ADVERTISEMENT

ನುಡಿ ನಮನ | ವೈಚಾರಿಕ ಚಿಂತನೆಯ ಪ್ರೇರಕ ಶಕ್ತಿ

ಪ್ರಜಾವಾಣಿ ವಿಶೇಷ
Published 27 ಮೇ 2023, 1:10 IST
Last Updated 27 ಮೇ 2023, 1:10 IST
   

ಪ್ರೊ.ಪಂಡಿತಾರಾಧ್ಯ,

ಗುರುಗಳಾದ ಜಿ.ಎಚ್.ನಾಯಕರದ್ದು ಸ್ವಾತಂತ್ರ್ಯ ಹೋರಾಟಗಾರರ ಮನೆತನ. ಪಿಯುಸಿಯಿಂದ ಮೈಸೂರಿನಲ್ಲೇ ಓದಿದ ಅವರು, ಇಲ್ಲೇ ಬದುಕು ‌ರೂಪಿಸಿಕೊಂಡಿದ್ದರು. ಮಹಾರಾಜ ಕಾಲೇಜಿನಲ್ಲಿ 1969ರಲ್ಲಿ ನನಗೆ ಮೇಷ್ಟ್ರಾಗಿದ್ದರು. ಅದಕ್ಕಿಂತ ಮುಂಚೆ ಯುವರಾಜ‌ ಕಾಲೇಜಿನಲ್ಲಿದ್ದರು. ಬಳಿಕ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಗೆ ಬಂದರು. ಅವರು ನಮ್ಮ ಮೇಷ್ಟ್ರೆಂಬುದು ಹೆಮ್ಮೆ. ಎಲ್ಲ ರೀತಿಯಲ್ಲೂ ಯೋಚಿಸಲು ಕಲಿಸಿದವರು.

ಮೈಸೂರಿನಲ್ಲಿ ಸಾರ್ವಜನಿಕ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಓದಿದವರು. ಯು.ಆರ್.ಅನಂತಮೂರ್ತಿ ಅವರನ್ನು ಗುರುಗಳು ಎಂದು ಕರೆಯುತ್ತಿದ್ದರು. ಅವರು ಮಹಾರಾಜ ಕಾಲೇಜಿಗೆ ಬಂದಾಗ, ನಮ್ಮದು ಐಚ್ಛಿಕ ಕನ್ನಡ ಕೋರ್ಸ್‌ನ ಮೊದಲ ಬ್ಯಾಚ್‌. ‘ನಮ್ಮ ಮನೆಯ ಹಿರಿಯರು’ ಎಂಬ ಆತ್ಮೀಯತೆ ಮೂಡುವಂತೆ ನಮ್ಮೊಂದಿಗೆ ಇರುತ್ತಿದ್ದರು. ವಿದ್ಯಾರ್ಥಿಗಳೊಂದಿಗೆ ನಿರಂತರವಾದ ಸಂಪರ್ಕವಿತ್ತು.  ಅವರು ಮಾನಸ ಗಂಗೋತ್ರಿಗೆ ಬಂದಾಗ, ನಾನು ಅಧ್ಯಾಪಕನಾಗಿ ಮಂಗಳ ಗಂಗೋತ್ರಿಗೆ ಆಯ್ಕೆಯಾದೆ.

ADVERTISEMENT

ಕಾಲೇಜಿನಲ್ಲಿ ಅವರು ಡಾ.ಬಿ.ಆರ್‌.ಅಂಬೇಡ್ಕರ್ - ಮಹಾತ್ಮ ಗಾಂಧೀಜಿ ಸಂಬಂಧಾಂತರದ ಬಗ್ಗೆ ಹೇಳುತ್ತಿದ್ದರು. ಅಲ್ಲಿವರೆಗೆ ಮೇಷ್ಟ್ರೊಬ್ಬರು ಅಂಥ ವಿಷಯವನ್ನು ಮಾತನಾಡಿದ್ದನ್ನು ನಾನು ಕೇಳಿರಲಿಲ್ಲ. ಪಠ್ಯವನ್ನಷ್ಟೆ ಬೋಧಿಸದೆ ಬದುಕಿನ ಸಂಗತಿಗಳನ್ನೂ ಹೇಳುತ್ತಾ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಚಿಂತನೆಯ ಅರಿವು ಮೂಡಿಸಿದವರು. ಸ್ವಂತ ಯೋಚನೆ ಮಾಡುವುದನ್ನು ಕಲಿಸಿಕೊಟ್ಟವರು.

1974ರಲ್ಲಿ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ‘ಜಾತಿ ವಿನಾಶ ಸಮ್ಮೇಳನ’ ನಡೆದಾಗ ಪ್ರಮುಖ ಪಾತ್ರ ವಹಿಸಿದ್ದರು.

