ADVERTISEMENT

ಸಾಮರಸ್ಯದ ಮಂತ್ರ ಪಠಿಸುವ ಅತಿಶ್ರೀಮಂತ

ಘನಶ್ಯಾಮ ಡಿ.ಎಂ.
Published 21 ಜುಲೈ 2018, 19:42 IST
Last Updated 21 ಜುಲೈ 2018, 19:42 IST
ಜೆಫ್ ಬಿಜೋಸ್
ಜೆಫ್ ಬಿಜೋಸ್   

ಅಮೆಜಾನ್ ಗೊತ್ತಿರುವ ಎಲ್ಲರಿಗೂ ಜೆಫ್ ಬಿಜೋಸ್ ಹೆಸರು ಗೊತ್ತಿರಲೇಬೇಕು ಎಂದೇನಿಲ್ಲ. ಈಗಿನ ಕಾಲದ ಬಹುತೇಕ ಸಿಇಒಗಳು ಹಾಗೆಯೇ ಅಲ್ಲವೇ? ಅವರ ಕಂಪನಿಗಳು ಯಾವ್ಯಾವುದೋ ದೇಶಗಳಲ್ಲಿ ದುಡ್ಡು ಮಾಡುತ್ತಿರುತ್ತವೆ. ಆದರೆ ಅವರು ಮಾತ್ರ ಅಪರಿಚಿತರಂತೆಯೇ ಉಳಿದು ಮುಂದೇನು ಮಾಡಬಹುದು, ಕಂಪನಿಯನ್ನು ಹೇಗೆಲ್ಲಾ ಬೆಳೆಸಬಹುದು ಎಂದು ಯೋಚಿಸುತ್ತಿರುತ್ತಾರೆ. ಯಾವಾಗಲಾದರೂ ಒಮ್ಮೆ ದೊಡ್ಡಮಟ್ಟದ ಸದ್ದಾದಾಗ ‘ಯಾರದು’ ಎಂದು ಹುಬ್ಬೇರಿಸಿ ತಡಕಾಡುವಂತೆ ಆಗುತ್ತದೆ.

ದಿನಬಳಕೆಯ ದಿನಸಿ ವಸ್ತುಗಳಿಂದ ದುಬಾರಿ ಎಲೆಕ್ಟ್ರಾನಿಕ್ ಸಾಮಗ್ರಿಗಳವರೆಗೆ ಎಲ್ಲವನ್ನೂ ಮಾರುವ ಆನ್‌ಲೈನ್ ಅಂಗಡಿ ‘ಅಮೆಜಾನ್’ನ ಒಟ್ಟು ಮಾರುಕಟ್ಟೆ ಮೌಲ್ಯ ₹52.83 ಲಕ್ಷ ಕೋಟಿ. ಈ ಕಂಪನಿಯ ಚುಕ್ಕಾಣಿ ಹಿಡಿದ ಸಿಇಒ ಹೆಸರುಜೆಫ್ ಬಿಜೋಸ್. ಜುಲೈ 17ರಂದು ಜೆಫ್‌ ಅವರ ಹೆಸರು ‘ಬ್ಲೂಂಬರ್ಗ್ ಬಿಲೇನಿಯರ್ಸ್‌’ ಪಟ್ಟಿಯಲ್ಲಿ ‘ಆಧುನಿಕ ಇತಿಹಾಸದ ಅತಿಶ್ರೀಮಂತ’ ಎಂಬ ಗೌರವದೊಂದಿಗೆ ದಾಖಲಾಯಿತು. ನಿನ್ನೆಗೆ (ಜುಲೈ 21) ಅವರ ಒಟ್ಟು ಸಂಪತ್ತಿನ ಮೌಲ್ಯ ₹10.13 ಲಕ್ಷ ಕೋಟಿ (149 ಶತಕೋಟಿ ಅಮೆರಿಕನ್ ಡಾಲರ್).

