ADVERTISEMENT

ಸದಾನಂದ ಸುವರ್ಣ | ನುಡಿ ನಮನ: ‘ಅನನ್ಯ ನಿರ್ಮಾಪಕ, ರಂಗಯೋಗಿ’

ಗಿರೀಶ ಕಾಸರವಳ್ಳಿ
Published 16 ಜುಲೈ 2024, 19:20 IST
Last Updated 16 ಜುಲೈ 2024, 19:20 IST
<div class="paragraphs"><p>ಸದಾನಂದ ಸುವರ್ಣ</p></div>

ಸದಾನಂದ ಸುವರ್ಣ

   

ಸದಾನಂದ ಸುವರ್ಣ ಅವರ ಜೊತೆಗೆ ಒಡನಾಡಿದ ಎಲ್ಲ ಪರಿಚಯ
ಸ್ಥರು ಹೇಳುವ ಮಾತೆಂದರೆ, ಅವರು ‘ಜಂಟಲ್‌ಮ್ಯಾನ್‌ ಟು ದಿ ಕೋರ್‌’. ಯಾವುದೇ ರೀತಿಯ ಹೊಟ್ಟೆಕಿಚ್ಚು, ಕುಚೇಷ್ಟೆ ಇಲ್ಲದೆ ಬದುಕಿದರು. ಬಹಳ ನಿಷ್ಠುರವಾದಿ. ಹೀಗಾಗಿಯೇ ನಾನು ಏನೇ ಬರೆದರೂ ಮೊದಲು ಸುವರ್ಣ ಅವರಿಗೆ ತೋರಿಸಿ ಪ್ರತಿಕ್ರಿಯೆ ಕೇಳುತ್ತಿದ್ದೆ.

ಸುವರ್ಣರು ನನಗೆ ಪರಿಚಯವಾಗಿದ್ದೇ ಒಂದು ರೀತಿ ಸೋಜಿಗ. ಆಗಷ್ಟೇ ಎಫ್‌ಟಿಐಐನಲ್ಲಿ ಎಕ್ಸಾಂ ಮುಗಿಸಿ ಮುಂಬೈ ಫಿಲ್ಮ್‌ ಫೆಸ್ಟಿವಲ್‌ಗೆ ಹೋಗಿದ್ದೆ. ಅಲ್ಲಿ ಸಂತೋಷ್‌ಕುಮಾರ್‌ ಗುಲ್ವಾಡಿ, ಅವರನ್ನು ಪರಿಚಯ ಮಾಡಿಕೊಟ್ಟರು. ಅವರ ‘ಗುಡ್ಡದ ಭೂತ’ ಧಾರಾವಾಹಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಲು ಕರೆದರು. ‘ಇಲ್ಲ, ನಾನೇ ಸಿನಿಮಾ ಮಾಡುತ್ತೇನೆ’ ಎಂದೆ. ‘ಸ್ಕ್ರಿಪ್ಟ್‌ ಸಿದ್ಧವಿದೆಯಾ?’ ಎಂದರು. ಯು.ಆರ್. ಅನಂತಮೂರ್ತಿಯವರ ‘ಘಟಶ್ರಾದ್ಧ’ ಆಧರಿಸಿ ಸಿನಿಮಾ ಚಿತ್ರಕಥೆ ಬರೆದಿದ್ದೆ. ಅದನ್ನು ಓದಿ, ತಾವೇ ಸಿನಿಮಾ ಮಾಡಲು ಸುವರ್ಣರು ಮುಂದೆ ಬಂದರು. ಅಲ್ಲಿಂದ ಅವರ ಕೊನೆಯ ದಿನಗಳ ತನಕ ನಮ್ಮ ಒಡನಾಟವಿತ್ತು. 

ADVERTISEMENT

ಸಿನಿಮಾಗೆ ದುಂದು ವೆಚ್ಚವಿಲ್ಲದೆ ಅವರು ಪ್ಲ್ಯಾನಿಂಗ್ ಮಾಡುತ್ತಿ
ದ್ದರು. ಕಥೆ ಏನು ಕೇಳುತ್ತಿತ್ತೋ ಅದನ್ನು ಒದಗಿಸುತ್ತಿದ್ದರು. ನನ್ನ ನಾಲ್ಕೈದು ಸಿನಿಮಾಗ
ಳಲ್ಲಿ ಜೊತೆಗಿದ್ದರು. ಅವರ ಎಲ್ಲ ಸಿನಿಮಾಗಳಲ್ಲೂ ನಾನು ಜೊತೆಗಿದ್ದೆ. ಅವರು ಕಾರಂತರ ‘ಹುಚ್ಚು ಮನಸ್ಸಿನ ಹತ್ತು ಮುಖಗಳು’ ಸಿನಿಮಾ ಮಾಡುವಾಗ ಮಾತ್ರ ನಾನು ಜೊತೆಗೆ ಇರಲಿಲ್ಲ; ಬೇರೆ ಕಡೆ ಬ್ಯುಸಿಯಾಗಿದ್ದೆ.

ನಾವಿಬ್ಬರು ಕಸರತ್ತು ಮಾಡಿ, ಮಾಡಲು ಸಾಧ್ಯವಾಗದ ಸಿನಿಮಾಗಳು ಕೆಲವಷ್ಟಿವೆ. ನಾರಾಯಣ ಗುರುಗಳ ಬಗ್ಗೆ ಸಿನಿಮಾ ಮಾಡುವ ಕಸರತ್ತು ನಡೆದಿತ್ತು. ಆದರೆ, ಆಗಲಿಲ್ಲ. ಇಬ್ಬರೂ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದೆವು. ಅವರು ಒಂದು ರೀತಿ ನನ್ನ ಹಿರಿಯ ಅಣ್ಣ. ಬಾಂಬೆಯಲ್ಲಿನ ಅವರ ಆಫೀಸ್ ರೂಮು ನಾನು ಅಲ್ಲಿಗೆ ಹೋದಾಗಲೆಲ್ಲ ವಾಸಸ್ಥಾನವಾಗಿತ್ತು.