ಸಾಹಿತ್ಯದಲ್ಲಿ ಅವರ ಸಾಧನೆ ಬಹಳ ಎತ್ತರದ್ದು. ಕನ್ನಡ ವಿಮರ್ಶಕರಾಗಿ ಬಹಳ ದೊಡ್ಡ ಹೆಸರು ಮಾಡಿದವರು. ಅಪ್ಪಟ ಪ್ರಾಮಾಣಿಕ. ಗಾಂಧಿ, ಅಂಬೇಡ್ಕರ್ ಚಿಂತನೆಗಳನ್ನು ಮೈಗೂಡಿಸಿಕೊಂಡವರು. ತಮ್ಮ ಬಳಿ ಕಲಿತ ಹಾಗೂ ತಮ್ಮ ಸಂಪರ್ಕಕ್ಕೆ ಬಂದ ಸಾವಿರಾರು ವಿದ್ಯಾರ್ಥಿಗಳನ್ನು ಆ ಚಿಂತನೆಗೆ ಹಚ್ಚಿದವರು. ತೀರಾ ಇತ್ತೀಚಿನವರೆಗೂ ಅವರೊಂದಿಗೆ ಚರ್ಚಿಸಿ ಅವರ ಸಲಹೆಗಳನ್ನು ಪಡೆದುಕೊಂಡೇ ಪ್ರಗತಿಪರ ಹೋರಾಟಗಳನ್ನು ನಡೆಸುತ್ತಿದ್ದೆವು. ಆಗಾಗ, ಅವರ ಮನೆಯೇ ಚರ್ಚೆಯ ಕೇಂದ್ರವಾಗುತ್ತಿತ್ತು.

ಇಂಗ್ಲಿಷ್ ಅನ್ನು ಮಕ್ಕಳಿಗೆ ಭಾಷೆಯಾಗಷ್ಟೇ ಕಲಿಸಬೇಕು, ಮಾಧ್ಯಮವಾಗಿ ಬೇಡ ಎಂಬ ಸ್ಪಷ್ಟ ನಿಲುವು ಹೊಂದಿದ್ದ ಅವರು ಎಲ್ಲೆಡೆ ಅದನ್ನು ಪ್ರತಿಪಾದಿಸುತ್ತಿದ್ದರು. ಅವರ ಮಗಳನ್ನೂ ಕನ್ನಡ ಮಾಧ್ಯಮದಲ್ಲೇ ಓದಿಸಿದರು. ಖಚಿತ ನಿಲುವಿನ ವಿಷಯದಲ್ಲಿ ಅವರಿಗೆ ಅವರೇ ಸಾಟಿ.

ಅವರ ವಿದ್ಯಾರ್ಥಿಗಳಲ್ಲಿ ಬಹುತೇಕರು ಪ್ರಗತಿಪರ ಚಿಂತನೆಯನ್ನು ಮೈಗೂಡಿಸಿಕೊಂಡವರೇ ಆಗಿದ್ದಾರೆ. ಅವರು ಯಾವುದೇ ಹಬ್ಬ–ಹರಿದಿನ ಅಥವಾ ಧಾರ್ಮಿಕ ಆಚರಣೆಗಳನ್ನು ಮಾಡಿದವರಲ್ಲ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂಥ ರಾಷ್ಟ್ರೀಯ ಹಬ್ಬಗಳನ್ನಷ್ಟೇ ‌ಆಚರಿಸುತ್ತಿದ್ದರು.

ತಾವು ಕಟ್ಟಿಸಿದ ಮನೆಗೆ ಅವರು ಗಣರಾಜ್ಯೋತ್ಸವದ ದಿನವೇ ಬಂದರು. ಆದರೆ, ಗೃಹಪ್ರವೇಶದ ರೀತಿ ಕಾರ್ಯಕ್ರಮ ಮಾಡಲಿಲ್ಲ. ಅವರ ಮನೆಯಲ್ಲಿ ದೇವರ ಮನೆ ಎನ್ನುವುದೇ ಇಲ್ಲ. ಬಹಳಷ್ಟು ಪುಸ್ತಕಗಳ ಸಂಗ್ರಹವಿದೆ. ನಾವು ಗಣರಾಜ್ಯೋತ್ಸವದಂದು ಮನೆಗೆ ಬಂದು ಮೇಷ್ಟ್ರು ಜೊತೆ ಮಾತನಾಡಿ, ಕಾಫಿ ಕುಡಿದು ಹೋಗುತ್ತಿದ್ದೆವು.

ಅವರ ಬದುಕೂ ಸರಳ. ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಗೊಡವೆಗೆ ಹೋಗಲಿಲ್ಲ. ಸಂವಹನಕ್ಕೆ ಲ್ಯಾಂಡ್‌ಲೈನ್ ಫೋನ್ ಬಳಸುತ್ತಿದ್ದರು. ಸಾಂಗತ್ಯವೇನಿದ್ದರೂ ಪುಸ್ತಕಗಳ ಜೊತೆಗೇ.

