ರಾಜ್ಯೋತ್ಸವ ಹತ್ತಿರವಾಗಿರುವಾಗಲೇ ನಮ್ಮನ್ನು ಅಗಲಿದವರು ರಂಗಕರ್ಮಿ, ನಟ, ಸಾಹಿತಿ ಜಿ.ಕೆ.ಗೋವಿಂದರಾವ್. ಈ ಮೇರು ವ್ಯಕ್ತಿತ್ವವನ್ನು ತುಂಬಾ ಹತ್ತಿರದಿಂದ ಕಂಡ ಅವರ ಪುತ್ರಿಯ ಆಪ್ತ ಬರಹ ಇಲ್ಲಿದೆ
ನನಗಾಗ ಐದು ವರ್ಷಗಳಿರಬಹುದು. ನಾವಿದ್ದ ಸಾಗರದ ಮನೆಯಲ್ಲಿ ಅಟ್ಟದ ಮೇಲೆ ಎರಡು ಕೋಣೆಗಳಿದ್ದವು. ಬೀದಿಗೆ ಮುಖವಾಗಿದ್ದ ಕೋಣೆ, ಅಪ್ಪನ ಓದಿಗೆ ಮೀಸಲಾಗಿತ್ತು. ಬೆಳಕು, ಗಾಳಿ ಸಮೃದ್ಧವಾಗಿದ್ದ ಕೋಣೆಯದು. ಅವರಿಲ್ಲದ ಸಮಯ ಹುಡುಕಿ, ನಾನು ಮೆಲ್ಲಗೆ ಆ ಕೊಠಡಿಯನ್ನು ಸೇರುತ್ತಿದ್ದೆ. ಅಲ್ಲಿಟ್ಟಿದ್ದ ಪುಸ್ತಕಗಳ ಮುಟ್ಟುತ್ತಿದ್ದೆ. ಇಷ್ಟವಾದ ಪುಸ್ತಕವನ್ನು ಕೈಗೆತ್ತಿಕೊಂಡು, ಪುಟಗಳನ್ನು ತಿರುವಿಹಾಕುತ್ತಿದ್ದೆ. ಆ ವಯಸ್ಸಿನಲ್ಲಿ, ಆ ಗಳಿಗೆಯಲ್ಲಿ ನನ್ನಲ್ಲಿ ಎಂಥಾ ಭಾವನೆಗಳ ಸಂಚಲನವಿದ್ದೀತು?! ನನಗೆ ಪುಸ್ತಕಗಳ ಪರಿಚಯವಾದ, ಸಂಪರ್ಕಕ್ಕೆ ಬಂದ, ಸ್ಪರ್ಶಕ್ಕೆ ಸಿಕ್ಕ ಮೊದಲ ದಿನಗಳವು!
ವರ್ಜೀನಿಯಾ ವೂಲ್ಫ್ –ಇಪ್ಪತ್ತನೇ ಶತಮಾನದ ಖ್ಯಾತ ಬರಹಗಾರ್ತಿ– ರಚನಾತ್ಮಕ ವಯಸ್ಸಿನ ಘಟನೆಗಳನ್ನು ‘Moments of being’ ಎಂದು ಕರೆಯುತ್ತಾರೆ. ನಮ್ಮ ಇರುವಿಕೆಗೆ, ಅಸ್ತಿತ್ವಕ್ಕೆ ಅರ್ಥ ನೀಡುವ ಕ್ಷಣಗಳು ಅಥವಾ ಅನುಭವಗಳು ನಮ್ಮ ಬೆಳವಣಿಗೆಯ ವಯಸ್ಸಿನಲ್ಲೇ ರೂಪುಗೊಳ್ಳುತ್ತಿರುತ್ತವೆ. ವರ್ಜೀನಿಯಾ ಇದನ್ನು ‘Sense making mechanism’ ಎಂದೂ ಅರ್ಥೈಸುತ್ತಾರೆ. ನನ್ನ ತಂದೆಯೊಂದಿಗೆ ಬೆಳೆಯುವ ಅನುಭವದ ತೀವ್ರತೆ ಅನುಭವಿಸಲು ಬೇಕಾದ ಶಕ್ತಿ ನನ್ನ ಸಣ್ಣ ವಯಸ್ಸಿನಲ್ಲೇ ರೇಷ್ಮೆ ನೂಲಿನಷ್ಟು ಮೃದುವಾಗಿ, ನುಣುಪಾಗಿ ನನ್ನ ದೇಹದ ಕಣಕಣದಲ್ಲಿಯೂ ಬೆರೆತು ಹೋಗಲು ಹವಣಿಸುತ್ತಿತ್ತು. ಇದರ ಸೂಕ್ಷ್ಮ ಪದರಗಳು ಆಗಲೇ ನನ್ನ ಸುಪ್ತಪ್ರಜ್ಞೆಯಲ್ಲಿ ಜಾಗೃತವಾಗಿದ್ದವು.
