ADVERTISEMENT

ಗಣಿತ ಸಾಧಕನಿಗೆ‘ಫೀಲ್ಡ್ಸ್ ಮೆಡಲ್’

ಎಚ್.ಎಸ್.ಸುಧೀರ
Published 4 ಆಗಸ್ಟ್ 2018, 19:30 IST
Last Updated 4 ಆಗಸ್ಟ್ 2018, 19:30 IST
ಅಕ್ಷಯ್ ವೆಂಕಟೇಶ್
ಅಕ್ಷಯ್ ವೆಂಕಟೇಶ್    

ಗಣಿತಶಾಸ್ತ್ರದ ನೊಬೆಲ್ ಪ್ರಶಸ್ತಿ ಎಂದೇ ಕರೆಯಲಾಗುವ ‘ಫೀಲ್ಡ್ಸ್ ಮೆಡಲ್’ ಗೌರವವನ್ನು ಈ ಬಾರಿ ನಾಲ್ವರಿಗೆ ನೀಡಲಾಗಿದೆ. ಅವರಲ್ಲಿ ಭಾರತೀಯ ಮೂಲದ ಅಕ್ಷಯ್ ವೆಂಕಟೇಶ್ ಕೂಡ ಒಬ್ಬರು.

ಆಸ್ಟ್ರೇಲಿಯಾ ದೇಶದ ಪೌರತ್ವ ಹೊಂದಿರುವ, ಭಾರತ ಮೂಲದ ಗಣಿತಶಾಸ್ತ್ರಜ್ಞ ಅಕ್ಷಯ್ ಅವರಿಗೆ ರಿಯೊ- ಡಿ- ಜನೈರೋನಲ್ಲಿನ ನಡೆದ ಗಣಿತಶಾಸ್ತ್ರಜ್ಞರ ಇಂಟರ್‌ನ್ಯಾಷನಲ್ ಕಾಂಗ್ರೆಸ್‌ನಲ್ಲಿ ಕಳೆದ ವಾರ ಈ ಗೌರವವನ್ನು ಪ್ರದಾನ ಮಾಡಲಾಯಿತು.

ಇವರಿಗೆ ನೀಡಿದ ಪ್ರಶಸ್ತಿಪತ್ರದಲ್ಲಿ ‘ಗಣಿತಶಾಸ್ತ್ರದಲ್ಲಿನ ಅಸಾಧಾರಣವಾದ ವಿಶಾಲ ವ್ಯಾಪ್ತಿಯ ವಿಷಯಗಳಿಗೆ ಆಳವಾದ ಕೊಡುಗೆಗಳು ಮತ್ತು ಅವರ ಗಮನಾರ್ಹವಾದ ದೂರಗಾಮಿ ಕಲ್ಪನೆಗಳು...’ ಅನನ್ಯವಾದವು ಎಂದು ವಿಶ್ಲೇಷಿಸಲಾಗಿದೆ. ಅಕ್ಷಯ್‌ ಅವರು ಅಂಕಗಣಿತದ ವಸ್ತುಗಳ ಸಮೀಕರಣದಂತಹ ಕ್ಷೇತ್ರದಲ್ಲಿ ದೀರ್ಘಕಾಲೀನ ಸಮಸ್ಯೆಗಳನ್ನು ಪರಿಹರಿಸಿದ್ದಾರೆ.

ADVERTISEMENT

ಕೇಂಬ್ರಿಜ್‌ ಯುನಿವರ್ಸಿಟಿಯ ಪ್ರಾಧ್ಯಾಪಕ, ಇರಾನಿಯನ್ ಕುರ್ದಿಶ್ ಮೂಲದ ಕೌಶರ್‌ ಬರ್ಕರ್, ಜರ್ಮನಿಯ ಬಾನ್ ವಿಶ್ವವಿದ್ಯಾಲಯದ ಪೀಟರ್ ಶಾಲ್ಜ್‌ ಮತ್ತು ಜ್ಯೂರಿಚ್‌ನಲ್ಲಿರುವ ಇಟಾಲಿಯನ್ ಗಣಿತಶಾಸ್ತ್ರಜ್ಞ ಅಲೆಸ್ಸೋ ಫಿಗಾಲ್ಲಿ ಅವರು ಅಕ್ಷಯ್‌ ಅವರ ಜೊತೆಯಲ್ಲಿ ಫೀಲ್ಡ್ಸ್ ಮೆಡಲ್‌ ಪಡೆದ ಇತರ ಮೂವರು ಗಣಿತಶಾಸ್ತ್ರಜ್ಞರು.

ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಅಂತರರಾಷ್ಟ್ರೀಯ ಗಣಿತಶಾಸ್ತ್ರಜ್ಞರ ಸಮ್ಮೇಳನದಲ್ಲಿ, ಗಣಿತ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದವರಿಗೆ ‘ಫೀಲ್ಡ್ಸ್ ಮೆಡಲ್’ ಅನ್ನು ನೀಡಲಾಗುತ್ತದೆ. 40 ವರ್ಷದೊಳಗಿನ, ಅತ್ಯಂತ ಭರವಸೆಯ ಗಣಿತಜ್ಞರನ್ನೇ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗುತ್ತದೆ. 2018ರ ಗಣಿತಶಾಸ್ತ್ರಜ್ಞರ ಅಂತರರಾಷ್ಟ್ರೀಯ ಸಮ್ಮೇಳನವು ಆಗಸ್ಟ್ 1 ರಂದು ಬ್ರೆಜಿಲ್‌ನ ರಿಯೊ– ಡಿ– ಜನೈರೊದಲ್ಲಿ ನಡೆಯಿತು.

ಕೆನಡಾದ ಗಣಿತಜ್ಞ ಜಾನ್ ಚಾರ್ಲ್ಸ್ ಫೀಲ್ಡ್ಸ್‌ ಅವರ ಕೋರಿಕೆಯ ಮೇರೆಗೆ 1932ರಲ್ಲಿ ಟೊರೊಂಟೊದಲ್ಲಿ ನಡೆದ ಗಣಿತ ಕಾಂಗ್ರೆಸ್‌ನಲ್ಲಿ ಈ ಬಹುಮಾನವನ್ನು ನೀಡಲು ಪ್ರಾರಂಭಿಸಲಾಯಿತು. ಫೀಲ್ಡ್ಸ್ ಮೆಡಲ್ ಕಮಿಟಿಯನ್ನು ಇಂಟರ್‌ನ್ಯಾಷನಲ್ ಮ್ಯಾಥಮೆಟಿಕಲ್ ಯೂನಿಯನ್‌ (ಐಎಂಯು) ಕಾರ್ಯನಿರ್ವಾಹಕ ಸಮಿತಿಯಿಂದ ಆಯ್ಕೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಐಎಂಯು ಅಧ್ಯಕ್ಷರೇ ಈ ಸಮಿತಿಯ ನೇತೃತ್ವವನ್ನು ಸಹ ವಹಿಸುತ್ತಾರೆ. ಪ್ರಶಸ್ತಿಯು 15,000 ಕೆನಡಿಯನ್‌ ಡಾಲರ್ (ಸುಮಾರು ₹ 7.90ಲಕ್ಷ) ನಗದು ಬಹುಮಾನವನ್ನು ಹೊಂದಿರುತ್ತದೆ. ನಾಲ್ಕು ವರ್ಷಗಳಿಗೊಮ್ಮೆ ಕನಿಷ್ಠ ಇಬ್ಬರು ಅಥವಾ ನಾಲ್ಕು ಗಣಿತಜ್ಞರನ್ನು ಗುರುತಿಸಿ, ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಪ್ರಸ್ತುತದಲ್ಲಿ ಅಕ್ಷಯ್‌ ಅವರು ಪ್ರಿನ್ಸ್‌ಟನ್, ನ್ಯೂಜರ್ಸಿಯಲ್ಲಿರುವ ‘ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್‌ ಸ್ಟಡಿ’ಯಲ್ಲಿ (ಐಎಎಸ್) ಸಂಶೋಧನೆ ಮುಂದುವರಿಸಿದ್ದಾರೆ. ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಿಂದ ಒಂದು ವರ್ಷದ ಕಾಲ ರಜೆ ಪಡೆದಿದ್ದ ಅಕ್ಷಯ್‌ ಆಗಾಗ ಐಎಎಸ್‌ಗೆ ಭೇಟಿ ನೀಡುತ್ತಿದ್ದರು. ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಅವರು ಇನ್‌ಸ್ಟಿಟ್ಯೂಟ್‌ನಲ್ಲಿ ಶಾಶ್ವತ ಬೋಧಕರಾಗಿ ಸೇರಿಕೊಳ್ಳಲಿದ್ದಾರೆ. ಈ ಸಂಸ್ಥೆಯಲ್ಲಿ ಈ ಹಿಂದೆ ಆಲ್ಬರ್ಟ್ ಐನ್‌ಸ್ಟೀನ್, ಕರ್ಟ್ ಗೋಡೆಲ್ ಮಾತ್ರವಲ್ಲದೆ ಫೀಲ್ಡ್ಸ್ ಮೆಡಲ್‌ ಪಡೆದ ಹಲವರು ಸಂಶೋಧನೆ ನಡೆಸಿದ್ದಾರೆ.