ಇದು ಎಷ್ಟು ದೊಡ್ಡ ಸಂಪತ್ತು ಎಂದು ಸುಲಭವಾಗಿ ಅರ್ಥವಾಗಲು ನಮ್ಮ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಜುಲೈ 5ರಂದು ಮಂಡಿಸಿದ ಬಜೆಟ್‌ನ ಗಾತ್ರವನ್ನು ಒಮ್ಮೆ ನೆನಪಿಸಿಕೊಳ್ಳಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನ ಗಾತ್ರ ₹2.92 ಲಕ್ಷ ಕೋಟಿ. ಅಂದರೆ ಜೆಫ್ ಸುಪರ್ದಿಯಲ್ಲಿರುವ ಸಂಪತ್ತು ಕರ್ನಾಟಕದಂಥ ಮೂರು ರಾಜ್ಯಗಳ ಬಜೆಟ್‌ಗೆ, ಅವನು ಮುನ್ನಡೆಸುತ್ತಿರುವ ‘ಅಮೆಜಾನ್‌’ನ ಸಂಪತ್ತು ಕರ್ನಾಟಕದಂಥ 17 ರಾಜ್ಯಗಳ ಬಜೆಟ್‌ಗೆ ಸಮ!

ADVERTISEMENT

ಒಂದಾನೊಂದು ಕಾಲದಲ್ಲಿ ಅಡಸಾಬಡಸಾ ಡ್ರೆಸ್ ಮಾಡಿಕೊಳ್ಳುತ್ತಿದ್ದ ಸೀದಾಸಾದಾ ಯುವಕ ಜೆಫ್‌ ತಲೆಯಲ್ಲಿ ವ್ಯಾಪಾರದ ಐಡಿಯಾಗಳು ಪುಂಖಾನುಪುಖವಾಗಿ ಓಡಾಡುತ್ತಿದ್ದವು. ತನ್ನ ಪೋಷಕರಿಂದ 3 ಲಕ್ಷ ಡಾಲರ್ ಪಡೆದುಕೊಂಡು ‘ಅಮೆರಿಕದ ಸಿಯಾಟಲ್ ನಗರದ ಗ್ಯಾರೇಜ್ ಒಂದರಲ್ಲಿ ಜುಲೈ 5, 1994ರಂದು ‘ಅಮೆಜಾನ್’ ಹೆಸರಿನ ಆನ್‌ಲೈನ್ ಪುಸ್ತಕ ಮಾರಾಟ ಕಂಪನಿ ಸ್ಥಾಪಿಸಿದ. ತನ್ನ ಕಂಪನಿಯಲ್ಲಿ ಹೂಡಿಕೆ ಮಾಡಲು ಬಂದವರಿಗೆ ‘ಅಮೆಜಾನ್ ದಿವಾಳಿಯಾಗುವ ಸಾಧ್ಯತೆ ಶೇ 70ರಷ್ಟು ಇದೆ’ ಎಂದು ಎಚ್ಚರಿಸುತ್ತಿದ್ದ. ಆದರೆ ಕೇವಲ ಮೂರೇ ವರ್ಷಗಳಲ್ಲಿ (1997) ಅಮೆಜಾನ್‌ನ ಐಪಿಒ ಷೇರು ಮಾರುಕಟ್ಟೆಗೆ ಬಂತು. ಬಿಡುಗಡೆಯಾಯಿತು. 3 ಲಕ್ಷ ಡಾಲರ್ ಬಂಡವಾಳ ಹೂಡಿದ್ದ ಜೆಫ್ ಕೇವಲ ಮೂರೇ ವರ್ಷಗಳಲ್ಲಿ ಬರೋಬ್ಬರಿ 54 ದಶಲಕ್ಷ ಡಾಲರ್ ಗಳಿಸಿದ್ದ.

