ADVERTISEMENT

ಕಡಿಯುವುದು ಸರಿಯಲ್ಲ

ಪ್ರಕಾಶ್‌ ಕಾಕಲ್‌, ಹೆಗ್ಗೋಡು
Published 30 ಜೂನ್ 2016, 19:30 IST
Last Updated 30 ಜೂನ್ 2016, 19:30 IST

ಹಳೆಯ ಮತ್ತು ದುರ್ಬಲ ಮರಗಳನ್ನು ತೆರವುಗೊಳಿಸಬೇಕು ಎಂದು ಬೆಂಗಳೂರಿನ ಮೇಯರ್ ಅವರು ಹೇಳಿರುವುದು, ಆಗಬಹುದಾದ ಅನಾಹುತಗಳನ್ನು ತಪ್ಪಿಸುವ ಮುಂಜಾಗ್ರತಾ ಕ್ರಮವೆಂದು ಮೇಲ್ನೋಟಕ್ಕೆ ಅನ್ನಿಸುತ್ತದೆ. ಆದರೆ ಅದರಿಂದ ಭವಿಷ್ಯದಲ್ಲಿ ಪರಿಸರದ ಮೇಲಾಗುವ ಅನಾಹುತಗಳ ಬಗ್ಗೆಯೂ ಆಲೋಚಿಸಬೇಕಾಗುತ್ತದೆ.

ದುರ್ಬಲ ಮರಗಳನ್ನು ತೆಗೆಸಬೇಕು ನಿಜ, ಆದರೆ ಹಲವಾರು ಮರಗಳ ರೆಂಬೆ ಕೊಂಬೆಗಳನ್ನು ಕತ್ತರಿಸಿ ಹಾಗೆಯೇ ಉಳಿಸಿಕೊಳ್ಳುವತ್ತಲೂ ಗಮನಹರಿಸಬೇಕು.  ಮರಗಳು ಗಾಳಿಗೆ ಏಕೆ ಉರುಳುತ್ತಿರಬಹುದು ಎನ್ನುವುದರ ವೈಜ್ಞಾನಿಕ ಕಾರಣವನ್ನೂ ಹುಡುಕಬೇಕು. ಕಾಡಿನಲ್ಲಿರುವ ಎಷ್ಟೋ ಮರಗಳು ಇದಕ್ಕಿಂತ ಹೆಚ್ಚು ಗಾಳಿಯ ರಭಸವನ್ನು ತಡೆದುಕೊಳ್ಳುತ್ತವೆ.

ಡಾಂಬರೀಕರಣ ಮತ್ತು ಕಾಂಕ್ರೀಟೀಕರಣದಿಂದ ನಗರದಲ್ಲಿರುವ ಮರಗಳ ಸುತ್ತ ಕೇವಲ ಒಂದು ಅಥವಾ ಎರಡು ಅಡಿಯಷ್ಟು ಮಾತ್ರ ನೀರು ಇಂಗುತ್ತದೆ. ಮರಗಳ ಬೇರು ನೆಲಕ್ಕೆ ಇಳಿದಿರುವ ಮಣ್ಣಿನ ಭಾಗ ಮಾತ್ರ ನೀರು ಕುಡಿದು, ಮಣ್ಣು ಸಡಿಲವಾಗಿ, ನೀರು ಕುಡಿಯದೇ ಇರುವ ಒಣ ಮಣ್ಣಿನಿಂದ ಬೇರ್ಪಡುತ್ತದೆ. ಗಾಳಿಯ ರಭಸಕ್ಕೆ ಸಡಿಲವಾದ ಮಣ್ಣು ಬೇರನ್ನು ಹಿಡಿದಿಡಲಾಗದೆ ಮರ ನೆಲಕ್ಕೆ ಉರುಳುತ್ತದೆ.

ಫುಟ್‌ಪಾತ್‌ ನಿರ್ಮಿಸುವಾಗ ಮರಗಳ ಸುತ್ತ 10-15 ಅಡಿ ಅಂತರದವರೆಗೆ ನೀರು ನೇರವಾಗಿ ಇಳಿಯುವಂತಹ ವೈಜ್ಞಾನಿಕ ಮಾದರಿ ಅಳವಡಿಸಿಕೊಳ್ಳಬೇಕೇ ಹೊರತು ಇರುವ ಮರವನ್ನು ಕಡಿಯುವುದು ಪರಿಹಾರವಲ್ಲ. ಗುತ್ತಿಗೆ ಮಾಫಿಯಾ ಈಗಾಗಲೇ ಎಷ್ಟು ಹೆಚ್ಚು ಮರಗಳನ್ನು ಉರುಳಿಸಬಹುದು ಎನ್ನುವ ಲೆಕ್ಕಾಚಾರದಲ್ಲಿ ಗರಗಸ, ಕೊಡಲಿಗಳ ಸಿದ್ಧತೆ ಮಾಡಿಕೊಂಡು ಮಾತುಕತೆ ನಡೆಸುತ್ತಿರಬಹುದು. ಪರಿಸರ ಪ್ರೇಮಿಗಳು ಕೂಡಲೇ ಎಚ್ಚೆತ್ತು ಪರಿಸರದ ಮೇಲೆ ಆಗುವ ಅನಾಹುತವನ್ನು ತಪ್ಪಿಸಲು ಸಜ್ಜಾಗಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.