ಸುವರ್ಣರ ನಿಜವಾದ ಸಾಧನೆ ರಂಗಭೂಮಿ. ಮುಂಬೈ ರಂಗಭೂಮಿ ಜೀವಂತವಾಗಿಟ್ಟವರಲ್ಲಿ ಅವರೂ ಒಬ್ಬರು. ಹವ್ಯಾಸಿ ರಂಗಭೂಮಿಯೇ ಸಂಕಷ್ಟದಲ್ಲಿದ್ದಾಗ ಸುವರ್ಣರು ಮುಂಬೈನಲ್ಲಿ ವೃತ್ತಿಪರ ರಂಗಭೂಮಿಯನ್ನು ಕಟ್ಟಿ ಬೆಳೆಸಿದರು. ಮೊನ್ನೆ ಅವರನ್ನು ಹುಡುಕಿಕೊಂಡು ಹೋಗಿ, ಬಿ.ವಿ.ಕಾರಂತ ಪ್ರಶಸ್ತಿ ಕೊಟ್ಟಿದ್ದು ಬಹಳ ಖುಷಿಯಾಯಿತು.

ಅವರ ಕೊನೆ ಕೊನೆಯ ‘ಉರುಳು’, ‘ಕೋರ್ಟ್‌ ಮಾರ್ಷಲ್‌’ ಅತ್ಯಂತ ಯಶಸ್ವಿ ನಾಟಕಗಳಾಗಿದ್ದವು. ತುಳುವಿನಲ್ಲೊಂದು ಸಿನಿಮಾ ಮಾಡಬೇಕು ಎಂಬ ಅವರ ಕೊನೆಯಾಸೆ ಉಳಿದೇಹೋಯಿತು.

ಇತ್ತೀಚೆಗೆ ನನಗೆ ಸಿನಿಮಾ ಮಾಡಿಕೊಡಿ ಅಂತ ಸುವರ್ಣ ದುಡ್ಡು ತಂದುಕೊಟ್ಟರು. ಆಗ ಅವರಿಗೆ 80 ವರ್ಷ
ವಾಗಿತ್ತು. ಈಗ ನೀವ್ಯಾಕೆ ಸಿನಿಮಾ ಮಾಡುವಿರಿ ಎಂದು ವಾಪಸ್‌ ಕೊಟ್ಟೆ. ಸದಾನಂದ ಸುವರ್ಣರಿಗೆ ದುಡ್ಡು ಕೊಟ್ಟರೆ ‘ಎಫ್‌ಡಿ’ ಇದ್ದಂತೆ ಎಂಬ ಮಾತಿತ್ತು. ‘ಘಟಶ್ರಾದ್ಧ’ಕ್ಕೆ ಬ್ಯಾಂಕ್‌ನಿಂದ ಸಾಲ ಪಡೆದಿ
ದ್ದೆವು. ಸಬ್ಸಿಡಿ ಹಣದ ಚೆಕ್‌ ಅನ್ನು ನೇರವಾಗಿ ಬ್ಯಾಂಕ್‌ಗೆ ತಲುಪಿಸಿದ್ದರು. 

ಸುವರ್ಣ ಅವಿವಾಹಿತರಾಗಿಯೇ ಇದ್ದರು. ಹೀಗಾಗಿ ಕೊನೆಯಲ್ಲಿ ಮುಂಬೈನಿಂದ ಮಂಗಳೂರಿಗೆ ಬಂದರು. ಆಗ ಸಂಪರ್ಕದಲ್ಲಿದ್ದ ಕೆಲವರಲ್ಲಿ ನಾನೂ ಒಬ್ಬ. ಕೊನೆಯ ಕಾಲದಲ್ಲಿ ಅವರನ್ನು ‘ಓಲ್ಡ್‌ ಏಜ್‌ ಹೋಮ್‌’ಗೆ ಸೇರಿಸಿದ್ವಿ.

‘ಗುಡ್ಡದ ಭೂತ’ದ ಸಮಯದಲ್ಲಿ ಅವರೇ ಒಂದು ಪಾಡ್ದನ ಹಾಡಿ ತೋರಿಸಿ
ದ್ದರು. ಇದನ್ನೇ ಶೀರ್ಷಿಕೆ ಗೀತೆ ಮಾಡಿ
ದರೆ ಹೇಗಿರುತ್ತೆ ಅಂತ ಕೇಳಿದ್ದರು. ಅವರೇ ಸಾಹಿತ್ಯ ಬರೆದರು. ಆ ಗೀತೆ ಸೂಪರ್‌ ಹಿಟ್ ಆಯ್ತು. ಅದನ್ನು ‘ರಂಗಿತರಂಗ’ ಚಿತ್ರತಂಡ ಮತ್ತೆ ಬಳಸಿತು. ಕೊನೆತನಕ ಸಿನಿಮಾ, ರಂಗಭೂಮಿಗಾಗಿ ಉಸಿರಾಡಿದ ವ್ಯಕ್ತಿತ್ವ ಅವರದ್ದು.

(ಲೇಖಕರು ಸಿನಿಮಾ ನಿರ್ದೇಶಕರು)

ನಿರೂಪಣೆ: ವಿನಾಯಕ ಕೆ.ಎಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.