ಬೆಂಗಳೂರಿಗೆ ಬಂದು ನೆಲೆಸಿದಾಗ, ನಾವಿದ್ದುದು ಚಾಮರಾಜಪೇಟೆಯ ಪಂಪ ಮಹಾಕವಿ ರಸ್ತೆಯಲ್ಲಿದ್ದ ಮನೆಯಲ್ಲಿ. ಈ ಮನೆ, ರಸ್ತೆಗೆ ಸರಿಸಮನಾಗಿರದೆ, ಹಳ್ಳದಲ್ಲಿತ್ತು. ಅಂದಿನಿಂದ ಆ ಮನೆ, ನಮಗೆಲ್ಲ ಪ್ರೀತಿಯ ‘ಹಳ್ಳದ ಮನೆ’ಯಾಯ್ತು. ಈ ಮನೆಯ ಅನುಭವಗಳು, ನನ್ನ ಬದುಕಿನ ಅತ್ಯಂತ ಸುಂದರಘಟ್ಟದ ಕ್ಷಣಗಳು ಎಂದು ವರ್ಣಿಸಬಹುದು. ನನ್ನ ಅಪ್ಪನೊಂದಿಗೆ ಕಳೆದ ಕ್ಷಣಗಳು, ಕಲಿತ ಪಾಠಗಳು ಹಾಗೂ ಪ್ರಜ್ಞೆಗೂ ಮೀರಿದ ಅನುಭವಗಳು ನನ್ನ ಅರಿವಿಗೆ ಬಂದದ್ದು ಇದೇ ಕಾಲಘಟ್ಟದಲ್ಲಿ. ಎಳೇ ಮನಸ್ಸಿನ ಮುಗ್ಧತೆ, ಪ್ರಕೃತಿಯಷ್ಟೇ ನಿಷ್ಕಲ್ಮಶವಾದದ್ದು. ಆಗ ನನ್ನೊಳಗೆ ನಡೆಯುತ್ತಿದ್ದ ಭಾವಸೂಕ್ಷ್ಮತೆಯ ಘರ್ಷಣೆಗಳು ನನ್ನ ಅಂತಃಪ್ರಜ್ಞೆಯಲ್ಲಿ ಒಂದೊಂದೇ ಹನಿಯಂತೆ ಇಳಿಯುತ್ತಾ ನನ್ನ ಬದುಕಿನುದ್ದಕ್ಕೂ ಬೆಂಬಲವಾಗಿ ನಿಲ್ಲುವ, ಅರ್ಥಕ್ಕೂ ಮಿಗಿಲಾದ ಸಂಬಂಧವಾಗಿ ಬೆಳೆಯುತ್ತಿದ್ದವು ಎನ್ನುವುದು ನನ್ನ ಬಲವಾದ ನಂಬಿಕೆ. ಬಹುಶಃ ಬೆಳೆಯುವ ವಯಸ್ಸಿನಲ್ಲಿ ನೈಸರ್ಗಿಕ ಪ್ರಕ್ರಿಯೆಯಲ್ಲಿ ಉಂಟಾಗುವ ಬದುಕಿನ ವೈವಿಧ್ಯಗಳು, ವಯಸ್ಕ ಜೀವನದಲ್ಲಿ ಹೆಚ್ಚು ಕಾಡುತ್ತವೆ. ಆತ್ಮವಿಮರ್ಶೆಗೆ ಒಳಗಾಗುವಂತೆ ಮಾಡುತ್ತವೆ. ಆತ್ಮಶೋಧನೆಗೂ ಕಾರಣವಾಗುತ್ತವೆ.
