ಸಮಾಜ ಕಲ್ಯಾಣ ಇಲಾಖೆ ಇತ್ತೀಚೆಗೆ ಕೆಲವೆಡೆ ಅಸ್ಪೃಶ್ಯತಾ ನಿವಾರಣೆ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅದರಂತೆ ಚಿಕ್ಕನಾಯಕನಹಳ್ಳಿಯಲ್ಲಿ ನಡೆದ ಈ ಕಾರ್ಯಕ್ರಮ ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಇತರೆಡೆ ನಡೆಯುವ ಇಂತಹ ಕಾರ್ಯಕ್ರಮಗಳಿಗೂ ಈ ಪ್ರಶ್ನೆಗಳು ಅನ್ವಯವಾಗಬಹುದು.
ಇಲಾಖೆಯ ಕಾರ್ಯಕ್ರಮವನ್ನು ಸಂಘಟಕರು ಯಾರಿಗಾಗಿ ಏರ್ಪಡಿಸಿದ್ದರು ಎಂದು ಮೊದಲು ಪ್ರಶ್ನೆ ಹಾಕಿಕೊಳ್ಳಬೇಕಾಗುತ್ತದೆ. ಅಲ್ಲಿ ಕೂತಿದ್ದ ಬೆರಳೆಣಿಕೆಯಷ್ಟು ಮಂದಿಯಲ್ಲಿ ಅನೇಕರು ದಲಿತ ಮುಖಂಡರಾದರೆ, ಇನ್ನುಳಿದವರು ಇಲಾಖೆಯ ಸಿಬ್ಬಂದಿ ವರ್ಗದವರಾಗಿದ್ದರು.
ಇವರಿಬ್ಬರೇ ಸೇರಿ ತಾ ಮೇಲು ನಾ ಮೇಲು ಎಂದು ಭಾಷಣ ಮಾಡಿಕೊಳ್ಳುತ್ತಿದ್ದರು. ಇಲ್ಲಿ ಉದ್ಭವವಾಗುವ ಪ್ರಶ್ನೆ, ಅಸ್ಪೃಶ್ಯತೆಗೆ ಒಳಗಾಗುತ್ತಿರುವವರನ್ನೇ ಕೂರಿಸಿಕೊಂಡು ಅದರ ನಿವಾರಣೆ ಬಗ್ಗೆ ಪಾಠ ಮಾಡಿದರೆ ಉದ್ದೇಶ ಈಡೇರಿದಂತಾಗುತ್ತದೆಯೇ?
ಎರಡನೇ ಪ್ರಶ್ನೆ, ಕಾರ್ಯಕ್ರಮ ಆಯೋಜಿಸಲು ಆಯ್ಕೆ ಮಾಡಿಕೊಂಡಿದ್ದ ಸ್ಥಳಕ್ಕೆ ಸಂಬಂಧಿಸಿದ್ದು. ತಾಲ್ಲೂಕು ಕೇಂದ್ರದ ಹೃದಯ ಭಾಗವಾದ ಸುಸಜ್ಜಿತ ವೇದಿಕೆಯೊಂದರಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂದರೆ ಇದು ಅಸ್ಪೃಶ್ಯತೆಗೆ ಒಳಗಾಗುತ್ತಿರುವ ಸ್ಥಳವೂ ಅಲ್ಲ ಮತ್ತು ಅಸ್ಪೃಶ್ಯತೆ ಆಚರಿಸುತ್ತಿರುವ ಜನರೂ ಅಲ್ಲಿರಲಿಲ್ಲ. ಇಂಥ ಸ್ಥಳದಲ್ಲಿ ಅಸ್ಪೃಶ್ಯತೆ ನಿರ್ಮೂಲನೆ ಅರಿವು ಕಾರ್ಯಕ್ರಮ ಹಮ್ಮಿಕೊಂಡರೆ ಇದರ ಸಾರ್ಥಕತೆ ಯಾರಿಗೆ ಸಲ್ಲುತ್ತದೆ?
ಕೆಲವು ಹಳ್ಳಿಗಳ ಹೋಟೆಲ್‌ಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಈಗಲೂ ದಲಿತರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಕೆಲವೆಡೆ ದಲಿತರಿಗೆ ಕ್ಷೌರ ನಿರಾಕರಣೆ ಜಾರಿಯಲ್ಲಿದ್ದು ಹೊಸ ತಲೆಮಾರಿನ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಷ್ಟೆಲ್ಲ ಅಸ್ಪೃಶ್ಯತೆಯ ತಾಜಾ ಉದಾಹರಣೆಗಳಿರುವ ಹಳ್ಳಿಗಳಲ್ಲಿ ನಿವಾರಣೆ ಅರಿವಿನಂತಹ ಸರ್ಕಾರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬಹುದಾಗಿತ್ತು.
ಅಲ್ಲಿ ಸವರ್ಣೀಯರು ಮತ್ತು ದಲಿತರು ಇಬ್ಬರೂ ಇರುವುದರಿಂದ ಅವರಲ್ಲಿ ಕಾನೂನಿನ ಅರಿವು ಮೂಡಿಸಬಹುದಿತ್ತು. ಇಂತಹ ಸಾಧ್ಯತೆಗಳನ್ನು ತಳ್ಳಿಹಾಕಿ ಇಲಾಖೆ ತನ್ನ ಸಿಬ್ಬಂದಿ ಮತ್ತು ದಲಿತ ಮುಖಂಡರನ್ನಷ್ಟೇ ಇಟ್ಟುಕೊಂಡು ನಗರ ಕೇಂದ್ರಿತವಾಗಿ ಕಾರ್ಯಕ್ರಮ ಮಾಡಿದರೆ ಅದರ ಹಿಂದಿನ ಮಹತ್ವಾಕಾಂಕ್ಷೆ ಈಡೇರುವುದಿಲ್ಲ. ಇನ್ನಾದರೂ ವಾಸ್ತವ ಅರಿತು ಅಸ್ಪೃಶ್ಯತಾ ನಿವಾರಣೆ ಅರಿವು ಮೂಡಿಸಲು ಹಳ್ಳಿಗಳತ್ತ ತೆರಳಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.