2013ರಲ್ಲಿ ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಕೃಷಿ ಕಾರ್ಯಾಗಾರಕ್ಕೆ ಆಗಮಿಸಿದ್ದ ಎಂ.ಎಸ್. ಸ್ವಾಮಿನಾಥನ್ ಅವರು ಪ್ರಜಾವಾಣಿ ಜೊತೆ ಮಾತನಾಡಿದ್ದರು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
'ದೇಶದ ರಕ್ಷಣೆಗೆ ಬೇಕಿರುವುದು ಆಹಾರ ಧಾನ್ಯವೇ ಹೊರತು ಬಂದೂಕುಗಳಲ್ಲ' - ಜಗತ್ತು ಕಂಡ ಶ್ರೇಷ್ಠ ಕೃಷಿ ವಿಜ್ಞಾನಿ ಮೊಂಕೊಂಬು ಸಾಂಬಶಿವನ್ (ಎಂ.ಎಸ್.) ಸ್ವಾಮಿನಾಥನ್ ಅವರ ಸ್ಪಷ್ಟವಾದ ಅಭಿಪ್ರಾಯ ಇದು. ತಮಿಳುನಾಡಿನ ಕುಗ್ರಾಮದಲ್ಲಿ ಜನಿಸಿದ ಈ ವಾಮನ, ಈಗ ಜಗತ್ತಿನ ಎತ್ತರಕ್ಕೆ ಬೆಳೆದು ನಿಂತ ತ್ರಿವಿಕ್ರಮ. 87ರ ಈ ಇಳಿ ವಯಸ್ಸಿನಲ್ಲೂ ಪಾದರಸದಂತೆ ಚಲನಶೀಲ ಗುಣವನ್ನು ಉಳಿಸಿಕೊಂಡಿರುವ ಅವರು ಎಡೆಬಿಡದೆ ದೇಶ ಸುತ್ತುತ್ತಾರೆ. ಚೆನ್ನೈನಲ್ಲಿ ಎಂ.ಎಸ್. ಸ್ವಾಮಿನಾಥನ್ ಸಂಶೋಧನಾ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ಕೃಷಿ ಕ್ಷೇತ್ರದ ಬೆಳವಣಿಗೆಗೆ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಸಭೆ ಸದಸ್ಯರಾಗಿ ಕೃಷಿ ನೀತಿ ರೂಪಿಸುವಲ್ಲಿ ತಮ್ಮದೇ ಛಾಪು ಒತ್ತುತ್ತಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಅಂತರರಾಷ್ಟ್ರೀಯ ಕೃಷಿ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, `ಪ್ರಜಾವಾಣಿ' ಜೊತೆ ಮಾತನಾಡಿದರು. ಹಸಿರು ಕ್ರಾಂತಿಯಿಂದ ಹಿಡಿದು ಆಹಾರ ಹಕ್ಕು ಕಾಯ್ದೆವರೆಗೆ ಆ ಮಾತಿನಲ್ಲಿ ಸಮೃದ್ಧ ಫಸಲಿತ್ತು. ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಹಸಿರು ಕ್ರಾಂತಿಯ ಹಿನ್ನೆಲೆಯನ್ನು ವಿವರಿಸುವಿರಾ?
ಬಂಗಾಳದಲ್ಲಿ 70 ವರ್ಷಗಳ ಹಿಂದೆ ಭೀಕರ ಬರಗಾಲ. ಲಕ್ಷಾಂತರ ಮಂದಿ ಸತ್ತರು. ನೌಕಾಲಿಯ ಸಾವು-ನೋವಿನ ಬೀದಿಯಲ್ಲಿ ಸುತ್ತಾಡಿದ ಮಹಾತ್ಮ ಗಾಂಧಿ, `ಹಸಿವೆಗೆ ದೇವರ ಆಹಾರ' ಎಂದು ಕಣ್ಣೀರು ಹಾಕಿದ್ದರು. ನಂತರದ ದಿನಗಳಲ್ಲೂ ಬರಗಾಲ ಬೇತಾಳದಂತೆ ದೇಶದ ಹೆಗಲೇರಿತು. ಅದು 1960ರ ದಶಕ. ಅಮೆರಿಕದಲ್ಲಿ ವಿವಿಧ ದೇಶಗಳ ಸ್ಥಿತಿ-ಗತಿ ಅಧ್ಯಯನ ಮಾಡಿ ಸಮೀಕ್ಷೆಯೊಂದನ್ನು ಪ್ರಕಟಿಸಲಾಗಿತ್ತು. ಅದರಲ್ಲಿ `ಎಷ್ಟೇ ಆಹಾರ ಕಳುಹಿಸಿದರೂ ಭಾರತವನ್ನು ಬದುಕಿಸಲು ಅಸಾಧ್ಯ' ಎಂಬ ಉಲ್ಲೇಖವಿತ್ತು. ಇಂತಹ ಸನ್ನಿವೇಶದಲ್ಲಿ ಮೊಳಕೆಯೊಡೆದಿದ್ದು ಹಸಿರು ಕ್ರಾಂತಿ.
