ವ್ಯಕ್ತಿಯೊಬ್ಬನ ಸಾವಿನಿಂದ ಆತನ ಕುಟುಂಬಕ್ಕಾಗುವ ನಷ್ಟವನ್ನು ಯಾವುದೇ ಪ್ರಮಾಣದ ಆರ್ಥಿಕ ಪರಿಹಾರವೂ ಸರಿದೂಗಿಸಲಾರದು. ಇದು ದೇಶರಕ್ಷಣೆಯ ಕೆಲಸದಲ್ಲಿ ತೊಡಗಿಕೊಂಡ ಯೋಧನ ವಿಚಾರಕ್ಕೂ ಅನ್ವಯಿಸುವ ಮಾತು. ಹುತಾತ್ಮ ಯೋಧರ ಕುಟುಂಬಗಳು ಆರ್ಥಿಕವಾಗಿಯಾದರೂ ನೆಮ್ಮದಿಯಾಗಿ ಬದುಕುವಂತೆ ಸೂಕ್ತ ಪುನರ್ವಸತಿ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದರೆ ಈ ಕೆಲಸ ಒಂದು ಸ್ಪಷ್ಟ ನಿಯಮದ ಅಡಿಯಲ್ಲಿ ಜಾರಿಗೊಳ್ಳಬೇಕು.
ಆದರೆ ಯಾವ ಸೂಕ್ಷ್ಮ ಸಂದರ್ಭದಲ್ಲಿ ನಡೆಯಿತು ಎನ್ನುವುದನ್ನು ಆಧರಿಸಿ, ಇತ್ತೀಚೆಗೆ ಕೆಲವು ಯೋಧರ ಸಾವಿನ ಪ್ರಕರಣಗಳು ದೇಶದಲ್ಲಿ ಸಂಚಲನಕ್ಕೆ ಕಾರಣವಾಗಿವೆ. ಆ ಮೂಲಕ ಉಂಟಾದ ಸಾರ್ವಜನಿಕ ಒತ್ತಡಕ್ಕೆ ಮಣಿದು ಸರ್ಕಾರಗಳು ಮನಬಂದಂತೆ ಪರಿಹಾರದ ಮೊತ್ತ ಘೋಷಿಸಿವೆ. ಇಂತಹ ಕ್ರಮದಿಂದ, ಯೋಧನೊಬ್ಬನನ್ನು ಕಳೆದುಕೊಂಡ ಇನ್ನೊಂದು ಕುಟುಂಬ, ತಮ್ಮನ್ನು ಕಡೆಗಣಿಸಿದರು ಎಂಬ ಭಾವನೆ ಹೊಂದುವ ಎಲ್ಲ ಸಾಧ್ಯತೆಯೂ ಇದೆ. ಸೇನೆಯು ಕೇಂದ್ರ ಸರ್ಕಾರದ ಅಡಿ ಬರುವುದರಿಂದ ಪರಿಹಾರ ನೀಡಿಕೆಯ ಹೊಣೆಯನ್ನು ಕೇಂದ್ರವೇ ಹೊರುವುದು ಒಳ್ಳೆಯದು ಮತ್ತು ಅದು ತಮ್ಮವರನ್ನು ಕಳೆದುಕೊಂಡ ಯಾವ ಕುಟುಂಬಕ್ಕೂ ಒಂದಿಷ್ಟೂ ಅನ್ಯಾಯ ಆಗದಂತೆ ಏಕರೂಪದ ನಿಯಮದ ಅಡಿಯಲ್ಲಿ ಜಾರಿಗೊಳ್ಳುವುದು ಅಗತ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.