ADVERTISEMENT

ಅನಂತಕೃಷ್ಣ... ಅನಂತ ಕೀರ್ತಿ...

ಡಾ.ಜಿ.ವಿ.ಜೋಶಿ
Published 11 ಅಕ್ಟೋಬರ್ 2020, 19:30 IST
Last Updated 11 ಅಕ್ಟೋಬರ್ 2020, 19:30 IST
ಅನಂತಕೃಷ್ಣ
ಅನಂತಕೃಷ್ಣ   

ಬ್ಯಾಂಕುಗಳ ತೊಟ್ಟಿಲು ಎಂದು ಹೆಸರಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬ್ಯಾಂಕ್ ಆಗಿರುವ, ರಾಜ್ಯದ ಹೆಸರನ್ನೇ ಹೊತ್ತು ಹೆಸರು ಮಾಡಿರುವ ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾಗಿ ಮತ್ತು ಮುಖ್ಯ ಕಾರ್ಯನಿರ್ವಾಹಣಾ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ಕೀರ್ತಿಶೇಷರಾದ ಅನಂತಕೃಷ್ಣರ ನೆನಪು ಅನಂತವಾಗಿ ಉಳಿಯಲಿದೆ. ಅದಮ್ಯ ಆತ್ಮವಿಶ್ವಾಸ, ಪ್ರಭಾವ ಬೀರಬಲ್ಲ ವಾಕ್ ಶಕ್ತಿ, ಸ್ಪಷ್ಟ ನಿಲುವು, ಕಠಿಣ ಪರಿಶ್ರಮ, ಈಗಲೂ ಯುವಕರಿಗೆ ಮಾದರಿಯಾಗಬಲ್ಲ ವಿನಯ ಮತ್ತು ಜನಸಾಮಾನ್ಯರ ಬಗೆಗೆ ಕಳಕಳಿ ಹೊಂದಿದ್ದ ಅವರ ಅಧಿಕಾರಾವಧಿಯಲ್ಲಿ ಕರ್ಣಾಟಕ ಬ್ಯಾಂಕ್ ಅಸಂಖ್ಯಾತ ಗ್ರಾಹಕರ, ಸಂಘ-ಸಂಸ್ಥೆಗಳ ವಿಶ್ವಾಸ ಗಳಿಸುವಂತಾಗಿದ್ದು ದೊಡ್ಡ ಸಾಧನೆಯೇ ಹೌದು.

ಬ್ಯಾಂಕ್ ಖಾಸಗಿ ರಂಗದ್ದಾಗಿದ್ದರೂ,ಅವರ ನೇತೃತ್ವದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯನ್ನು ಬಹಳ ಹಿಂದೆಯೇ ಸಮರ್ಥವಾಗಿ ನಿರ್ವಹಿಸಿ ಸಾಮಾಜಿಕ ಮಹತ್ವವನ್ನು ಗಳಿಸಿಕೊಂಡಿದ್ದರಿಂದ ಈಗ ಅವರು ಜನಮಾನಸದಲ್ಲಿ ಅನಂತವಾಗಿದ್ದಾರೆ. ಎಲ್ಲಾ ದೃಷ್ಟಿಯಿಂದಲೂ ಎತ್ತರದ ವ್ಯಕ್ತಿಯಾಗಿದ್ದ ಅವರ ಅಧಿಕಾರಾವಧಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸುವಲ್ಲಿ, ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಅನುಷ್ಠಾನಕ್ಕೆ ತರುವಲ್ಲಿ ಮತ್ತು ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡುವಲ್ಲಿ ಕರ್ಣಾಟಕ ಬ್ಯಾಂಕ್, ಕರ್ನಾಟಕದ ಒಳಗೂ, ಹೊರಗೂ ಹೆಸರು ಮಾಡಿದ್ದು ದಾಖಲೆಗೆ ಸೇರಿದೆ. ಬ್ಯಾಂಕಿನ ಈಗಿನ ಭವ್ಯ ಪ್ರಧಾನ ಕಚೇರಿ (ಮಂಗಳೂರಿನಲ್ಲಿದೆ) ಅವರ ವ್ಯಕ್ತಿತ್ವಕ್ಕೂ, ಸಾಧನೆಗೂ, ಆ ಬ್ಯಾಂಕ್ ನಡೆದು ಬಂದ ದಾರಿಗೂ ಸಾಕ್ಷಿಯಾಗಿ ಉಳಿಯಲಿದೆ.

ಗಣಿತಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದಿದ್ದ ಅನಂತಕೃಷ್ಣ, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷರಾದ ಮೇಲೆಯೂ ಮಂಗಳೂರು ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಅವರ ಗುರುವೃಂದಕ್ಕೆ ತೋರುತ್ತಿದ್ದ ವಿನಯ ಒಂದು ಮಾದರಿಯಾಗಿ ಉಳಿಯಲಿದೆ. ಅವರ ನಡೆ-ನುಡಿಗಳಲ್ಲಿ ಸ್ಪಷ್ಟತೆ ಇರುತ್ತಿತ್ತು. ಅವರ ಕೆಲಸದಲ್ಲೂ ಸ್ಪಷ್ಟತೆ ಕಾಣುತ್ತಿತ್ತು. ಬ್ಯಾಂಕಿನ ವ್ಯವಹಾರಗಳಲ್ಲೂ ಅವರ ಸ್ಪಷ್ಟ ನಿಲುವು ಪ್ರಭಾವ ಬೀರಿತ್ತು.

ADVERTISEMENT

ವಿಶ್ವವಿದ್ಯಾಲಯದ ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಹಳೆಯ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಅನಂತಕೃಷ್ಣ ಅವರ ಪ್ರಭಾವಿ ಭಾ಼ಷಣಗಳನ್ನು ಈಗಲೂ ನೆನಪಿಸಿಕೊಳ್ಳುತ್ತ ಇರುತ್ತಾರೆ. ಸಂಸ್ಕೃತ ಭಾಷೆಯ ಮೇಲೆ ಅವರಿಗಿದ್ದ ವಿಶೇಷ ಅಭಿಮಾನವನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನ ಆಗಾಗ ಸ್ಮರಿಸುತ್ತಾರೆ.

ಇಂಡಿಯನ್ ಬ್ಯಾಂಕರ್ಸ್ ಕ್ಲಬ್ಬಿನ ಗೌರವ ಕಾರ್ಯದರ್ಶಿಯಾಗಿ, ಮಂಗಳೂರಿನ ಬ್ಯಾಂಕರ್ಸ್ ಕ್ಲಬ್ಬಿನ ಅಧ್ಯಕ್ಷರಾಗಿ ಅವರು ಮಾಡಿದ ಕೆಲಸ ಪ್ರಭಾವಪೂರ್ಣ. 2002ರಲ್ಲಿ ಭಾರತದ ಪಬ್ಲಿಕ್ ರಿಲೇ಼ಷನ್ಸ್ ಸೊಸೈಟಿ ಅವರ ಸಾರ್ವಜನಿಕ ಸಂಪರ್ಕದ ಸಾಧನೆಯನ್ನು ಗುರುತಿಸಿ ವಿಶೇಷ ಪ್ರಶಸ್ತಿ ನೀಡಿ ಗೌರವಿಸಿತ್ತು.

ಕರಾವಳಿ ಕರ್ನಾಟಕದ ಅಭಿವೃದ್ಧಿಯಾದರೆ ಇಡೀ ರಾಜ್ಯಕ್ಕೆ ಅನುಕೂಲ ಎಂದು ಅವರು ಪ್ರತಿಪಾದಿಸುತ್ತಿದ್ದ ರೀತಿ ಅನನ್ಯವಾಗಿತ್ತು. ಕರಾವಳಿ ಪ್ರದೇಶಕ್ಕೆ ಖಾಸಗಿ ಬಂಡವಾಳ ಧಾರಾಳವಾಗಿ ಹರಿದುಬರುವ ಅಗತ್ಯವನ್ನು ಅವರು ಸೆಮಿನಾರ್‌ಗಳಲ್ಲಿ ಸಮರ್ಥವಾಗಿ ಪ್ರತಿಪಾದಿಸುತ್ತಿದ್ದರು. ಅತಿಯಾದ ಪರಿಸರವಾದ ಕರಾವಳಿ ಕರ್ನಾಟಕದ ಪ್ರಗತಿಗೆ ಅಡ್ಡಿಯಾಗಬಾರದೆಂದು ವಾದಿಸುತ್ತಿದ್ದರು. ಬ್ಯಾಂಕಿಂಗ್, ಶಿಕ್ಷಣ ಮತ್ತು ಹೊಟೇಲ್ ಉದ್ಯಮಗಳಲ್ಲಿ ಆದ ಪ್ರಗತಿಯು ಇಡೀ ಕರಾವಳಿ ಪ್ರದೇಶದ ಅಬಿವೃದ್ಧಿಗೆ, ರಾಜ್ಯದ ಪ್ರಗತಿಗೆ ದಾರಿಯಾಗಬೇಕೆಂಬ ಅವರ ಪ್ರಬಲ ವಾದದ ಪ್ರಭಾವ ಅನಂತವಾಗಿ ಉಳಿಯಲಿದೆ.

(ಲೇಖಕ ಮಂಗಳೂರು ವಿಶ್ವವಿದ್ಯಾಲಯ ಅರ್ಥಶಾಸ್ತ್ರ ವಿಭಾಗದ ನಿವೃತ್ತ ಪ್ರೊಫೆಸರ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.