ಈ ಗೆಲುವಿನ ಸವಿ ಅವರಲ್ಲಿದ್ದ ಮಹತ್ವಾಕಾಂಕ್ಷೆಯನ್ನು ಬಡಿದೆಬ್ಬಿಸಿತು. ಐಪಿಒ ಮಾರಾಟದಿಂದ ಬಂದ ಹಣ ಬಳಸಿ ‘ಅಮೆಜಾನ್‌’ಗೆ ಪೈಪೋಟಿ ನೀಡಬಹುದು ಎನಿಸಿದ ಕಂಪನಿಗಳನ್ನು ಒಂದೊಂದಾಗಿ ಖರೀದಿಸಿದ. ಮ್ಯೂಸಿಕ್ ಮತ್ತು ವಿಡಿಯೊ, ದಿನಬಳಕೆಯ ಉತ್ಪನ್ನಗಳು, ವೆಬ್‌ ಸರ್ವೀಸ್‌ನಲ್ಲಿಯೂ ‘ಅಮೆಜಾನ್’ ಹೆಜ್ಜೆಯೂರಿತು. ಹಾಗೆಂದು ಆತ ನಡೆದ ಹಾದಿಯೇನೂ ಹೂವಿನ ಹಾಸಿಗೆ ಆಗಿರಲಿಲ್ಲ. ಖರ್ಚು ವಿಪರೀತ ಹೆಚ್ಚಾದ ಕಾರಣ 2002ರಲ್ಲಿ ಆರ್ಥಿಕ ಗಂಭೀರ ಸ್ಥಿತಿ ಎದುರಾಯಿತು. ದಿವಾಳಿಯಂಚಿಗೆ ಸಾಗಿದ್ದ ಕಂಪನಿಯನ್ನು ಮತ್ತೆ ಅಭಿವೃದ್ಧಿಪಥದಲ್ಲಿ ಮುನ್ನಡೆಸಲು ಕಠಿಣ ಕ್ರಮ ಅನಿವಾರ್ಯವಾಯಿತು. ವಿವಿಧ ಬ್ಯಾಂಕ್‌ಗಳಿಂದ ₹240 ಕೋಟಿಯಷ್ಟು ಸಾಲ ಪಡೆದುಕೊಂಡು, ಕೆಲ ವಿತರಣಾ ಕೇಂದ್ರಗಳನ್ನು ಮುಚ್ಚಿ, ಶೇ14ರಷ್ಟು ಕಾರ್ಮಿಕರನ್ನು ಮನೆಗೆ ಕಳಿಸಿದ. ಕೇವಲ ಒಂದೇ ವರ್ಷದಲ್ಲಿ ಪರಿಸ್ಥಿತಿ ಬದಲಾಯಿತು. ‘ಅಮೆಜಾನ್’ ₹272 ಕೋಟಿಯಷ್ಟು ಲಾಭ ಘೋಷಿಸಿತು.

ಭಾರತಕ್ಕೆ ಅಮೆಜಾನ್ ಕಾಲಿಟ್ಟಿದ್ದು 2013ರಲ್ಲಿ. ಇಂದು ಇದು ಭಾರತದ ನಂ.1 ಅನ್‌ಲೈನ್ ಅಂಗಡಿಯೂ ಹೌದು. ಈಚೆಗಷ್ಟೇ ಅಮೆಜಾನ್‌ನ ವೆಬ್‌ಸೈಟ್ ಮತ್ತು ಆ್ಯಪ್ ಮೂಲಕ ಭಾರತದ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸಿದ ಜೆಫ್, ‘ದೇಶವ್ಯಾಪಿ ಸೇವೆ ವಿಸ್ತರಿಸುವುದು ನನ್ನ ಕನಸು’ ಎಂದು ಹೇಳಿಕೊಂಡಿದ್ದ.

ಜೆಫ್ ಬಿಜೋಸ್ ಹುಟ್ಟಿದ್ದು ಅಮೆರಿಕದ ನ್ಯೂಮೆಕ್ಸಿಕೊ ನಗರದಲ್ಲಿ (ಜನನ: ಜನವರಿ 12, 1964). ಪ್ರಿನ್‌ಸ್ಟನ್ ವಿ.ವಿ.ಯಿಂದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದ ನಂತರ ವಾಲ್‌ಸ್ಟ್ರೀಟ್‌ನಲ್ಲಿ 1994ರವರೆಗೆ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದ. ಕಾದಂಬರಿಕಾರ್ತಿ ಮೆಕೆಂಜಿ ಅವರನ್ನು 1994ರಲ್ಲಿ ಮದುವೆಯಾದರು. ಈ ದಂಪತಿಗೆ ನಾಲ್ಕು ಮಕ್ಕಳು. ಅದರಲ್ಲಿ ಒಬ್ಬಳು ದತ್ತುಪುತ್ರಿ. ಅಂದಹಾಗೆ 1994 ಜೆಫ್ ಅಮೆಜಾನ್ ಸ್ಥಾಪಿಸಿದ ವರ್ಷವೂ ಹೌದು.