ಅತ್ಯಧಿಕ ಇಳುವರಿ ತಂದುಕೊಡುವ ಗೋಧಿ ತಳಿಗಳನ್ನು ನಾವು ಪರಿಚಯಿಸಿದೆವು. ಚಿಕ್ಕ ಹೊಲದಲ್ಲಿ ಹೆಚ್ಚು ಬೆಳೆಯಬೇಕು ಎನ್ನುವ ಹಂಬಲ ನಮ್ಮದಾಗಿತ್ತು. 1964ರಿಂದ 1968ರ ಅವಧಿಯಲ್ಲಿ ನಮ್ಮ ರೈತರು ಭಾರಿ ಪ್ರಮಾಣದ ಗೋಧಿ ಬೆಳೆದರು. ಹಿಂದಿನ 4,000 ವರ್ಷಗಳಲ್ಲಿ ಉತ್ಪಾದಿಸಲು ಆಗದಿರುವುದನ್ನು ಕೇವಲ ನಾಲ್ಕೇ ವರ್ಷಗಳಲ್ಲಿ ಬೆಳೆದು ತೋರಿಸಿದರು.
ವೈಜ್ಞಾನಿಕ ಕೌಶಲ, ರಾಜಕೀಯ ಇಚ್ಛಾಶಕ್ತಿ ಮತ್ತು ರೈತರ ಶ್ರಮ ಎಲ್ಲವೂ ಮೇಳೈಸಿದ ಕ್ಷಣಗಳು ಅವಾಗಿದ್ದವು. ಹಾಗೆಯೇ ಕೆಲವು ಪರಿಸರವಾದಿಗಳಿಂದ ವಿರೋಧ ಎದುರಾಗಿದ್ದನ್ನೂ ನಾನು ಮರೆತಿಲ್ಲ..
ಭಾರತದ ಕೃಷಿ ಎದುರಿಸುತ್ತಿರುವ ಸಮಸ್ಯೆಗಳು ಯಾವುವು?
ಭಾರತದಲ್ಲಿ ಈಗಲೂ ಕೃಷಿಯೇ ಬಹುಪಾಲು ಜನರ ಉದ್ಯೋಗವಾಗಿದೆ. ಸಣ್ಣ, ಸಣ್ಣ ಹಿಡುವಳಿದಾರರೇ ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರೆ. ಸುಸ್ಥಿರ ಕೃಷಿಗೆ ಇದೊಂದು ದೊಡ್ಡ ಸವಾಲು. ದೇಶದಲ್ಲಿ ಮಳೆಯ ಮಾರುತಗಳು ನಡೆಸುವ ಚೆಲ್ಲಾಟ ಎಲ್ಲರಿಗೂ ತಿಳಿದೇ ಇದೆ. ಆದ್ದರಿಂದಲೇ ಬಾಕ್ರಾ ನಂಗಲ್ ಕಂಡು ಅಣೆಕಟ್ಟೆಗಳೇ ನಮ್ಮ ಆಧುನಿಕ ದೇವಾಲಯಗಳು ಎನ್ನುವ ಉದ್ಗಾರ ತೆಗೆದರು ಜವಾಹರಲಾಲ್ ನೆಹರು.
ಅನಕ್ಷರತೆ ಪ್ರಮಾಣ ಇನ್ನೂ ವ್ಯಾಪಕವಾಗಿದ್ದು, ಜಗತ್ತಿನ ಕೃಷಿ ಕ್ಷೇತ್ರದ ಆಗು-ಹೋಗುಗಳ ಮಾಹಿತಿ ಅವರಲ್ಲಿಲ್ಲ. ಕೃಷಿ ಸಂಶೋಧನೆಗಳ ಲಾಭವೂ ಮೂಲವನ್ನು ತಲುಪುತ್ತಿಲ್ಲ. ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲ. ಅದೇ ಹೈನುಗಾರಿಕೆಯಲ್ಲಿ ಉತ್ಪನ್ನಕ್ಕೆ ಮಾರುಕಟ್ಟೆಯಲ್ಲಿ ಸಿಗುವ ಮೌಲ್ಯದ ಶೇ 80ರಷ್ಟು ಭಾಗ ಉತ್ಪಾದಕರಿಗೆ ಹೋಗುತ್ತದೆ. ಉತ್ಪಾದಕ ಕೇಂದ್ರಿತವಾದ ಮಾರುಕಟ್ಟೆ ಸೌಲಭ್ಯ ಕೃಷಿಗೆ ದಕ್ಕಬೇಕು. ಆದರೆ, ನಮ್ಮದು ಓಬಿರಾಯನ ಕಾಲದ ಕೃಷಿ ಉತ್ಪನ್ನ ಮಾರುಕಟ್ಟೆ ಕಾಯ್ದೆ. ಅದರ ಆಮೂಲಾಗ್ರ ಬದಲಾವಣೆ ಆಗಬೇಕು.
