ADVERTISEMENT

ಒಂದೇ ಸ್ಮಶಾನವಿರಲಿ

ಡಾ.ಮೂಡ್ನಾಕೂಡು ಚಿನ್ನಸ್ವಾಮಿ
Published 14 ಜೂನ್ 2016, 4:31 IST
Last Updated 14 ಜೂನ್ 2016, 4:31 IST

ಪರಿಶಿಷ್ಟರ ಸ್ಮಶಾನ ಭೂಮಿ ಖರೀದಿಗೆ ಸರ್ಕಾರವು ₹ 42 ಕೋಟಿ ಅನುದಾನ ತೆಗೆದಿರಿಸಿದ್ದು, ಜನಸಂಖ್ಯೆ ಆಧರಿಸಿ ಜಾಗ ನಿಗದಿಪಡಿಸಬೇಕು ಎಂದು ಹೇಳಿದೆ (ಪ್ರ.ವಾ., ಜೂನ್‌ 13). ಇದರ ಅರ್ಥ, ಹಳ್ಳಿಯ ಸಾಮಾನ್ಯ ಸ್ಮಶಾನದಲ್ಲಿ ಪರಿಶಿಷ್ಟರ ಹೆಣಗಳಿಗೆ ಪ್ರವೇಶವಿಲ್ಲ ಎಂದಾಯಿತು.

ಇದು ಅಸ್ಪೃಶ್ಯತೆಯ ಅಮಾನುಷ ಮುಖ. ಹಳ್ಳಿಗಳಲ್ಲಿ ದಲಿತರಿಗೆ ಸವರ್ಣೀಯ ಹಿತೈಷಿಗಳು, ಸ್ನೇಹಿತರು ಇರುವುದಿಲ್ಲವೇ? ಸತ್ತ ಮೇಲೂ ಅವರು ಸಂತಾಪವನ್ನು, ದುಃಖವನ್ನು ದೂರದಿಂದಲೇ, ಕಾಂಪೌಂಡಿನ ಆಚೆ ನಿಂತು ಸಲ್ಲಿಸಲಿ ಎಂಬುದು ಸರ್ಕಾರದ ಇಂಗಿತವೇ? ಸಾವು ಎಲ್ಲರ ಮನೆಗಳಲ್ಲೂ ಮೈಲಿಗೆಯೆ. ಹೀಗಿರುವಾಗ ಪರಿಶಿಷ್ಟರ ಸಾವು ಹೇಗೆ ಭಿನ್ನ?

ಗ್ರಾಮೀಣ ಪರಿಸರದಲ್ಲಿ ಮನಸ್ಸುಗಳನ್ನು ಸಾಂಸ್ಕೃತಿಕವಾಗಿ ಒಗ್ಗೂಡಿಸುವ ಕೆಲಸ ಸ್ಮಶಾನದಿಂದಲೇ ಪ್ರಾರಂಭವಾಗಬೇಕು. ಇದಕ್ಕೆ ಸರ್ಕಾರದ ದಿಟ್ಟ ನಿರ್ಧಾರ ಅಗತ್ಯ. ಸರ್ಕಾರದ ಎಲ್ಲ ತೀರ್ಮಾನಗಳೂ ವೋಟಿನ ರಕ್ಷಣೆಗಾಗಿ ರಾಜಕೀಯ ತೀರ್ಮಾನಗಳೇ ಆಗಬೇಕಿಂದಿಲ್ಲ. ಧರ್ಮವನ್ನಾಧರಿಸಿ (ಧಾರ್ಮಿಕ ವಿಧಿಗಳು ಬೇರೆಯಾಗಿರುವುದರಿಂದ) ಬೇರೆ ಜಾಗವನ್ನು ನಿಗದಿಪಡಿಸಿದರೆ ಯಾರೂ ಆಕ್ಷೇಪಿಸಲಾರರು.

ದಲಿತರಿಗೆ ಮಾತ್ರ ಬೇರೆ ಸ್ಮಶಾನವೆನ್ನುವುದಾದರೆ ಸರ್ಕಾರವೇ ಅಸ್ಪೃಶ್ಯತೆಯನ್ನು ಪೋಷಿಸುತ್ತಿದೆ ಎಂದಾಗುತ್ತದೆ. ಹಾಗಾದರೆ ಕೆಲವು ಹಳ್ಳಿಗಳಲ್ಲಿ ದಲಿತರಿಗೆ ಬೇರೆ ದೇವಸ್ಥಾನವಿರಲಿ ಎಂಬ ಜಾತಿವಾದಿಗಳ ಬೇಡಿಕೆಗೆ ಸಮರ್ಥನೆ ಸಿಕ್ಕಿದಂತಾಗುತ್ತದೆ. ಮುಂದೊಮ್ಮೆ ಶಾಲೆಗಳಲ್ಲಿ ಆಟದ ಮೈದಾನ ಬೇರೆ ಇರಲಿ ಎಂಬ ಬೇಡಿಕೆ ಬಂದರೆ ಸರ್ಕಾರವು ಮನ್ನಿಸುವುದೇ?  ಕೇರಿಗಳನ್ನು ಮುರಿಯುವ ಬದಲು ಜಾತಿಯಾಧಾರಿತ ಸ್ಮಶಾನಗಳನ್ನು ನಿರ್ಮಿಸುವುದು ಭಾರತದ ಸಾಂಸ್ಕೃತಿಕ ಚಹರೆಗೆ ಕಳಂಕ ಉಂಟುಮಾ ಡುತ್ತದೆ. ಇದು ಒಂದು ಮೌಢ್ಯ ಎಂದು ಪರಿಗಣಿಸಿ ಸರ್ಕಾರ ತನ್ನ ನಿಲುವು ಬದಲಿಸಿಕೊಳ್ಳಲಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.