ತನ್ನ ವೈಯಕ್ತಿಕ ಆಸೆ ಮತ್ತು ಅಗತ್ಯಗಳನ್ನು ಉದ್ಯಮ ವಿಸ್ತರಣೆಯ ಸಾಧ್ಯತೆಯಾಗಿ ಬೆಳೆಸುವಲ್ಲಿ ಜೆಫ್ ನಿಷ್ಣಾತ. ಬಾಹ್ಯಾಕಾಶ ಯಾನ ಜೆಫ್ ಕಾಣುತ್ತಿದ್ದ ಕನಸು. ಇದಕ್ಕಾಗಿ ‘ಬ್ಲ್ಯೂ ಒರಿಜಿನ್’ ಹೆಸರಿನ ಕಂಪನಿಯನ್ನು ಆರಂಭಿಸಿದ. 2015ರಲ್ಲಿ ಮೊದಲ ಪರಿಕ್ಷಾರ್ಥ ಹಾರಾಟ ನಡೆಸಿದ ಬ್ಲ್ಯೂ ಓರಿಜಿನ್ ಇದೇ ವರ್ಷ ಮನುಷ್ಯರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯಲು ಸಿದ್ಧತೆ ಮಾಡಿಕೊಂಡಿದೆ. 2007ರಲ್ಲಿ ‘ಕಿಂಡಲ್’ (ಇ–ಬುಕ್ ಸೇವೆ) ಆರಂಭಿಸಿದ್ದು ಮತ್ತು 2013ರಲ್ಲಿ ಪ್ರತಿಷ್ಠಿತ ‘ವಾಷಿಂಗ್‌ಟನ್‌ ಪೋಸ್ಟ್‌’ ದಿನಪತ್ರಿಕೆ ಖರೀದಿಸಿದ್ದು ಜೆಫ್ ತೆಗೆದುಕೊಂಡ ಮಹತ್ವದ ನಿರ್ಧಾರಗಳಲ್ಲಿ ಮುಖ್ಯವಾದವು.

ಜೆಫ್‌ ಅವರ ಯಶಸ್ಸಿಗೆ ಅವರು ಅನುಸರಿಸುವ ನಿರ್ವಹಣಾ ತಂತ್ರಗಳೇ ಮುಖ್ಯಕಾರಣ ಎಂಬ ಮಾತು ಉದ್ಯಮ ವಲಯದಲ್ಲಿ ಚಾಲ್ತಿಯಲ್ಲಿದೆ.

‘ಯಾವುದನ್ನು ಕಳೆದುಕೊಳ್ಳಬಹುದು ಎಂಬ ಪ್ರಶ್ನೆಗೆ ಮೊದಲು ಉತ್ತರ ಕಂಡುಕೊಳ್ಳಬೇಕು ಮತ್ತು ಬೇಗ ದೊಡ್ಡದಾಗಿ ಬೆಳೆಯಬೇಕು ಎಂಬ ಆಶಯವನ್ನು ಎಂದಿಗೂ ಕೈಬಿಡಬಾರದು’ ಎನ್ನುವ ಎರಡು ಅಂಶಗಳು ಅವರ ಬಹುತೇಕ ನಿರ್ಧಾರಗಳನ್ನು ಪ್ರಭಾವಿಸುತ್ತವೆ. ಇದೇ ಕಾರಣಕ್ಕೆ ಆರಂಭದ ದಿನಗಳಲ್ಲಿ ಕಂಪನಿ ಗಳಿಸಿದ ಲಾಭವನ್ನು ಹೂಡಿಕೆದಾರರಿಗೆ ಲಾಭಾಂಶವಾಗಿ ಹಂಚದೆ ಮುಂದಿನ ಯೋಜನೆಗಳನ್ನು ತೊಡಗಿಸುತ್ತಿದ್ದರು.

