ವಿಶ್ವಪ್ರಸಿದ್ಧ ಆ್ಯಪಲ್ ಸಂಸ್ಥೆಯ ಸಿಇಒ ಟಿಮ್ ಕುಕ್ ಸದ್ಯ ಭಾರತಕ್ಕೆ ಬಂದಿದ್ದಾರೆ. ಆ್ಯಪಲ್‌ನ ಮೊದಲ ಮಳಿಗೆಯನ್ನು ಮುಂಬೈನಲ್ಲಿ ಉದ್ಘಾಟಿಸಿರುವ ಕುಕ್, ನಾಳೆ ದೆಹಲಿಯಲ್ಲಿ ಇನ್ನೊಂದು ಮಳಿಗೆ ಉದ್ಘಾಟಿಸಲಿದ್ದಾರೆ. ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ ಅಗಲಿಕೆಯ ನಂತರ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಬಂದಿರುವ ಟಿಮ್ ಕುಕ್, ಫಾರ್ಚೂನ್ 500 ಕಂಪೆನಿಗಳ ಪೈಕಿ ಜಗತ್ತಿನ ಮೊತ್ತ ಮೊದಲ 'ಸಲಿಂಗಿ ಸಿಇಒ' ಆಗಿದ್ದಾರೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ ಆ್ಯಪಲ್ ಸಂಸ್ಥಾಪಕ ಸ್ಟೀವ್ ಜಾಬ್ಸ್ 2011ರ ಆಗಸ್ಟ್‌ನಲ್ಲಿ ಆ್ಯಪಲ್‌ನ ಸಿಇಒ ಸ್ಥಾನಕ್ಕೆ ರಾಜೀನಾಮೆ ಘೋಷಿಸುತ್ತಾರೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಸ್ಟೀವ್, ಅದೇ ವರ್ಷ ಅಕ್ಟೋಬರ್‌ನಲ್ಲಿ ಇಹಲೋಕ ತ್ಯಜಿಸುತ್ತಾರೆ. ಸ್ಟೀವ್ ಅನುಪಸ್ಥಿತಿಯಲ್ಲಿ ‘ಆ್ಯಪಲ್‘ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದ ಸಿಇಒ ಅಮೆರಿಕದ ಟಿಮ್ ಕುಕ್. ಆಗ ಸ್ಟೀವ್ ಜಾಬ್ ಸ್ಥಾನವನ್ನು ತುಂಬಬಲ್ಲ ಸಮರ್ಥ ನಾಯಕನಾಗಿ ಕಾಣಿಸಿದ್ದು ಈ ಟಿಮ್ ಕುಕ್. ಆದರೂ ಸ್ಟೀವ್ ಜಾಬ್ಸ್ ಅವರ ನೆನಪಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ‘ಸ್ಟೀವ್ ಜಾಬ್ಸ್ ಸ್ಥಾನ ತುಂಬುವಷ್ಟು ಸಮರ್ಥ ನಾನಲ್ಲ. ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ‘ ಎಂದು ನಮ್ರವಾಗಿಯೇ ನುಡಿದಿದ್ದರು ಟಿಮ್ ಕುಕ್.
1960ರ ನವೆಂಬರ್ 1ರಂದು ಅಮೆರಿಕದ ಅಲಬಾಮಾದಲ್ಲಿ ಜನಿಸಿದ ಟಿಮೊಥಿ ಡೊನಾಲ್ಡ್ ಕುಕ್, 1982ರಲ್ಲಿ ಆಬರ್ನ್ ವಿಶ್ವವಿದ್ಯಾಲಯದಿಂದ ಬಿ.ಎಸ್(ಬ್ಯಾಚುಲರ್ ಆಫ್ ಸೈನ್ಸ್) ಪದವಿ ಹಾಗೂ 1988ರಲ್ಲಿ ಡ್ಯೂಕ್ ವಿ.ವಿ.ಯಿಂದ ಎಂಬಿಎ ಪದವಿ ಪಡೆಯುತ್ತಾರೆ. ಟಿಮ್ ತಂದೆ ಡೊನಾಲ್ಡ್ ಅವರು ಬಂದರಿನಲ್ಲಿ ಕೆಲಸ ಮಾಡುತ್ತಿದ್ದರು. ತಾಯಿ ಗೆರಾಲ್ಡಿನ್, ಫಾರ್ಮಸಿಯೊಂದರಲ್ಲಿ ದುಡಿಯುತ್ತಿದ್ದರು.
ಆಬರ್ನ್ ವಿವಿಯಿಂದ ಪದವಿ ಪಡೆದ ನಂತರ ಟಿಮ್, ಅಮೆರಿಕದ ಬಹುರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಾದ ಐಬಿಎಂನಲ್ಲಿ 12ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ಅವರು ಡ್ಯೂಕ್ ವಿವಿಯಲ್ಲಿ ವ್ಯಾಸಂಗ ಮಾಡಿ ಪದವಿಯನ್ನೂ ಪಡೆದರು. ನಂತರ ಅದೇ ಸಂಸ್ಥೆಯಲ್ಲಿ ಮುಖ್ಯ ನಿರ್ವಹಣಾ ಅಧಿಕಾರಿಯಾಗಿ ಕೆಲಸ ಮಾಡಿದ ಟಿಮ್, ತಮ್ಮನ್ನು ಸ್ಟೀವ್ ಜಾಬ್ಸ್ ಆ್ಯಪಲ್ ಸಂಸ್ಥೆಗೆ ಆಹ್ವಾನಿಸುವ ವರೆಗೆ 1997ರಲ್ಲಿ ಆರು ತಿಂಗಳ ಕಾಲ 'ಕಾಂಪ್ಯಾಕ್' ಎನ್ನುವ ಪ್ರಸಿದ್ಧ ಸಂಸ್ಥೆಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು.