ಹಳ್ಳದ ಮನೆಯಲ್ಲಿಯೂ ಬೀದಿಗೆ ಕಾಣುವ ಕೋಣೆಯು ಪುಸ್ತಕಗಳಿಗೆ ಮೀಸಲು. ನಮ್ಮ ಮನೆಯ, ನಮ್ಮೆಲ್ಲರ ಆತ್ಮೀಯ ಒಡನಾಡಿ ಪುಸ್ತಕಗಳಿಗೆ, ನಾವು ಹುಟ್ಟುವುದಕ್ಕಿಂತ ಮುಂಚಿನಿಂದಲೇ ಪ್ರಥಮ ಆದ್ಯತೆ ಇತ್ತು. ಅವುಗಳಿಗಿದ್ದ ವಿಶಿಷ್ಟ ಸ್ಥಾನ ಎಂದಿಗೂ ಬದಲಾಗಲಿಲ್ಲ. ಬೆಂಗಳೂರಿನ ಶಾಲೆಗೆ ಸೇರುವ ವಿಷಯದಲ್ಲಿ ನಮ್ಮ ತಂದೆ ನಮ್ಮಿಬ್ಬರ (ನಾನು ಮತ್ತು ನನ್ನ ತಂಗಿ) ಶಿಕ್ಷಣ ಕನ್ನಡ ಮಾಧ್ಯಮದಲ್ಲಿಯೇ ನಡೆಯಬೇಕೆಂದು ತೀರ್ಮಾನಿಸಿದರು. ಪ್ರಾಥಮಿಕ ಶಿಕ್ಷಣದ ನಂತರದ ವಿದ್ಯಾಭ್ಯಾಸ ಇಂಗ್ಲಿಷ್‌ಗೆ ಹೊರಳಿದಾಗ, ನನ್ನಲ್ಲಿ ಆದ ಗೊಂದಲ ಅಸ್ತವ್ಯಸ್ತತೆ ವಿವರಣೆಗೆ ಸಿಗದಷ್ಟಾಯ್ತು. ಯಾವುದು ಸರಿ? ಯಾವುದು ತಪ್ಪು? ಯಾವ ಭಾಷೆಯನ್ನು ನನ್ನದಾಗಿಸಿಕೊಳ್ಳಬೇಕು? ಈ ತಾಕಲಾಟಗಳು ನನ್ನನ್ನು ಕಾಡಲಾರಂಭಿಸಿದ್ದವು. ವಿದ್ಯಾರ್ಥಿಗಳು ನೀಡಬೇಕಾದ ಮಾಹಿತಿ ಪತ್ರದಲ್ಲಿರುತ್ತಿದ್ದ ‘ಜಾತಿ’ ಕಾಲಂನಲ್ಲಿ ಭಾರತೀಯ ಎಂದು ಬರಿ ಎಂದು ಗದರಿಸುತ್ತಿದ್ದರು. ಬಾಲ್ಯದಲ್ಲೇ ಸಿಕ್ಕ ಜಾತಿಯ ಬಗೆಗಿನ ಈ ಜ್ಞಾನ ನಮ್ಮ ಅರಿವಿನ ಅವಿಭಾಜ್ಯ ಅಂಗವಾಗಿ ಬೆರೆತುಹೋಯಿತು. ನನ್ನ ತಂಗಿ ಹಾಗೂ ನನ್ನಲ್ಲಿ ಯಾವ ಜಾತಿ, ಮತಗಳಿಗೆ ಸಂಬಂಧಿಸಿದ ಭೇದಭಾವಗಳ ಎಳೆಯೂ ಬೆಳೆಯದೆ, ‘ಜಾತಿ’ಯೆಂಬ ಪ್ರಶ್ನೆಯೇ ನಮ್ಮಲ್ಲಿ ಉದ್ಭವಿಸಲಿಲ್ಲ.