ಹೃದಯಾಘಾತಕ್ಕೆ ಒಳಗಾದ ನಂತರ, ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ. ಯಾವುದೇ ವಿಷಯವಾಗಲಿ ಸಮಗ್ರವಾಗಿ ಯೋಚಿಸಬೇಕು ಎಂಬುದು ಅವರ ಸಲಹೆ, ಪ್ರತಿಪಾದನೆಯಾಗಿರುತ್ತಿತ್ತು. ಹಾಗೆಯೇ ಬಾಳಿದರು ಕೂಡ.

ಕೊನೆವರೆಗೂ ಜಾತಿ ವ್ಯವಸ್ಥೆಯ ವಿರುದ್ಧವೇ ಇದ್ದರು. ಸಮಾನತೆ ಹಾಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತಿದ್ದರು. ರಂಗಾಯಣವನ್ನು ಮೈಸೂರಿನಲ್ಲಿ ಉಳಿಸುವ ದಿಸೆಯಲ್ಲಿ ಮೇಷ್ಟ್ರು ವಹಿಸಿದ ಪಾತ್ರ ಪ್ರಮುಖವಾಗಿತ್ತು.

ಅವರ ನಡೆಯೆಲ್ಲವೂ ಮಾದರಿಯಾಗಿದ್ದವು. ಅಡ್ಡದಾರಿಗಳ‌ಲ್ಲಿ ಹೋಗಬಾರದು, ನೇರ ದಾರಿಯನ್ನು ಕಂಡುಕೊಳ್ಳಬೇಕು ಎಂಬುದನ್ನು ಕಲಿಸಿಕೊಟ್ಟವರು. ಅಂತರ್ಜಾತಿ ವಿವಾಹ ಹಾಗೂ ಸರಳ ಮದುವೆಯನ್ನು ಬೆಂಬಲಿಸುತ್ತಿದ್ದ ಅವರು, ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಸರಳವಾಗಿ ಮಗಳ ಮದುವೆ ಮಾಡಿದ್ದರು. ಯಾವುದೇ ಅಂಧಶ್ರದ್ಧೆಗಳನ್ನು ಅನುಸರಿಸಿದವರಲ್ಲ. ವೈಚಾರಿಕತೆಯ ಹಾದಿಯಲ್ಲೇ ಸಾಗಿದವರು.

‘ನಿಮ್ಮ ಮಗ ‌ನಾಯಕರ ಸಹವಾಸ ಮಾಡುತ್ತಿದ್ದಾನೆ, ಹಾಳಾಗಿ ಹೋಗುತ್ತಾನೆ, ಎಚ್ಚರಿಕೆಯಿಂದ ನೋಡಿಕೊಳ್ಳಿ’ ಎಂದು ಕೆಲವರು ನಮ್ಮ ತಂದೆ ಬಳಿ ದೂರು ಹೇಳಿದ್ದರು. ಈ ವಿಷಯ ನನ್ನ ಕಿವಿಗೆ ಬಿತ್ತು. ಒಂದು ದಿನ ತಂದೆಗೆ ಮೇಷ್ಟ್ರನ್ನು ಪರಿಚಯಿಸಿದ್ದೆ. ಅವರೊಂದಿಗೆ ಮಾತನಾಡಿದ ನಂತರ ಹಾಗೂ ಅವರ ಬಗ್ಗೆ ತಿಳಿದ ಬಳಿಕ ನನ್ನ ತಂದೆ, ‘ಮಾಡಿದರೆ ಇಂಥವರ ಸಹವಾಸ ಮಾಡಬೇಕು, ಆಗ ಬೆಳೆಯುತ್ತೀಯಾ’ ಎಂದು ಸಲಹೆ ನೀಡಿದ್ದರು!

ತಮ್ಮೊಂದಿಗೆ ಸಂಪರ್ಕಕ್ಕೆ ಬಂದವರನ್ನು ಪ್ರಭಾವಿಸಿ ವೈಚಾರಿಕ ಚಿಂತನೆಗಳಿಗೆ ಮನಸ್ಸು ತೆರೆಯುವಂತೆ ಮಾಡಿದವರು. ಹಂಪಿ‌ ವಿಶ್ವವಿದ್ಯಾಲಯದಲ್ಲೂ ಸಂದರ್ಶಕ ಪ್ರಾಧ್ಯಾಪಕರಾಗಿ‌‌ದ್ದರು. ಹೋದಲ್ಲೆಲ್ಲ ವಿದ್ಯಾರ್ಥಿಗಳು ಹಾಗೂ ಒಡನಾಡಿಗಳು ಸಾಹಿತ್ಯಿಕವಾಗಿ ಮಾತ್ರವಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲೂ ಪಾಲ್ಗೊಳ್ಳಲು ಪ್ರೇರಕ ಶಕ್ತಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.