1998ರಲ್ಲಿ ಸ್ಟೀವ್ ಜಾಬ್ಸ್ ಅವರನ್ನು ಭೇಟಿಯಾದಾಗ, ಅವರ ಆಹ್ವಾನದಂತೆ ಆ್ಯಪಲ್ ಸಂಸ್ಥೆ ಸೇರುತ್ತಾರೆ ಟಿಮ್. 'ಹಲವರು ನೀನು ಕಾಂಪ್ಯಾಕ್ ಸಂಸ್ಥೆ ಬಿಟ್ಟು ಹೋಗದಿರು ಎಂದು ಸಲಹೆ ನೀಡಿದರು. ಆದರೆ ಜಾಬ್ಸ್ ಅವರೊಂದಿಗೆ ನಡೆದ ಐದು ನಿಮಿಷಗಳ ಸಂದರ್ಶನದಲ್ಲಿ ನಾನು ‘ಆ್ಯಪಲ್‘ ಕಂಪೆನಿ ಸೇರುವ ನಿರ್ಧಾರ ಕೈಗೊಂಡೆ. ಆ್ಯಪಲ್ ನಂತಹ ಸಂಸ್ಥೆಯಲ್ಲಿ ಕೆಲಸ ಮಾಡುವುದು ಬದುಕಿನಲ್ಲಿ ಸಿಗಬಹುದಾದ ಅತ್ಯುತ್ತಮ ಅವಕಾಶ ಎಂದು ನಾನು ಭಾವಿಸಿದ್ದೇನೆ‘ ಎನ್ನುತ್ತಾರೆ ಟಿಮ್ ಕುಕ್.
ನಾನು ಸಲಿಂಗಿ (Gay) ಎಂದು ಘೋಷಿಸಿದ್ದ ಟಿಮ್ ಕುಕ್
ಟಿಮ್ ಕುಕ್ ಸಾರ್ವಜನಿಕವಾಗಿ ತಾನು ‘ಸಲಿಂಗಿ‘ ಎಂದು ತಿಳಿಸಿದ್ದು 2014ರಲ್ಲಿ. 'ಫಾರ್ಚೂನ್' ನ 500 ಕಂಪನಿಗಳ ಪೈಕಿ ಜಗತ್ತಿನ ಮೊತ್ತ ಮೊದಲ ಸಲಿಂಗಿ ಸಿಇಒ ಎಂದು ಅವರನ್ನು ಗುರುತಿಸಲಾಗುತ್ತದೆ. ‘ಗೇ (ಸಲಿಂಗಿ) ಆಗಿರುವುದೇ ನನಗೆ ದೇವರು ಕೊಟ್ಟ ಶ್ರೇಷ್ಠ ಉಡುಗೊರೆ‘ ಎನ್ನುವುದು ಟಿಮ್ ಕುಕ್ ಅವರ ನಂಬಿಕೆ.
ಅಚ್ಚರಿಯ ಸಂಗತಿ ಎಂದರೆ ಟಿಮ್ ಕುಕ್ ಹಾಗೂ ಸ್ಟೀವ್ ಜಾಬ್ಸ್ ಅಪರೂಪದ ಒಂದೇ ರಕ್ತ ಗುಂಪು ಹೊಂದಿದ್ದರು. 2009ರಲ್ಲಿ ಟಿಮ್ ತನ್ನ ಯಕೃತ್ತಿನ ಒಂದು ಭಾಗವನ್ನು ಸ್ಟೀವ್ ಜಾಬ್ಸ್ ಅವರಿಗೆ ನೀಡಲು ಮುಂದಾಗಿದ್ದರು. ಆದರೆ, ಜಾಬ್ಸ್ ಅದನ್ನು ನಿರಾಕರಿಸಿ, ದಯವಿಟ್ಟು ಹಾಗೆ ಮಾಡಬೇಡಿ ಎಂದಿದ್ದರು.
ಟಿಮ್ ಅವರದು ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವ. ಕ್ರೀಡೆ, ವ್ಯಾಯಾಮ ಹೀಗೆ ಜೀವನದ ಪ್ರತಿ ಕ್ಷಣಗಳನ್ನು ಸಂಭ್ರಮದಿಂದ ಕಳೆಯುವ ಟಿಮ್, ಸದ್ಯ ಭಾರತಕ್ಕೆ ಬಂದಿದ್ದು, ದೆಹಲಿಯಲ್ಲಿ ದೊರೆತ ಸತ್ಕಾರಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.