‘ಕೆಲಸ ಮತ್ತು ವೈಯಕ್ತಿಕ ಬದುಕಿನ ನಡುವೆ ಸಮತೋಲನ ಇರಬಾರದು, ಸಾಮರಸ್ಯ ಇರಬೇಕು’ ಎನ್ನುವುದು ಅವರ ಮತ್ತೊಂದು ಪ್ರಸಿದ್ಧ ನಂಬಿಕೆ. ‘ಕೆಲಸ ಮತ್ತು ವೈಯಕ್ತಿಕ ಬದುಕು ಒಂದು ಬೇಕೆಂದರೆ ಮತ್ತೊಂದನ್ನು ಕಳೆದುಕೊಳ್ಳಬೇಕು ಎನ್ನುವಂತೆ ಇರಬಾರದು. ಎರಡೂ ಒಂದಕ್ಕೊಂದು ಹೊಂದಿಕೊಳ್ಳಬೇಕು’ ಎಂದು ತಮ್ಮ ನಂಬಿಕೆಯನ್ನು ಸಿಬ್ಬಂದಿಗೆ ವಿವರಿಸುತ್ತಿದ್ದರು. ಇದೇ ಕಾರಣಕ್ಕೆ ಇಂದಿಗೂ ‘ಅಮೆಜಾನ್‌’ನ ಯಾವುದೇ ಮಹತ್ವದ ಮೀಟಿಂಗುಗಳು ಬೆಳಿಗ್ಗೆ ಹೊತ್ತು ಬಹಳ ಬೇಗ ಶುರುವಾಗುವುದಿಲ್ಲ. ‘ಸಾಮರಸ್ಯ’ ತತ್ವವನ್ನು ಒಂದು ಮಾರ್ಕೆಟಿಂಗ್ ತಂತ್ರವಾಗಿಯೂ ಬಳಸಿ ಜೆಫ್ ಯಶಸ್ವಿಯಾದರು.

ಬೋರ್ಡ್‌ ಮೀಟಿಂಗ್‌ಗಳನ್ನು ನಿರ್ವಹಿಸುವ ಜೆಫ್‌ ಬಿಜೋಸ್ ಶೈಲಿಯು ಮ್ಯಾನೇಜ್ಮೆಂಟ್‌ ಪುಸ್ತಕಗಳಲ್ಲಿ ಸ್ಥಾನ ಪಡೆದಿದೆ. ಮೀಟಿಂಗುಗಳಿಗೆ ಅನ್ವಯವಾಗುವ ಮೊದಲ ನಿಯಮ ‘ಎರಡು ಪಿಝ್ಝಾ’. ಮಹತ್ವದ ಮೀಟಿಂಗುಗಳಲ್ಲಿ ಎರಡು ಪಿಝ್ಝಾಗಳನ್ನು ಸಮನಾಗಿ ಹಂಚುವಷ್ಟು ಜನರು ಮಾತ್ರ ಇರಬೇಕು ಎನ್ನುವುದು ಇದರ ತತ್ವ. ತನ್ನ ಕಂಪನಿಯ ಹೂಡಿಕೆದಾರರನ್ನು ಅವರು ವರ್ಷದಲ್ಲಿ ಆರು ಗಂಟೆಗಳ ಅವಧಿ ಮಾತ್ರ ಭೇಟಿಯಾಗುತ್ತಾರೆ. ಮೀಟಿಂಗುಗಳಲ್ಲಿ ಕಂಪನಿಯ ಹಿರಿಯ ಸಿಬ್ಬಂದಿ ಪವರ್‌ಪಾಯಿಂಟ್ ಪ್ರೆಸೆಂಟೇಶನ್‌ಗಳ ಬದಲು ಆರು ಪುಟಗಳ ವಿಸ್ತೃತ ವರದಿ ನೀಡಬೇಕು ಎಂದು ಬಯಸುತ್ತಾರೆ.

