ಮಳೆಗಾಲದ ಒಂದು ದಿನ. ಇಬ್ಬರು ಹುಡುಗರು ಶಾಲೆಯಿಂದ ಮನೆಯತ್ತ ಹೊರಟಿದ್ದರು. ರಸ್ತೆಯ ಬದಿಯಲ್ಲಿ ಇಳಿವಯಸ್ಸಿನ ಭಿಕ್ಷುಕನೊಬ್ಬ ಚಳಿಯಲ್ಲಿ ನಡುಗುತ್ತ ಕುಳಿತಿರುವುದನ್ನು ಕಂಡರು. ಆ ಬಾಲಕರಲ್ಲಿ ದೊಡ್ಡವನಿಗೆ ಏನು ತೋಚಿತೋ ಏನೋ, ತನ್ನ ಜೇಬಿಗೆ ಕೈಹಾಕಿ ಹುಡುಕಿದ. ಒಂದೆರಡು ನಾಣ್ಯಗಳು ಸಿಕ್ಕವು. ಅವನ್ನು ಆ ಮುದುಕನಿಗೆ ಕೊಡುವನೆಂದು ಚಿಕ್ಕವನು ನಿರೀಕ್ಷಿಸಿದ್ದ. ಆದರೆ, ಹುಡುಗ ಹಾಗೆ ಮಾಡಲಿಲ್ಲ. ಹತ್ತಿರದ ಅಂಗಡಿಗೆ ಹೋದ. ಕೈಯಲ್ಲಿದ್ದ ಕಾಸನ್ನು ಅಂಗಡಿಯವನಿಗೆ ಕೊಟ್ಟು ಒಂದಷ್ಟು ಬೀಡಿಗಳನ್ನು ಕೊಡುವಂತೆ ಕೇಳಿದ. ಸಿಕ್ಕಷ್ಟು ಬೀಡಿಗಳನ್ನು ಆ ಮುದುಕನ ಕೈಯಲ್ಲಿಟ್ಟು ಮುಂದೆ ನಡೆದ.
ಇದನ್ನೆಲ್ಲ ನೋಡುತ್ತಿದ್ದ ಚಿಕ್ಕವನು ಕೇಳಿದ, ‘‘ಅಣ್ಣಾ, ಇದ್ಯಾಕೆ ಹೀಗೆ ಮಾಡಿದೆ? ನಾವು ಅಂಗಡಿಯಲ್ಲಿ ಬೀಡಿ ಕೊಳ್ಳುವುದು ಸರಿಯೇ? ಅಪ್ಪ ಅಮ್ಮ ಬೈಯುವುದಿಲ್ಲವೇ?’’
ತಮ್ಮನ ಪ್ರಶ್ನೆಗಳಿಗೆ ಹಿರಿಯ ಹುಡುಗ ಸಮಾಧಾನದಿಂದಲೇ ಉತ್ತರಿಸಿದ, ‘‘ನೋಡು, ಆ ಮುದುಕ ಚಳಿಯಲ್ಲಿ ನಡುಗುತ್ತಿದ್ದಾನೆ. ಅವನಿಗೆ ಕಂಬಳಿ ಕೊಡಿಸುವಷ್ಟು ಹಣ ನಮ್ಮ ಕೈಯಲ್ಲಿಲ್ಲ. ಅದು ಸಾಧ್ಯವೂ ಇಲ್ಲ. ನಮ್ಮ ಹತ್ತಿರ ಇರುವಷ್ಟು ಕಾಸಿನಲ್ಲಿ ಕಡೇ ಪಕ್ಷ ಅವನಿಗೆ ಬೀಡಿ ಕೊಡಿಸಬಹುದು. ಆ ಬೀಡಿ ಸೇದುವುದರಿಂದ ಮುದುಕನ ನಡುಕ ಕಡಿಮೆಯಾಗಬಹುದೋ ಏನೋ. ಅಷ್ಟಾದರೂ ಸಹಾಯ ಮಾಡಿದಂತೆ ಆಯಿತಲ್ಲ’’
ಹೀಗೆ ಬೀಡಿ ಕೊಂಡು ಭಿಕ್ಷುಕನ ಕೈಗಿತ್ತವ ಅನಂತಕುಮಾರ್. ಆತನ ಜೊತೆಗಿದ್ದವ ತಮ್ಮ ನಂದಕುಮಾರ್. ಕಷ್ಟದಲ್ಲಿದ್ದವರಿಗೆ ಕೈಲಾದ ಸಹಾಯ ಮಾಡಬೇಕೆಂದು ತಾಯಿ ತಂದೆ ತಮ್ಮ ನಡೆನುಡಿಗಳಲ್ಲಿ ತೋರಿಸಿಕೊಟ್ಟಿದ್ದು ಆ ಮಕ್ಕಳ ಬದುಕಿನುದ್ದಕ್ಕೂ ಪ್ರೇರಣೆ ನೀಡಿದುದರಲ್ಲಿ ಅಚ್ಚರಿಯಿಲ್ಲ.