ಇದೇ ಸಂದರ್ಭದಲ್ಲಿ ನನ್ನ ಒಳಅರಿವಿನಲ್ಲಿ ಮತ್ತೊಂದು ಪದರ ತನ್ನ ಜಾಗ ಭದ್ರ ಮಾಡಿಕೊಳ್ಳತೊಡಗಿತ್ತು. ತಂದೆ, ತಾಯಿಯ ಮೊದಲ ಪ್ರೇಮ ನಾಟಕರಂಗ. ಎಪ್ಪತ್ತರ ದಶಕದಲ್ಲಿ ಹೊಸ ನಾಟಕಕಾರರು, ನಿರ್ದೇಶಕರು ಬೆಂಗಳೂರು ನಗರಕ್ಕೆ ಲಗ್ಗೆ ಹಾಕುತ್ತಿದ್ದ ಕಾಲವದು. ನನ್ನ ತಂಗಿ ಹಾಗೂ ನಾನು ಪ್ರತಿದಿನ ಸಾಯಂಕಾಲದ ವೇಳೆ ಹೆಗಲಿಗೆ ಸ್ಕೂಲುಬ್ಯಾಗು ಹಾಕಿಕೊಂಡು ಅವರಿಬ್ಬರ ನಾಟಕದ ತಾಲೀಮುಗಳಿಗೆ ಹೋಗುತ್ತಿದ್ದೆವು. ಮನೆಯ ಸಮೃದ್ಧ ವಾತಾವರಣಕ್ಕೆ ಮತ್ತಷ್ಟು ಮೆರುಗು ನೀಡುವಂತೆ, ಸಾಯಂಕಾಲದ ವೇಳೆಯಲ್ಲಿ ನಮ್ಮ ತಂದೆಯ ಗೆಳೆಯರು, ಸಾಹಿತಿಗಳು, ನಾಟಕಗಳು ಹಾಗೂ ಸಾಹಿತ್ಯ ಚರ್ಚೆಗಳಿಗೆ ಮನೆಯಲ್ಲಿಯೇ ಸೇರುತ್ತಿದ್ದರು. ನನ್ನ ಕಿವಿಗಳಿಗೆ ಅಪ್ಪನ ಜೋರುಧ್ವನಿಯ, ಸ್ಪಷ್ಟ ನುಡಿಗಳು ಬೀಳುತ್ತಿದ್ದವು. ಅಷ್ಟೇ ಅಲ್ಲದೆ ನನ್ನ ತಂಗಿ ಹಾಗೂ ನನ್ನನ್ನು ಕಲಾತ್ಮಕ ಸಿನಿಮಾಗಳಿಗೂ ಕರೆದುಕೊಂಡು ಹೋಗುತ್ತಿದ್ದರು. ನನ್ನ ನೆನಪಿನಾಳದಲ್ಲಿ ಹಚ್ಚಹಸಿರಾಗಿ ಉಳಿದುಬಿಟ್ಟಿರುವ ಈ ನನ್ನ ಬೆಳವಣಿಗೆಯ ಭಾಗಗಳು ನನ್ನ ಬದುಕಿನುದ್ದಕ್ಕೂ ಅಗಾಧವಾಗಿ ಪರಿಣಾಮ ಬೀರಿವೆ. ನನ್ನನ್ನು ಬೆಂಬಿಡದ ನೆರಳಾಗಿ ಕಾಡಿವೆ.