ತಮ್ಮ ಹೂಡಿಕೆದಾರರಿಗೆ ವರ್ಷಕ್ಕೊಮ್ಮೆ ಪತ್ರ ಬರೆಯುವುದನ್ನು 1998ರಿಂದ ರೂಢಿಸಿಕೊಂಡಿದ್ದಾರೆ. ಇದರಲ್ಲಿ ಪದೇಪದೆ ಐದು ತತ್ವಗಳನ್ನು ಪ್ರಸ್ತಾಪಿಸುತ್ತಾರೆ. ಗ್ರಾಹಕರತ್ತ ಗಮನಕೊಡಿ ಸ್ಪರ್ಧಿಗಳತ್ತ ಅಲ್ಲ, ಮಾರುಕಟ್ಟೆಯಲ್ಲಿ ನಾಯಕರಾಗಿ ಉಳಿಯಲು ರಿಸ್ಕ್ ತೆಗೆದುಕೊಳ್ಳಿ, ಸಿಬ್ಬಂದಿಯ ನೈತಿಕತೆಯನ್ನು ಪ್ರೋತ್ಸಾಹಿಸಿ, ಕಂಪನಿಯ ಸಂಸ್ಕೃತಿ ಬೆಳೆಸಿ ಮತ್ತು ಜನರನ್ನು ಸಬಲರನ್ನಾಗಿಸಲು ಪ್ರಯತ್ನಿಸಿ.

ಬಿಜೋಸ್jeff@amazon.com ಇಮೇಲ್ ಖಾತೆಯನ್ನು ನಿರ್ವಹಿಸುತ್ತಾರೆ. ಅಮೆಜಾನ್‌ನ ಯಾವುದೇ ಗ್ರಾಹಕ ತನ್ನ ದೂರು, ಅಭಿಪ್ರಾಯವನ್ನು ಜೆಫ್‌ಗೆ ಕಳಿಸಬಹುದು. ತನಗೆ ಬರುವ ಎಲ್ಲ ಇಮೇಲ್‌ಗಳಿಗೆ ಜೆಫ್ ಉತ್ತರಿಸುವುದಿಲ್ಲ. ಆದರೆ ಗಮನಿಸುತ್ತಾರೆ. ಅನಿವಾರ್ಯ ಎನಿಸಿದಾಗ ಸಂಬಂಧಿಸಿದ ಅಧಿಕಾರಿಗಳಿಗೆ ಫಾರ್ವಾರ್ಡ್‌ ಮಾಡುತ್ತಾರೆ. ‘ವಾರನ್ ಬಫೆಟ್ (ಬರ್ಕ್‌ಶೈರ್ ಹ್ಯಾತ್‌ವೇ), ಜಮಿ ಡಿಮಾನ್ (ಜೆ.ಪಿ.ಮಾರ್ಗನ್‌ ಚೇಸ್) ಮತ್ತು ಬಾಬ್ ಇಗರ್ (ವಾಲ್ಟ್‌ಡಿಸ್ನಿ) ಅವರ ಪ್ರಭಾವದಿಂದ ನನ್ನ ನಾಯಕತ್ವ ಶೈಲಿ ರೂಪುಗೊಂಡಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಅಮೆರಿಕದ ಮತ್ತೊಂದು ದೈತ್ಯ ಕಂಪನಿ ವಾಲ್‌ಮಾರ್ಟ್‌ ಈಚೆಗಷ್ಟೇ ಭಾರತದ ಫ್ಲಿಪ್‌ಕಾರ್ಟ್‌ ಖರೀದಿಸಿ ಸದ್ದು ಮಾಡಿದೆ. ಈ ಹಿನ್ನೆಲೆಯಲ್ಲಿ ಅಮೆಜಾನ್ ಭಾರತದಲ್ಲಿ ಹೂಡಿಕೆ ಪ್ರಮಾಣ ಹೆಚ್ಚಿಸಲು ಮತ್ತು ಇನ್ನಷ್ಟು ಸ್ಥಳೀಯ ಕಂಪನಿಗಳನ್ನು ಖರೀದಿಸಲು ಒಲವು ತೋರಿದೆ. ಈ ಎಲ್ಲದರ ನಡುವೆ ‘ಅಮೆಜಾನ್‌’ನ ಬಿಗ್‌ಬಾಸ್‌ ಸಂಪತ್ತಿನ ಅಗಾಧ ಗಾತ್ರದಿಂದಲೇ ಸುದ್ದಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.