ತಮ್ಮ ಜೀವನದುದ್ದಕ್ಕೂ ಅನಂತಕುಮಾರ್ ತೋರುತ್ತಿದ್ದ ಮಾನವೀಯತೆಯ ಪ್ರತಿಸ್ಪಂದನ ಎಂದೋ ಎಲ್ಲೋ ಕ್ವಚಿತ್ತಾಗಿ ಸ್ಫುರಿಸುವಂಥದ್ದಾಗಿರಲಿಲ್ಲ. ಕೇಂದ್ರ ಸಚಿವರಾಗಿಯೋ, ಗಣ್ಯ ವ್ಯಕ್ತಿಯಾಗಿಯೋ, ಜನನಾಯಕನಾಗಿಯೋ ಉಳಿದವರೆದುರಿಗೆ ಪ್ರದರ್ಶನ ಮಾಡುವ ತೋರ್ಪಡಿಕೆಯಾಗಿರಲಿಲ್ಲ. ತಂದೆ ತಾಯಿ ದಿನನಿತ್ಯ ತಮಗೆ ಕಲಿಸಿದ ಬದುಕಿನ ಪಾಠವನ್ನು ಚಾಚೂ ತಪ್ಪದೆ ಪಾಲಿಸಿದ ಅನಂತಕುಮಾರ್‌ಗೆ ಮಾನವೀಯ ಪ್ರತಿಕ್ರಿಯೆಯೆನ್ನುವುದು ಸಹಜ ಪ್ರವೃತ್ತಿಯಾಗಿತ್ತು. ಇದರಿಂದಾಗಿ ಅವರು ನಾಯಕತ್ವದ ಸೋಪಾನವೇರಿ ಎಷ್ಟೇ ಉನ್ನತಿಗೇರಿದರೂ ಜನಸಾಮಾನ್ಯರಲ್ಲಿ ಒಬ್ಬನಾಗಿ ಬೆರೆಯಲು ಸುಲಭ ಸಾಧ್ಯವಾಗಿತ್ತು.
ತಮ್ಮನ್ನು ಕಾಣಬರುವವರು ಬಡವರಿರಲಿ, ಗಣ್ಯರಿರಲಿ, ಅನಂತಕುಮಾರ್ ವರ್ತನೆ ಒಂದೇ ರೀತಿಯಾಗಿರುತ್ತಿತ್ತು. ಕೇವಲ ಬನಿಯನ್, ಪಂಚೆ ಧರಿಸಿ ಅವರು ಯಾರ ಎದುರೂ ಕಾಣಿಸಿಕೊಂಡವರೇ ಅಲ್ಲ. ಇತರರ ಬಗೆಗೆ ಅಲಕ್ಷ್ಯ ಅನಾದರವೆಂಬುದು ತಾವು ಧರಿಸುವ ಉಡುಪಿನಲ್ಲೂ ಗೋಚರಿಸುವಂತಿರಬಾರದು. ಅದೇ ಒಬ್ಬ ಬಡವ ಹರಿದ ಬಟ್ಟೆಯಲ್ಲಿ ಬಂದನೆಂದು ಅವನನ್ನು ಅಲಕ್ಷಿಸುವುದೂ ಸರಿಯಲ್ಲ. ಕೇಂದ್ರ ಸಚಿವ ಸ್ಥಾನದಲ್ಲಿದ್ದು, ಠಾಕುಠೀಕಾಗಿ ಬಟ್ಟೆ ಧರಿಸಿದ ಶ್ರೀಮಂತ ಉದ್ಯಮಿಯೊಬ್ಬರನ್ನು ಮಾತನಾಡಿಸುವಷ್ಟೇ ಆದರ ವ್ಯವಧಾನಗಳಿಂದ ಸಮಾಜದ ಕೆಳಸ್ತರದ ದೀನದಲಿತರೊಡನೆ ಅರ್ಧತಾಸಿನವರೆಗೆ ಸಂಭಾಷಿಸಬಲ್ಲವರಾಗಿದ್ದರು.