ಎಂತಹ ಕೃಷಿ ಇಂದಿನ ಅಗತ್ಯ?
ನಾನು ನಿರಂತರ ಹಸಿರು ಕ್ರಾಂತಿಗೆ ಈಗ ಕರೆ ಕೊಟ್ಟಿದ್ದೇನೆ. ಈ ಕಲ್ಪನೆ ಹಸಿರು ಕ್ರಾಂತಿಗಿಂತ ಭಿನ್ನ. ಆಗ ಧಾನ್ಯ ಕೇಂದ್ರಿತ ಉತ್ಪಾದನೆಗೆ ಒತ್ತು ನೀಡಲಾಗಿತ್ತು. ಸಸ್ಯದ ವಿನ್ಯಾಸದಲ್ಲಿ ಬದಲಾವಣೆ ತಂದಿದ್ದೆವು. ಬೆಳೆಯ ಪದ್ಧತಿಯಲ್ಲಿ ಸುಧಾರಣೆ ಮಾಡಿದ್ದೆವು. ಆಗ ಹಸಿವು ಇಂಗಿಸುವುದೇ ನಮ್ಮ ಮುಂದಿನ ಮುಖ್ಯ ಗುರಿಯಾಗಿತ್ತು. ಪರಿಸರದ ಕಡೆಗೆ ಲಕ್ಷ್ಯ ಕಡಿಮೆ ಆಗಿತ್ತು.
ನಿರಂತರ ಹಸಿರು ಕ್ರಾಂತಿಯಲ್ಲಿ ಪರಿಸರಕ್ಕೆ ಒಂದಿನಿತೂ ಹಾನಿ ಆಗದಂತೆ ಕೃಷಿ ಉತ್ಪಾದನೆ ಹೆಚ್ಚಿಸುವ ಗುರಿ ಇದೆ. ರಸಾಯನಿಕ ಪದಾರ್ಥ ಬಳಸದೆ ಸಾವಯವ ಕೃಷಿಯಲ್ಲಿ ತೊಡಗುವಂತೆ ನಾನು ಶಿಫಾರಸು ಮಾಡುತ್ತೇನೆ. ಸಂಶೋಧಕರು ಪೌಷ್ಟಿಕಾಂಶದ ಸಮಸ್ಯೆಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ಆಹಾರದಲ್ಲಿ ಪೌಷ್ಟಿಕಾಂಶದ ಕೊರತೆ, ಗುಪ್ತ ಹಸಿವು ಮೊದಲಾದ ಸಂಕೀರ್ಣ ಸಂಗತಿಗಳ ಮೇಲೆ ಬೆಳಕು ಚೆಲ್ಲಬೇಕು. ಕೃಷಿಯಲ್ಲಿ ಅದಕ್ಕೆ ಪರಿಹಾರ ಹುಡುಕಬೇಕು. ಪೌಷ್ಟಿಕಾಂಶ ಇರುವಂತಹ ಆಹಾರ ಉತ್ಪಾದನೆಯೇ ಕೃಷಿಯ ಗುರಿ ಆಗಬೇಕು. ಕೌಟುಂಬಿಕ ಕೃಷಿ ಪರಿಕಲ್ಪನೆ ಇನ್ನಷ್ಟು ಬೆಳೆಯಬೇಕು. ರೈತರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ.
ಕುಲಾಂತರಿ ತಳಿಗಳ ಬಗೆಗೆ ಏನು ಹೇಳುತ್ತೀರಿ?
