‘ಸಮ್ಮೇಳನ ರದ್ದು ಮಾಡಿ’ ಎಂಬ ಮುಕ್ಕಣ್ಣ ಕರಿಗಾರರ ಪತ್ರಕ್ಕೆ (ವಾ.ವಾ. ಆ. 10) ನನ್ನ ಅನಿಸಿಕೆ:
ರಾಯಚೂರು ಜಿಲ್ಲೆಯಲ್ಲಿ ನಡೆಯಬೇಕಿರುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರದ್ದು ಮಾಡಿ ಅದಕ್ಕೆ ವೆಚ್ಚ ಮಾಡುವ 5–6 ಕೋಟಿ ರೂಪಾಯಿಯನ್ನು ಬರದಿಂದ ತತ್ತರಿಸಿದ, ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ವಿನಿಯೋಗಿಸಬೇಕೆಂಬ ಕರಿಗಾರರ ಸಲಹೆ ಸಮಯೋಚಿತವಾಗಿದೆ. ಗಂಭೀರವಾಗಿ ವಿಚಾರಿಸಲು ಇಂಬು ಕೊಟ್ಟಿದೆ. ಜಿಲ್ಲೆಯ ಜನ ಆದರ್ಶ ಮೆರೆಯಲು ಸಕಾಲವಾಗಿದೆ.
60 ವರ್ಷಗಳ ನಂತರ ಜಿಲ್ಲೆಗೆ ಪ್ರಾಪ್ತವಾದ ಸಮ್ಮೇಳನವನ್ನು ನಿಗದಿತ ಮುಹೂರ್ತದಲ್ಲಿ ನಡೆಸುವ ಇಚ್ಛಾಶಕ್ತಿಯ ಬಗ್ಗೆ ಹಲವು ಅನುಮಾನಗಳು ಸುಳಿದಾಡುತ್ತಿವೆ. ಶ್ರವಣಬೆಳಗೊಳದಲ್ಲಿ ನಡೆದ 81ನೇ ಸಮ್ಮೇಳನದ ಸಂದರ್ಭದಲ್ಲಿ, ಮುಂದಿನ ಸಮ್ಮೇಳನವನ್ನು ರಾಯಚೂರಿನಲ್ಲಿ ಅಕ್ಟೋಬರ್‌ಗೆ ನಡೆಸಲು ಮುಹೂರ್ತ ನಿಗದಿಪಡಿಸಿ, 10 ತಿಂಗಳಷ್ಟು ಕಾಲಾವಕಾಶ ಕಲ್ಪಿಸಲಾಗಿತ್ತು.
ಆದರೆ ಜಿಲ್ಲೆಯಲ್ಲಿ ಸಮ್ಮೇಳನ ಕೆಲಸ ಆರಂಭವಾದುದು ಜುಲೈ ತಿಂಗಳಲ್ಲಿ. ಆರು ತಿಂಗಳ ನಂತರ ಹಾಗೂ ಸಮ್ಮೇಳನ ನಡೆಯಲು ಕೇವಲ ಮೂರು ತಿಂಗಳು ಇರುವಾಗ ಈಗಿನ ಸಮ್ಮೇಳನದ ಸಿದ್ಧತೆಯನ್ನು ಗಮನಿಸಿದರೆ, ಎಲ್ಲರ ವಿಶ್ವಾಸ ಪಡೆಯುವ ಕೊರತೆಯಿಂದ ಅದು ಆಮೆಗತಿಯಲ್ಲಿ ನಡೆದಂತಿದೆ. ಇದೇ ಗತಿಯಲ್ಲಿ ನಡೆದರೆ ಸಮ್ಮೇಳನ ನಿಗದಿತ ಮುಹೂರ್ತದಲ್ಲಿ ನಡೆಯುವುದು ಸಂದೇಹಾಸ್ಪದ. ಅದು ಅಂದು ಸಮರ್ಪಕವಾಗಿ ನಡೆದುದಾದರೆ ಪವಾಡವೇ ಸರಿ!
ಈ ಅಪಖ್ಯಾತಿಯಿಂದ ದೂರವಿರಲು, ರೈತರ ಆತ್ಮಹತ್ಯೆ ಕಾರಣವನ್ನು ಮುಂದು ಮಾಡಿ ಸಮ್ಮೇಳನ ಮುಂದೂಡುವ ಸುದ್ದಿಗಳು ತೇಲಾಡುತ್ತಿವೆ. ಸಮ್ಮೇಳನವನ್ನು ಮುಂದೂಡುವುದರಲ್ಲಿ ಯಾವ ಪುರುಷಾರ್ಥ ಅಡಗಿದೆ? ಇವರಿಗೆ ರೈತರ ಬಗ್ಗೆ ನಿಜವಾದ ಕಳಕಳಿಯಿದ್ದರೆ ರಾಯಚೂರು ಸಮ್ಮೇಳನಕ್ಕೆ ವ್ಯಯಿಸುವ ಕೋಟ್ಯಂತರ ಹಣವನ್ನು ರೈತರ ಹಿತಕ್ಕಾಗಿ ವಿನಿಯೋಗಿಸಿ ಆದರ್ಶ ಮೆರೆಯಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.