ತಮ್ಮ ಊರಿನ ಬೇಡಿಕೆ ಒಪ್ಪಿಸುವುದಕ್ಕಾಗಿ ಜನರು ದೂರದ ದೆಹಲಿಗೂ ಹೋಗುತ್ತಿದ್ದರು. ಅವರ ಬೇಡಿಕೆಗೂ ಅನಂತಕುಮಾರ್ ಇಲಾಖೆಗೂ ಸಂಬಂಧವೇ ಇರದಿದ್ದರೂ ಜನರು ಅವರ ಮನೆಗೇ ಬಂದು ಕಾಯುತಿರುತ್ತಿದ್ದರು. ಸಚಿವರು ಬಂದಕೂಡಲೇ ಬಂದವರ ಊಟತಿಂಡಿಗೆ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ಮೊದಲಿಗೆ ಖಚಿತಪಡಿಸಿಕೊಂಡು, ಆನಂತರ ಬಂದವರ ಕಷ್ಟಸುಖ ವಿಚಾರಿಸುತ್ತಿದ್ದರು.
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಅನಂತಕುಮಾರ್ ಮುಖ್ಯ ಅತಿಥಿ. ಕಾರ್ಯಕ್ರಮದ ಮಧ್ಯಂತರದಲ್ಲಿ ಗಣ್ಯರಿಗೆ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಅನಂತಕುಮಾರ್ ಅಲ್ಲಿಗೆ ಹೋದರು. ಊಟ ಬಡಿಸಲು ಇನ್ನೂ ಸಿದ್ಧತೆ ನಡೆದಿತ್ತು. ಅಷ್ಟರಲ್ಲಿ ಅವರು ಕುಳಿತಿರುವಲ್ಲಿಗೆ ಇದ್ದಕ್ಕಿದ್ದಂತೆ ಹರಿದ ಬಟ್ಟೆಯ ಹುಚ್ಚನೊಬ್ಬ ಓಡಿ ಬಂದ. ಆಗಂತುಕನ ಅವಾಂತರವನ್ನು ತಡೆಯಲು ಪೋಲೀಸರು ಧಾವಿಸಿ ಬಂದರು. ಅನಂತಕುಮಾರ್ ಮುಂದೆಯೇ ನಿಂತು ಆತ ‘ಹಸಿವು ಹಸಿವು’ ಎನ್ನುತ್ತ ಹೊಟ್ಟೆಯ ಮೇಲೆ ಬಡಿದುಕೊಳ್ಳತೊಡಗಿದ. ಪೋಲೀಸರು ಅವನನ್ನು ಹೊರಗೆ ಕಳುಹಿಸುವ ಯತ್ನದಲ್ಲಿದ್ದರು. ಅನಂತಕುಮಾರ್ ಕಿಂಚಿತ್ತೂ ಸಿಡಿಮಿಡಿಗೊಳ್ಳದೆ ಅವನಿಗೆ ಊಟಹಾಕಿಸಿದ ನಂತರವೇ ಕಳುಹಿಸತಕ್ಕದ್ದು ಎಂದು ಸೂಚಿಸಿದರು. ಹಾಗೆ ಬಂದವನು ಸಾಂಸ್ಕೃತಿಕ ಕಾರ್ಯಕ್ರಮದ ಪಾತ್ರಧಾರಿಯಾಗಿದ್ದ ಪರಿಚಿತ ವ್ಯಕ್ತಿ ಶ್ರೀಕೃಷ್ಣಸಂಪಗಾಂವಕರನೇ ಎಂದು ಸಚಿವರಿಗೆ ಆಮೇಲೆ ತಿಳಿಯಿತು.