ಅಕ್ಷಯ್‌ (36) ಜನಿಸಿದ್ದು ನಮ್ಮ ರಾಜಧಾನಿ ದೆಹಲಿಯಲ್ಲಿ. ಅವರು ಎರಡು ವರ್ಷದವರಾಗಿದ್ದಾಗ ಅವರ ಪೋಷಕರೊಂದಿಗೆ ಆಸ್ಟ್ರೇಲಿಯಾದ ಪರ್ತ್‌ಗೆ ತೆರಳಿದ್ದರು. ಚಿಕ್ಕ ವಯಸ್ಸಿನಲ್ಲೇ ಅವರು ‘ಚೈಲ್ಡ್ ಪ್ರಾಡಿಜಿ’ ಎಂದೂ ಗುರುತಿಸಿಕೊಂಡಿದ್ದರು.

ಹೈಸ್ಕೂಲ್ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಅಂತರರಾಷ್ಟ್ರೀಯ ಸ್ಪರ್ಧೆಗಳಾಗಿರುವ ಭೌತಶಾಸ್ತ್ರ ಮತ್ತು ಗಣಿತ ಒಲಿಂಪಿಯಾಡ್‌ ಭಾಗವಹಿಸಿದ್ದ ಅಕ್ಷಯ್‌, ಕ್ರಮವಾಗಿ 11 ಮತ್ತು 12 ನೇ ವಯಸ್ಸಿನಲ್ಲಿ ಎರಡು ಪದಕಗಳನ್ನು ಗೆದ್ದಿದ್ದರು. ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಮುಗಿಸಿ, 13ನೇ ವಯಸ್ಸಿನಲ್ಲಿ ಪಶ್ಚಿಮ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯಕ್ಕೆ ತೆರಳಿದರು. 1997ರಲ್ಲಿ ತಮ್ಮ 16ನೇ ವಯಸ್ಸಿನಲ್ಲಿ ಗಣಿತಶಾಸ್ತ್ರದ ಪದವಿಯನ್ನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು.

1998ರಲ್ಲಿ ಪ್ರತಿಷ್ಠಿತ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಅಧ್ಯಯನ ಪ್ರಾರಂಭಿಸಿ 2002ರಲ್ಲಿ , ತಮ್ಮ 20ನೇ ವಯಸ್ಸಿನಲ್ಲಿ ಪಿ.ಎಚ್‌ಡಿ ಪದವಿಯನ್ನು ಪಡೆದರು. ಆನಂತರ ಸಿಎಲ್ಈ ಮೂರ್ ರಿಸರ್ಚ್ ಫೆಲೋ ಆಗಿ ಎಂಐಟಿಯಲ್ಲಿ ಪೋಸ್ಟ್- ಡಾಕ್ಟರಲ್ ಅಧ್ಯಯನ ನಡೆಸಿದರು. ಇದಾದ ನಂತರ ಅಧ್ಯಾಪನ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಅಕ್ಷಯ್‌, ಸದ್ಯ ಸ್ಟ್ಯಾನ್ಫೋರ್ಡ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಅಕ್ಷಯ್‌ ಅವರ ತಾಯಿ ಶ್ವೇತಾ ವೆಂಕಟೇಶ್‌ ಕಂಪ್ಯೂಟರ್‌ ಸೈನ್ಸ್‌ ವಿಷಯದ ಉಪನ್ಯಾಸಕಿ.

ಗಣಿತಶಾಸ್ತ್ರದಲ್ಲೂ ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಹಾರುವುದರಲ್ಲಿ ವೆಂಕಟೇಶ್ ನಿಸ್ಸೀಮರು. ಅವರು ಗಣಿತ ಕ್ಷೇತ್ರಕ್ಕೆ ನೀಡುವ ಕೊಡುಗೆಗಳನ್ನು ಸಂಪೂರ್ಣವಾಗಿ ವಿವರಿಸುವಲ್ಲಿ ಗಣಿತಜ್ಞರೇ ಸೋಲುತ್ತಾರೆ. ಏಕೆಂದರೆ ಸಂಖ್ಯೆ ಸಿದ್ಧಾಂತ, ಅಂಕಗಣಿತದ ರೇಖಾಗಣಿತ, ಟೋಪಾಲಜಿ, ಆಟೋಮಾರ್ಫಿಕ್ ರೂಪಗಳು ಮತ್ತು ಎರ್ಗೋಡಿಕ್ ಸಿದ್ಧಾಂತಗಳ ಬಗ್ಗೆ ವರು ಅತಿ ಹೆಚ್ಚಿನ ಸಂಶೋಧನೆ, ಹಾಗೂ ಕೆಲಸಗಳನ್ನು ಮಾಡಿದ್ದಾರೆ.