ಕುಲಾಂತರಿ (ಬಿ.ಟಿ.) ಹತ್ತಿ ದೇಶದ ತುಂಬಾ ವ್ಯಾಪಿಸಿದ್ದು, ಅತ್ಯಧಿಕ ಇಳುವರಿ ನೀಡುತ್ತಿದೆ. ರೈತರೆಲ್ಲ ಅದನ್ನು ಅಪ್ಪಿಕೊಂಡು ಬಿಟ್ಟಿದ್ದಾರೆ. ಕುಲಾಂತರಿ ತಳಿಗಳ ಬಳಕೆಯಲ್ಲಿ ತುಂಬಾ ಎಚ್ಚರಿಕೆ ಅಗತ್ಯ. ಅವುಗಳ ಉಪಯೋಗದ ಮೇಲೆ ಹದ್ದುಗಣ್ಣು ಇಡುವಂತಹ ಸ್ವಾಯತ್ತ ಸಂಸ್ಥೆಯೊಂದು ರಚನೆಯಾಗಬೇಕು. ಅದಕ್ಕೆ ಕುಲಾಂತರಿಗಳ ವಿಷಯವಾಗಿ ನಿರ್ಣಯ ಕೈಗೊಳ್ಳಲು ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.
ಜೀವ ವೈವಿಧ್ಯ ಅಪಾಯದಲ್ಲಿದೆ ಎನಿಸುವುದಿಲ್ಲವೆ?
ಅಂಕೆ ತಪ್ಪಿದ ಅಭಿವೃದ್ಧಿಯಿಂದ ಜಾಗತಿಕ ತಾಪಮಾನ ಏರುತ್ತಿದ್ದು ಜೀವ ಸಂಕುಲವೇ ಅಪಾಯದಲ್ಲಿದೆ. ಜೀವ ವೈವಿಧ್ಯ ಸಂರಕ್ಷಣೆ ಸಂಕೀರ್ಣವಾದ ವಿಷಯ. ಮನುಷ್ಯ ಮತ್ತು ಪ್ರಾಣಿಗಳ ಸಂರಕ್ಷಣೆ ಜೊತೆಗೆ ನಿಸರ್ಗ ಸಂಪತ್ತನ್ನು ಕಾಪಾಡುವ ಹೊಣೆಯನ್ನೂ ಅದು ಒಳಗೊಂಡಿದೆ. ವಿಷ ಪದಾರ್ಥವನ್ನು ಪರಿಸರಕ್ಕೆ ಬಿಡುವ ಕೈಗಾರಿಕೆಗಳಿಗೆ ಅಂಕುಶ ಹಾಕಬೇಕಿದೆ.
ಕೃಷಿ ಕುಟುಂಬದ ಆರ್ಥಿಕ ಪ್ರಗತಿ, ದೇಶದ ಆಹಾರ ಭದ್ರತೆ, ಗ್ರಾಹಕನ ಆರೋಗ್ಯ ಹಾಗೂ ಜೀವ ವೈವಿಧ್ಯ ಕಾಪಾಡುವಂತಹ ಕೃಷಿ ತಂತ್ರಜ್ಞಾನ ನಮಗೆ ಬೇಕಿದೆ.
ಕೃಷಿಭೂಮಿ ಬಹು ವೇಗವಾಗಿ ಕಣ್ಮರೆ ಆಗುತ್ತಿದೆಯಲ್ಲ?
ಭೂಮಿ ಸದ್ಬಳಕೆಗೆ ಸಮಗ್ರವಾದ ನೀತಿಯೊಂದರ ಅಗತ್ಯವಿದೆ. ಕೃಷಿ ಕ್ಷೇತ್ರವೊಂದೇ ದೇಶದ ಎಲ್ಲ ಜನರಿಗೆ ಉದ್ಯೋಗ ಕೊಡುವುದಿಲ್ಲ. ಇತರ ಕ್ಷೇತ್ರಗಳ ಬೆಳವಣಿಗೆ ಕೂಡ ಅಷ್ಟೇ ಮುಖ್ಯವಾಗಿದೆ. ಫಲವತ್ತಾದ ಭೂಮಿ ಕೃಷಿಗೆ, ಬರಡು ಭೂಮಿ ಕೈಗಾರಿಕೆಗೆ ಎನ್ನುವುದು ಪ್ರತಿ ರಾಜ್ಯದ ನೀತಿಯಾಗಬೇಕು.
ಕೇಂದ್ರ ಸರ್ಕಾರ ಭೂಸ್ವಾಧೀನಕ್ಕೆ ಸಮಗ್ರವಾದ ಕಾಯ್ದೆ ರೂಪಿಸುತ್ತಿದೆ. ಹಿಂದಿನ ಕಾನೂನುಗಳು ರೈತರ ಪರ ಇರಲಿಲ್ಲ. ಆ ಎಲ್ಲ ನ್ಯೂನತೆಗಳನ್ನು ಈ ಕಾಯ್ದೆಯಲ್ಲಿ ಹೋಗಲಾಡಿಸಲಾಗಿದೆ. ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತನ ಮಾತಿಗೆ ಆದ್ಯತೆ ಸಿಗುವಂತೆ ಹೊಸ ಕಾಯ್ದೆ ಅವಕಾಶ ಒದಗಿಸುತ್ತದೆ.