ತಾವು ಯಾರೊಡನೆ ಸಂವಹನ ನಡೆಸಬೇಕಾಗಿದೆಯೋ ಅವರ ಸ್ಥಿತಿಗತಿಗಳನ್ನು ಗಮನಿಸುವುದೂ ಅನಂತಕುಮಾರ್ ಅವರ ಸಂವೇದನಾ ಸೂಕ್ಷ್ಮತೆಯ ಒಂದು ಭಾಗವಾಗಿದ್ದಿತು. ಒಂದೆಡೆ ಅವರ ಭಾಷಣ ಕಾರ್ಯಕ್ರಮ ಏರ್ಪಟ್ಟಿತ್ತು. ಸಚಿವರನ್ನು ನೋಡಲು, ಭಾಷಣವನ್ನು ಆಲಿಸಲು ಬಹಳ ಜನ ಸೇರಿದ್ದರು. ಮಧ್ಯಾಹ್ನದ ಸಮಯವಾದ್ದರಿಂದ ಬಿಸಿಲೇರಿತ್ತು. ಅನಂತಕುಮಾರ್ ಆಗಮನವನ್ನು ನಿರೀಕ್ಷಿಸುತ್ತ ವೇದಿಕೆಯ ನೆರಳಿನಲ್ಲಿ ಗಣ್ಯರು, ಸುಡುಬಿಸಿಲಲ್ಲಿ ಸಭಿಕರು ಕಾಯುತ್ತಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಅನಂತಕುಮಾರ್ ಭಾಷಣ ಮಾಡಲು ಎದ್ದವರೇ ವೇದಿಕೆಯಿಂದ ಕೆಳಗಿಳಿದು ಜನರ ಮಧ್ಯೆ ಬಂದು ನಿಂತರು. ಭಾಷಣ ಆಲಿಸುವ ಜನರು ಬಿಸಿಲು ಲೆಕ್ಕಿಸದೆ ಇರುವಾಗ ತಾನು ಅವರ ನಡುವೆಯೇ ನಿಂತು ಮಾತನಾಡುವುದು ಸೂಕ್ತ ಎಂದು ಹೇಳಿಯೇ ಭಾಷಣಕ್ಕೆ ತೊಡಗಿದರು.
ಒಮ್ಮೆ ಅನಂತಕುಮಾರ್ ಮುಂಬೈಗೆ ಕಾರ್ಯನಿಮಿತ್ತ ಹೋಗಿದ್ದರು. ಅವರ ಓಡಾಟಕ್ಕಾಗಿ ಗೊತ್ತುಪಡಿಸಿದ್ದ ಕಾರಿನ ಚಾಲಕನೊಡನೆ ಮಾತನಾಡಿ ಎಂದಿನ ರೂಢಿಯಂತೆ ಅವನ ಸ್ಥಿತಿಗತಿಗಳನ್ನು ವಿಚಾರಿಸಿದ್ದರು. ಇಡೀ ದಿನದ ಬಿಡುವಿಲ್ಲದ ಕಾರ್ಯಕ್ರಮದ ನಡುವೆ ಕಾರಿನ ಚಾಲಕನ ವರ್ತನೆ ಸರಿಯಿಲ್ಲದಿರುವುದನ್ನು ಅನಂತಕುಮಾರ್ ಗಮನಿಸಿದ್ದರು. ಒರಟಾಗಿ ವರ್ತಿಸುತ್ತಿದ್ದ ಅವನ ನಡವಳಿಕೆಯ ಬಗೆಗೆ ಕಾರಿನ ಮಾಲೀಕರಿಗೆ ದೂರವಾಣಿಯಲ್ಲಿ ತಿಳಿಸಿಯೂ ಆಯಿತು.