ಅಕ್ಷಯ್‌ ಅವರ ಗ್ರಹಣ ಶಕ್ತಿಯೂ ಅಪಾರವಾದುದು. ವೆಸ್ಟರ್ನ್‌ ಆಸ್ಟ್ರೇಲಿಯಾ ಯುನಿವರ್ಸಿಟಿಯ ಗಣಿತದ ನಿವೃತ್ತ ಉಪನ್ಯಾಸಕ ಚಾರ್ಲಿ ಪ್ರೆಗರ್‌ ಆ ಬಗ್ಗೆ ಹೇಳಿಕೊಂಡಿದ್ದಾರೆ. ಅವರ ಮಾತುಗಳು ಹೀಗಿವೆ, ‘ನಾನೊಂದು ದಿನ ನನ್ನ ಕಚೇರಿಯಲ್ಲಿ ಅಕ್ಷಯ್‌ನ ತಾಯಿಯ ಜೊತೆ ಮಾತನಾಡುತ್ತಿದ್ದೆ. ಪಕ್ಕದಲ್ಲೇ ಅಕ್ಷಯ್‌ ಕುಳಿತಿದ್ದ. ನನ್ನ ಕೊಠಡಿಯಲ್ಲಿದ್ದ ಬೋರ್ಡ್‌ ಮೇಲೆ ನನ್ನ ಪಿಎಚ್‌ಡಿ ವಿದ್ಯಾರ್ಥಿಯೊಬ್ಬರುಕೆಲವು ಗಣಿತದ ಸಮಸ್ಯೆಗಳನ್ನು ಬರೆದಿಟ್ಟಿದ್ದರು. ಅಕ್ಷಯ್‌ ಅದನ್ನು ಓದುತ್ತಿದ್ದ. ಮಾತುಕತೆಯ ಕೊನೆಯಲ್ಲಿ ‘ಆ ಸಮಸ್ಯೆಯನ್ನು ನನಗೆ ವಿವರಿಸುತ್ತೀರಾ’ ಎಂದು ಆತ ಕೇಳಿದ್ದ. ನಾನು ಆತನ ಮನವಿಗೆ ಒಪ್ಪಿ, ಸಮಸ್ಯೆಯನ್ನು ವಿವರಿಸಿದೆ. ಆತ ಅದನ್ನು ಗ್ರಹಿಸಿದ ರೀತಿ ನನ್ನಲ್ಲಿ ಅಚ್ಚರಿ ಮೂಡಿಸಿತು. ಆತನ ಗ್ರಹಣ ಶಕ್ತಿ ಅದ್ಭುತವಾದುದು ಎಂದು ಆ ಕ್ಷಣವೇ ನನಗೆ ಅನ್ನಿಸಿತ್ತು’ ಎಂದು.

ಒಸ್ಟ್ರೋಸ್ಕಿ ಪ್ರಶಸ್ತಿ, ಇನ್ಫೊಸಿಸ್ ಪ್ರಶಸ್ತಿ, ಸಲೆಮ್ ಪ್ರಶಸ್ತಿ, ರಾಮನುಜನ್ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಅಕ್ಷಯ್‌ ಅವರಿಗೆ ಸಂದಿವೆ. ಅಕ್ಷಯ್‌ ಅವರ ಸಾಧನೆಯನ್ನು ಈ ಪ್ರಶಸ್ತಿಗಳು ಸಹ ಸಂಪೂರ್ಣವಾಗಿ ಬಿಡಿಸಿಡಲಾರವು.

ಹಿಂದಿನ ಬಾರಿ ನಡೆದ ಗಣಿತಶಾಸ್ತ್ರಜ್ಞರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತೀಯ ಮೂಲದ ಪ್ರೊ. ಮಂಜುಲ್ ಭಾರ್ಗವ್‌ ಅವರು ‘ಫೀಲ್ಡ್ಸ್ ಮೆಡಲ್’ ಪ್ರಶಸ್ತಿಗೆ ಭಾಜನರಾಗಿದ್ದರು. ಈ ಬಾರಿಯ ಅಧಿವೇಶನದಲ್ಲಿ ಅಕ್ಷಯ್‌ ಮುಡಿಗೆ ಫೀಲ್ಡ್ಸ್ ಮೆಡಲ್ ಗರಿ ಏರಿದೆ. ಭಾರತೀಯರಿಗೆ ಇದು ಹೆಮ್ಮೆಯ ವಿಚಾರವೇ ಸರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.