ರಾಜ್ಯಸಭೆಯಲ್ಲಿ ಮಹಿಳಾ ಕೃಷಿ ಖಾಸಗಿ ವಿಧೇಯಕ ಮಂಡಿಸಿದ್ದೀರಿ. ಅಂತಹ ಜರೂರತ್ತು ಏನು ಕಂಡಿತ್ತು?
ಮಹಿಳಾ ಕೃಷಿಕರ ಅಗತ್ಯಗಳನ್ನು ಪೂರೈಸುವ ಸಲುವಾಗಿ ನಾನು ಈ ವಿಧೇಯಕ ಮಂಡಿಸಿದ್ದೆ. ಕೃಷಿ ವ್ಯವಸ್ಥೆಯಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆಗಳೇ ಬೇರೆ. ಅಂತಹ ಸವಾಲುಗಳಿಂದ ಮಹಿಳೆಯರನ್ನು ರಕ್ಷಿಸಲು, ನಿಸರ್ಗದತ್ತವಾದ ಹಕ್ಕುಗಳನ್ನು ಅವರಿಗೆ ಒದಗಿಸಲು ಈ ರೀತಿ ವ್ಯವಸ್ಥೆ ಬೇಕು.
ಕೇಂದ್ರ ಸರ್ಕಾರ ಆಹಾರ ಹಕ್ಕು ಕಾಯ್ದೆ ತರಲು ಹೊರಟಿದೆ...
ಆಹಾರ ಹಕ್ಕು ರೂಪಿಸುವಲ್ಲಿ ನಾನೂ ಭಾಗಿಯಾಗಿದ್ದೇನೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ 35 ಕೆಜಿ ಆಹಾರ ಧಾನ್ಯ ವಿತರಿಸುವ ಗುರಿ ಇದೆ. ಹವಾಮಾನಕ್ಕೆ ತಕ್ಕಂತೆ ಸಿರಿಧಾನ್ಯ ವಿತರಿಸುವ ಚಿಂತನೆಯೂ ಇದೆ. ಆಹಾರ ಧಾನ್ಯ ಸಂಗ್ರಹಾಗಾರಗಳನ್ನು ಹೆಚ್ಚು ಹೆಚ್ಚಾಗಿ ತೆರೆಯುವುದು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅದರಲ್ಲಿ ಸೇರಿವೆ. ಜನಿಸಿದ ಮಗುವಿನ ಮೊದಲ ಸಾವಿರ ದಿನಗಳು ಅತ್ಯಂತ ಮಹತ್ವದ್ದಾಗಿದ್ದು, ಎಲ್ಲ ರೀತಿಯ ಪೌಷ್ಟಿಕಾಂಶ ಸಿಗುವಂತೆ ನೋಡಿಕೊಳ್ಳುವ ವಿಷಯಕ್ಕೂ ಒತ್ತು ನೀಡಲಾಗಿದೆ. ಆಹಾರದ ಎಲ್ಲ ಸಂಗತಿಗೆ ಸಂಬಂಧಿಸಿದಂತೆ ಮಹಿಳೆಯನ್ನೇ ಮನೆ ಮುಖ್ಯಸ್ಥೆ ಎಂದು ಪರಿಗಣಿಸಲು ಕಾಯ್ದೆಯಲ್ಲಿ ನಿಯಮ ರೂಪಿಸಲಾಗಿದೆ. ಶೇ 40 ರಷ್ಟು ಮಕ್ಕಳಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಹಸಿವು ಸೂಚ್ಯಂಕದಲ್ಲಿ ಭಾರತ 67ನೇ ಸ್ಥಾನದಲ್ಲಿದೆ. ಕಡಿಮೆ ತೂಕದ ಕೂಸುಗಳ ಜನನದ ಪ್ರಮಾಣ ಶೇ 21ರಷ್ಟಿದೆ ಎನ್ನುವ ಮಾಹಿತಿ ವಿಶ್ವಸಂಸ್ಥೆ ಸಮೀಕ್ಷೆಗಳಲ್ಲಿದೆ. ಅದನ್ನೆಲ್ಲ ಅಳಿಸಿ ಹಾಕುವ ಸಂಕಲ್ಪ ನಮ್ಮದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.