ಮಾರನೇ ದಿನ ಬೆಳಗ್ಗೆ ಕಾರಿನಲ್ಲಿ ಬಂದು ಕುಳಿತಾಗ ಚಾಲಕನ ಸ್ಥಾನದಲ್ಲಿ ಬೇರೆಯೊಬ್ಬನಿದ್ದ. ನಿನ್ನೆ ಬಂದವನೆಲ್ಲಿ ಎಂದು ಅನಂತಕುಮಾರ್ ಕೇಳಿದರು. ಚಾಲಕನ ದುರ್ವರ್ತನೆಯ ಬಗೆಗೆ ಮಾಹಿತಿ ಪಡೆದಿದ್ದ ಮಾಲೀಕ ಕೋಪಗೊಂಡು ಅವನನ್ನು ಕೆಲಸದಿಂದಲೇ ವಜಾ ಮಾಡಿ ಬೇರೆಯವನನ್ನು ಕಳಿಸಿದ್ದರೆಂದು ತಿಳಿಯಿತು. ಅನಂತಕುಮಾರ್ ಕಾರಿನಿಂದ ಇಳಿದರು. ವಾಹನದ ಮಾಲೀಕನನ್ನು ಫೋನ್ ಮೂಲಕ ಸಂಪರ್ಕಿಸಿ ಹೇಳಿದರು ‘‘ನಿನ್ನೆಯ ಚಾಲಕ ಬಂದಹೊರತು ನಾನು ನಿಮ್ಮ ಕಾರಿನಲ್ಲಿ ಕೂರುವುದಿಲ್ಲ’’
ಆ ಚಾಲಕ ಬರುವವರೆಗೆ ಅನಂತಕುಮಾರ್, ಮತ್ತವರ ಸ್ನೇಹಿತರು ಅಲ್ಲಿಯೇ ನಿಂತಿದ್ದರು. ಚಾಲಕ ಅನಂತಕುಮಾರ್‌ಗೆ ನಮಸ್ಕರಿಸಿ ಕ್ಷಮೆ ಕೋರಿದ್ದು ಹಾಗಿರಲಿ, ತಪ್ಪಾಗಿ ವರ್ತಿಸಿದವನನ್ನು ತಿದ್ದಿ ತಿಳಿಹೇಳುವ ಬದಲು ಹೊಟ್ಟೆಪಾಡಿನ ಉದ್ಯೋಗವನ್ನೇ ಕಿತ್ತುಕೊಳ್ಳುವುದು ಅಮಾನವೀಯವೆಂದು ಕಾರಿನ ಮಾಲೀಕನಿಗೂ ಪಾಠ ಹೇಳಿದಂತಾಯಿತು.
ಅನಂತಕುಮಾರ್ ನಮ್ಮೊಂದಿಗಿಲ್ಲ. ಅವರು ನಂಬಿ ನಡೆದ ಜೀವನದ ಮೌಲ್ಯಗಳು ನಮ್ಮಿಂದ ದೂರವಾಗುತ್ತಿವೆ. ಹೀಗಾಗಿ ಇಂದಿನ ಬದುಕಿನ ಡಾಂಭಿಕತೆ, ಜಡತೆ, ಸತ್ವಹೀನ ಪ್ರತಿಕ್ರಿಯೆಗಳು ಸಮಾಜವನ್ನು ಎತ್ತ ಕೊಂಡೊಯ್ಯಬಹುದೆಂಬ ಚಿಂತೆ ಕಾಡುತ್ತದೆ. ಅನಂತಕುಮಾರ್ ಬದುಕಿನ ಪುಟಗಳಲ್ಲಿ ತುಂಬಿ ತುಳುಕುವ ಮಾನವೀಯ ಸಂವೇದನೆ ಸೂಕ್ಷ್ಮತೆಗಳು ವರ್ತಮಾನದ ಜೀವನದ ಶುಷ್ಕ ದಿನಚರ್ಯೆಗೆ ಪ್ರೇರಣೆ ನೀಡುವಂತಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.