ನನ್ನ ತಂದೆ ಈ ಯಾವ ಹಂತದಲ್ಲಿಯೂ ನಮ್ಮೊಂದಿಗೆ, ನಮ್ಮ ಬೆಳವಣಿಗೆಗೆ ಪೂರಕವಾಗಿರುವ ರೀತಿಯಲ್ಲಿ ನೇರವಾಗಿ ಪಾಲ್ಗೊಂಡಿರಲಿಲ್ಲ. ಬಹುಶಃ ಈ ಸ್ವಾತಂತ್ರ್ಯವೂ ನನ್ನ ಮನಃಸ್ಥಿತಿಗೆ ಪ್ರೇರಕ ಶಕ್ತಿಯಾಗಿತ್ತು. ನನ್ನ ಸುತ್ತಲ ಬದುಕಿನಲ್ಲಿದ್ದ ಶ್ರೀಮಂತ ಕಲಾ ಜಗತ್ತಿಗೆ ಮಾರು ಹೋಗುತ್ತಿದ್ದೆ. ನನ್ನ ಸುಪ್ತಪ್ರಜ್ಞೆ ಈ ಪ್ರಖರವಾದ ಬದುಕಿನ ಭಾಗವನ್ನು ಹೀರಿಬಿಡುವ ಧಾವಂತದಲ್ಲಿತ್ತು. ನಾನು ಓದುತ್ತಿದ್ದ ಕನ್ನಡ, ಇಂಗ್ಲಿಷ್ ಭಾಷೆಗಳ ಸಾಹಿತ್ಯಕ ಪುಸ್ತಕಗಳು ಸ್ಫುರಿಸುತ್ತಿದ್ದ ತೀವ್ರ ಭಾವನೆಗಳು ನನ್ನಲ್ಲಿ ‘ಮಾಯಾಲೋಕ’ವನ್ನು ಸೃಷ್ಟಿಸುತ್ತಿದ್ದವು. ವಾಸ್ತವ ಬದುಕಿನ ಶಾಲಾ ಕಾಲೇಜಿನ ಗಣಿತ, ವಿಜ್ಞಾನಗಳ ಕಲಿಕೆಯಲ್ಲಿ ನನ್ನಲ್ಲಿ ಯಾವ ಆಸಕ್ತಿಯೂ ಉದಯಿಸಲಿಲ್ಲ.
ನನಗೀಗ ನೆನಪಿದೆ. ಕಡೆಯ ವರ್ಷ ಬಿ.ಎ ಪರೀಕ್ಷೆಗೆ ಒಂದು ವಾರವಿತ್ತು. ನಾನಾಗ ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಸ್ ಬರೆದ ‘ಕ್ರಾನಿಕಲ್ ಆಫ್ ಎ ಡೆತ್ ಫೋರ್‌ಟೋಲ್ಡ್’ ಓದುತ್ತಿದ್ದೆ! ನನ್ನ ತಂದೆಯ ಕಣ್ಣಿಗೆ ಬಿದ್ದಿತ್ತಾದರೂ ಅವರ ಪ್ರಶ್ನಾರ್ಥಕ ಮುಖಭಾವಕ್ಕೆ ನಿರಾತಂಕವಾಗಿ ‘ಸಣ್ಣ ಪುಸ್ತಕ ಓದಿಬಿಡ್ತೀನಿ’ ಎಂದಿದ್ದೆ. ನನ್ನ ತಂದೆಯಿಂದ ನನ್ನ ತಂಗಿ ಹಾಗೂ ನಾನು ಪಡೆದ ಬಳುವಳಿ ಇದೇ ಅಲ್ಲದೆ ಮತ್ತಿನ್ನೇನು? ಇದರಿಂದಲೇ ನನ್ನ ಜೀವನದಲ್ಲಿ ತಾನೇ ತಾನಾಗಿ ಮಿಳಿತವಾಗಿವೆ ಕಲೆ ಹಾಗೂ ಅದಕ್ಕೆ ಶಕ್ತಿನೀಡುವ ಸಂಕೀರ್ಣತೆಗಳು.
