ADVERTISEMENT

ಆರ್.ಎಸ್.ಎಸ್. ಸಂಕೇತ!

ಎಂ.ಚಿದಾನಂದಮೂರ್ತಿ
Published 6 ನವೆಂಬರ್ 2012, 19:30 IST
Last Updated 6 ನವೆಂಬರ್ 2012, 19:30 IST

ಈಚೆಗೆ ಬೆಂಗಳೂರಿನ ಹಂಪಿನಗರದ ಬೀದಿ ಅಂಗಡಿ ಮುಂದೆ ನಾನು ನಿಂತಿದ್ದಾಗ ಅಲ್ಲೇ ಇದ್ದ ಒಬ್ಬ ಕೆಲಸಗಾರ ನನ್ನ ಅಂಗಿಯ ಮೇಲಿದ್ದ ಎದೆಬಿಲ್ಲೆಯನ್ನು (ಬ್ಯಾಡ್ಜ್) ಹತ್ತಿರದಿಂದ ನೋಡಿ, “ನೀವು ಆರೆಸ್ಸೆಸ್ಸಾ?” ಎಂದ. ಅದಕ್ಕೆ “ನಾನು ದೇಶಭಕ್ತ” ಎಂದೆ. ಅವನ ಪ್ರಶ್ನೆ ಆ ಕ್ಷಣ ನನಗೆ ಹರ್ಷವನ್ನು ತಂದಿತು.

ಭಾರತ, ಅದರ ಮಧ್ಯೆ ರಾಷ್ಟ್ರಧ್ವಜ ಹಿಡಿದ ಭಾರತಮಾತೆ, ಹಿಂದೆ ಸಿಂಹ, ಕೆಳಗೆ “ವಂದೇ ಮಾತರಂ” ಬರಹ ಇಷ್ಟು ಎದೆ ಮೇಲಿನ ಬ್ಯಾಡ್ಜಿನಲ್ಲಿದ್ದುವು. ಇವು ಆ ಸಾಮಾನ್ಯ ಅಕ್ಷರಸ್ಥ ವ್ಯಕ್ತಿಗೆ ಆರ್.ಎಸ್.ಎಸ್. ಸಂಘಟನೆಯ ಸಂಕೇತವಾಗಿ ಕಾಣಿಸಿದ್ದುವು.

ಆ ಎದೆ ಬಿಲ್ಲೆಯ ಹಿನ್ನೆಲೆ ಹೀಗಿದೆ. ಮೂರು ವರ್ಷಗಳ ಹಿಂದೆ ಒಂದು ಸಂಸ್ಥೆಯವರು ತಾವು ಭಾರತದ ರಾಷ್ಟ್ರಗೀತೆ “ವಂದೇ ಮಾತರಂ” ಹಾಡುವುದಿಲ್ಲ ಎಂದು ಘೋಷಿಸಿದ್ದು ಪತ್ರಿಕೆಗಳಲ್ಲಿ ವರದಿಯಾಯ್ತು. ಅದರಿಂದ ನನಗೆ ತೀವ್ರ ನೋವಾಗಿ ಆ ನೋವಿನ ಪರಿಣಾಮವಾಗಿ ಮೇಲೆ ಹೇಳಿದ ಎದೆಬಿಲ್ಲೆಯ ಐನೂರು ಪ್ರತಿಗಳನ್ನು ಕಲಾವಿದರಿಂದ ಮಾಡಿಸಿ ಹಲವರಿಗೆ ಹಂಚಿ ಅದನ್ನು ಸದಾ ಎದೆಮೇಲೆ ಧರಿಸಲು ಕೇಳಿಕೊಂಡೆ (ಚಿತ್ರ ನೋಡಿ). ಕೆಲವರು ಈಗಲೂ ಅದನ್ನು ಧರಿಸುವುದನ್ನು ನಾನು ಕಂಡಿದ್ದರೂ ಬಹುತೇಕವು ಮೂಲೆ ಸೇರಿವೆ. ನಾನು ಮಾತ್ರ ಮನೆಯಲ್ಲಿರಲಿ ಹೊರಗೆ ಹೋಗಲಿ ನನ್ನ ಎದೆಮೇಲೆ ಅದನ್ನು ಸದಾ ಧರಿಸಿರುತ್ತೇನೆ. ಅನೇಕರು ಅದನ್ನು ಕುತೂಹಲದಿಂದ ನೋಡಿದ್ದರೂ ಮೇಲಿನಂತಹ ಪ್ರತಿಕ್ರಿಯೆಯನ್ನು ಬಾಯಿಬಿಟ್ಟು ವ್ಯಕ್ತಪಡಿಸಿರಲಿಲ್ಲ. (ಎದೆಬಿಲ್ಲೆ ನನ್ನ ಹೃದಯದ ಭಾಗವಾಗಿದೆ).

ಆ ಬ್ಯಾಡ್ಜು ಆರ್.ಎಸ್.ಎಸ್. ಸಂಕೇತವೆಂದು ಅವರೆಲ್ಲರೂ ಭಾವಿಸಿದ್ದರೆ ನನಗೆ ಸಮಾಧಾನವಾಗುತ್ತದೆ.
 -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.