ಚನ್ನಪಟ್ಟಣ: 'ಪರಿಸರ ಪೂಜಾರಿ' ಎಂದೆ ಪ್ರಸಿದ್ಧಿಯಾಗಿದ್ದ ಪರಿಸರವಾದಿ ಹಾಗೂ ಕವಿ ಭೂಹಳ್ಳಿ ಪುಟ್ಟಸ್ವಾಮಿ ದುರಂತ ಅಂತ್ಯದೊಂದಿಗೆ ಪರಿಸರ ಕಾಳಜಿಯ ಕೊಂಡಿಯೊಂದು ಕಳಚಿದಂತಾಗಿದೆ.
ತಾಲ್ಲೂಕಿನ ಭೂಹಳ್ಳಿ ಗ್ರಾಮದ ಪುಟ್ಟಸ್ವಾಮಿ ತಮ್ಮ ಸಂಬಳವನ್ನು ಪರಿಸರ ಸಂರಕ್ಷಣೆಗಾಗಿ ಮೀಸಲಿಟ್ಟು ಸಾವಿರಾರು ಸಸಿಗಳನ್ನು ನೆಟ್ಟರು. ಸಾಲು, ಸಾಲು ವನಗಳನ್ನು ನಿರ್ಮಿಸಿದರು. ನಿವೃತ್ತಿಯ ನಂತರ ದೊರೆಯುತ್ತಿದ್ದ ಹಣವನ್ನೂ ಪರಿಸರಕ್ಕಾಗಿ ವಿನಿಯೋಗಿಸುತ್ತಾ ಸಾರ್ಥಕ ಜೀವನ ನಡೆಸುತ್ತಿದ್ದರು.
ಸರ್ಕಾರಿ ಕಾಲೇಜಿನ ಉಪನ್ಯಾಸಕರಾಗಿದ್ದ ಪುಟ್ಟಸ್ವಾಮಿ 2007ರಲ್ಲಿ ಮೊದಲು ತಮ್ಮ ಗ್ರಾಮದಲ್ಲಿ ಒತ್ತುವರಿಗೆ ಒಳಗಾಗುತ್ತಿದ್ದ ಮೂರು ಎಕರೆ ಬರಡು ಭೂಮಿಯಲ್ಲಿ 'ಕವಿ ವನ' ನಿರ್ಮಿಸಿದರು. ನೂರಾರು ಬಗೆಯ, ಹಲವು ದೇಶ, ರಾಜ್ಯಗಳ ಗಿಡ,ಮರಗಳನ್ನು ಬೆಳೆದು ಬರಡಾಗಿದ್ದ ಪ್ರದೇಶವನ್ನು ಅರಣ್ಯವನ್ನಾಗಿಸಿದ್ದರು. ನಂತರ ಇದೇ ವನದಲ್ಲಿ 11 ಅಡಿ ಎತ್ತರದ 'ಬುದ್ದೇಶ್ವರ' ಪ್ರತಿಮೆ ನಿರ್ಮಾಣ ಮಾಡಿ ಬುದ್ದೇಶ್ವರ ವನ ಎಂದು ನಾಮಕರಣ ಮಾಡಿದ್ದರು. ಅಂದು ಆರಂಭಗೊಂಡ ವನಗಳ ನಿರ್ಮಾಣ ಕಾರ್ಯ ನಿರಂತರವಾಗಿ ಸಾಗಿತ್ತು.
ಚನ್ನಪಟ್ಟಣದ ಮಹದೇಶ್ವರ ದೇವಾಲಯದ ಆವರಣದಲ್ಲಿ ಪಾಳು ಬಿದ್ದಿದ್ದ ಮೂರು ಎಕರೆ ಸರ್ಕಾರಿ ಜಾಗದಲ್ಲಿ ಜೀವೇಶ್ವರ ವನ, ಅದರ ಪಕ್ಕದಲ್ಲಿ ವಿದ್ಯಾರ್ಥಿ ವನ, ಸುಣ್ಣಘಟ್ಟ ಬಳಿಯ ಕಣ್ವ ಬಡಾವಣೆಯಲ್ಲಿ ಪುಲಿಕೇಶಿ ವನ ಹಾಗೂ ನೃಪತುಂಗ ವನ, ನಗರದ ರಾಜಾಕೆಂಪೇಗೌಡ ಬಡಾವಣೆಯಲ್ಲಿ ಕನ್ನಡ ವನ, ನಗರಸಭಾ ಬಡಾವಣೆಯಲ್ಲಿ (ಸಿಎಂಸಿ ಲೇಔಟ್) ಪಂಪವನ, ಎಲೆಕೇರಿಯಲ್ಲಿ ಹೋಯ್ಸಳ ವನ, ಲಕ್ಮ್ಮೀಪುರದಲ್ಲಿ ಕದಂಬವನ ನಿರ್ಮಾಣ ಮಾಡಿ ನೂರಾರು ಗಿಡಗಳನ್ನು ಬೆಳಸಿ ಪೋಷಿಸುತ್ತಿದ್ದರು.
ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ವೇಳೆ ಕಾಲೇಜು ಆವರಣದಲ್ಲಿ ಎರಡು ಸಾವಿರ ಗಿಡಗಳನ್ನು ಬೆಳೆಸಿದ್ದರು. ತಾಲ್ಲೂಕಿನ ಚಕ್ಕೆರೆ ಸರ್ಕಾರಿ ಕಾಲೇಜು ಆವರಣದಲ್ಲಿ 400 ಮರ, ಹುಣಸೂರು ಬಾಲಕರ ಕಾಲೇಜು ಆವರಣ ಹಾಗೂ ಕಲಬುರಗಿ ಜಿಲ್ಲೆಯ ರಟಕಲ್ ಕಾಲೇಜು ಆವರಣ ಸೇರಿದಂತೆ ತಾವು ಸೇವೆ ಸಲ್ಲಿಸಿದ ಕಾಲೇಜಿನ ಆವರಣಗಳಲ್ಲಿ ಸ್ವಂತ ಮಕ್ಕಳಂತೆ ಮರಗಳನ್ನು ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಪರಿಸರ ಪ್ರೀತಿಯ ಜತೆಗೆ ಕವಿಯಾಗಿ 12 ಕ್ಕೂ ಹೆಚ್ಚು ಸಾಹಿತ್ಯ ಕೃತಿ ರಚಿಸಿದ್ದಾರೆ. ಕೆಲಸ ಮಾಡಿದ ಕಡೆಯಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಿದ್ದಾರೆ. ಅವರ ಈ ಪರಿಸರ ಕಾಳಜಿ ಮೆಚ್ಚಿ ಹಲವಾರು ಸಂಘ,ಸಂಸ್ಥೆಗಳು ಪ್ರಶಸ್ತಿ ನೀಡಿ, ಸನ್ಮಾನ ಮಾಡಿ ಗೌರವಿಸಿದ್ದವು. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಹ ಅವರನ್ನು ಅರಸಿ ಬಂದಿದ್ದವು.
‘2007 ರಲ್ಲಿ ನಿರ್ಮಿಸಿದ ಕವಿವನದಿಂದ ಇಲ್ಲಿಯವೆರೆಗೆ ಪರಿಸರಕ್ಕಾಗಿ ಸುಮಾರು ₹25 ಲಕ್ಷಕ್ಕೂ ಹೆಚ್ಚು ಸ್ವಂತ ಹಣ ಖರ್ಚು ಮಾಡಿದ್ದೇನೆ. ಯಾರ ಬಳಿಯೂ ಕೈಚಾಚದೆ ನನ್ನ ಸ್ವಂತ ಖರ್ಚಿನಲ್ಲಿ ಪರಿಸರ ಕಾಳಜಿ ತೋರಿರುವ ತೃಪ್ತಿ ನನಗಿದೆ. ಹದಿನೇಳು ವರ್ಷಗಳ ಹಿಂದೆ ನಾನು ನೆಟ್ಟಿದ್ದ ಸಸಿಗಳು ಈಗ ನೆರಳು ನೀಡುವ ಮರಗಳಾಗಿವೆ. ವನಗಳು ಸಣ್ಣ ಕಾಡುಗಳಾಗಿವೆ. ಅವುಗಳ ಮಧ್ಯೆ ಬದುಕು ಸಾಗಿಸುವುದೇ ನನ್ನ ಜೀವನದ ಗುರಿ’ ಎಂದು ಬದುಕಿದ್ದಾಗ ಪುಟ್ಟಸ್ವಾಮಿ ಹೇಳುತ್ತಿದ್ದರು. ಇಂತಹ ಪರಿಸರ ಕಾಳಜಿಯುಳ್ಳ ಮನಸ್ಸೊಂದು ಮರೆಯಾಗಿದೆ. ಅವರ ನಿರ್ಗಮನದೊಂದಿಗೆ ತಾಲ್ಲೂಕಿನಲ್ಲಿ ಪರಿಸರ ಪರವಾದ ಧ್ವನಿಯೊಂದು ಶಾಶ್ವತವಾಗಿ ಮೌನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.