ನನ್ನ ತಂದೆಯ ಸಾರ್ವಜನಿಕ ಸಭೆಗಳ ಭಾಷಣಗಳನ್ನು ಲೆಕ್ಕಕ್ಕೆ ಸಿಗದಷ್ಟು ಬಾರಿ ಕೇಳಿದ್ದೇನೆ. ಸಾಮಾಜಿಕ ವ್ಯವಸ್ಥೆಯ ದುಃಸ್ಥಿತಿಯ ಕುರಿತಾಗಿ ಅವರು ಮೊನಚಾಗಿ ಬರೆಯುತ್ತಿದ್ದ ಲೇಖನಗಳನ್ನು ಓದಿ ಮನಸಾರೆ ಮೆಚ್ಚಿಕೊಂಡಿದ್ದೇನೆ, ಹೆಮ್ಮೆಪಟ್ಟುಕೊಂಡಿದ್ದೇನೆ. ಆದರೆ, ನನ್ನ ಆಂತರ್ಯವಾಗಲೀ ವ್ಯಕ್ತಿತ್ವವಾಗಲೀ ಅವರಂತೆಯೇ ಧೀಮಂತ ನೇರ–ನುಡಿಗಳನ್ನು ಅನುಕರಿಸಲು ಪ್ರಯತ್ನಿಸಲಿಲ್ಲ. ಆಶಯಪಡಲಿಲ್ಲ. ಬಹುಶಃ ನನ್ನಲ್ಲಿ ಅವರ ಭಾಷಣಕಾರನ ವ್ಯಕ್ತಿತ್ವವನ್ನು ಒಪ್ಪಿಕೊಳ್ಳುವುದಕ್ಕಿಂತಲೂ ಮೊದಲೇ ಅವರ ಶಾಂತವಾದ, ಕಾವ್ಯಮಯ ವ್ಯಕ್ತಿತ್ವ ನನ್ನ ಬೆಳವಣಿಗೆಯಲ್ಲಿ ಪ್ರಧಾನವಾದ ಪಾತ್ರ ವಹಿಸಿತ್ತು.
ಅವರು ಮಾಡುತ್ತಿದ್ದ ಪ್ರತೀ ಭಾಷಣದಲ್ಲೂ ಉಪಯೋಗಿಸುತ್ತಿದ್ದ ‘ಮೂರ್ತ ಹಾಗೂ ಅಮೂರ್ತ’ ಪದಗಳು ಅವರ ಹಾಗೂ ನನ್ನ ನಡುವಿನ ಸಂಬಂಧದ ವಿಶ್ಲೇಷಣೆಗೂ ಅನ್ವಯಿಸುತ್ತವೆ. ಅಮೂರ್ತವಾದ ಕಲಾಪ್ರಜ್ಞೆ ನಮ್ಮಿಬ್ಬರ ಅರ್ಥಕ್ಕೂ ನಿಲುಕದಂತೆಕೊಂಡಿ ಬೆಸೆದಿತ್ತು ಎಂದರೆ ಹೆಚ್ಚು ಸಮಂಜಸವಾದೀತು. ಈ ಅಮೂರ್ತವಾದ ನಂಟಿನಲ್ಲಿ ಭಾಷೆಯಿಲ್ಲ, ಗದ್ದಲಗಳಿಲ್ಲ, ಪದಗಳಿಲ್ಲ. ಸದಾ ಹರಿಯುವ ನದಿಯಂತೆ ಅವರಿಲ್ಲದ ಈ ಕ್ಷಣದಲ್ಲೂ ತಂದೆ, ಮಕ್ಕಳ ಸಂಬಂಧ ಮುಂದುವರೆಸುತ್ತಲೇ ಇರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.