಹಾದಿಯಾ ಪ್ರಕರಣದಲ್ಲಿ, ಧರ್ಮ ಮತ್ತು ಜೀವನಸಂಗಾತಿಯನ್ನು ಆಯ್ದುಕೊಳ್ಳುವುದು ಆಕೆಯ ಹಕ್ಕು ಎಂದು ತೀರ್ಪು ನೀಡಿದ್ದರು. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಐವರು ಮಾನವ ಹಕ್ಕುಗಳ ಹೋರಾಟಗಾರರ ಬಂಧನವನ್ನೂ ಅವರು ವಿರೋಧಿಸಿದ್ದರು. ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕೆ ಹೆಚ್ಚು ಅಧಿಕಾರವೇ ಲೆಫ್ಟಿನೆಂಟ್ ಗವರ್ನರ್ ಅಧಿಕಾರ ಹೆಚ್ಚೇ ಎಂಬ ಪ್ರಕರಣದಲ್ಲಿಯೂ ಎಲ್.ಜಿ ಅವರು ದೆಹಲಿ ಕಾರ್ಯಾಂಗದ ಮುಖ್ಯಸ್ಥರಲ್ಲ ಎಂಬ ತೀರ್ಪು ನೀಡಿದ್ದರು. ಶಬರಿಮಲೆಗೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನೀಡಬೇಕು ಎಂಬ ತೀರ್ಪು ನೀಡಿದ್ದ ಪೀಠದಲ್ಲಿಯೂ ಅವರು ಇದ್ದರು.
ಜನರ ಕುರಿತು ಅಪಾರ ಕಳಕಳಿ ಹೊಂದಿರುವ ಚಂದ್ರಚೂಡ್ ಅವರು ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಏರುತ್ತಿರುವುದು ನ್ಯಾಯಾಂಗದ ಮೇಲಿನ ವಿಶ್ವಾಸ ಹೆಚ್ಚುವಂತೆ ಮಾಡಿದೆ. ಅವರು ಸಾಗಿ ಬಂದ ಹಾದಿ, ಅವರು ನೀಡಿರುವ ತೀರ್ಪುಗಳು ಅದಕ್ಕೆ ಖಂಡಿತವಾಗಿಯೂ ಪುಷ್ಟಿ ನೀಡುತ್ತವೆ. v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.