‘ವಾಚಕರವಾಣಿ’ಯಲ್ಲಿ ಜುಲೈ 21ರಂದು ಪ್ರಕಟವಾದ ‘ಮಾರ್ಯಾದೆ ಬೇಡವೇ?’ ಎಂಬ ಪತ್ರದ ಲೇಖಕರಿಗೆ ನನ್ನ ಕೆಲವು ಪ್ರಶ್ನೆಗಳು: ದೇಶ ಬ್ರಿಟಿಷರ ಅಧೀನದಲ್ಲಿ
ದ್ದಾಗ, ವಿದೇಶಿ ಆಳ್ವಿಕೆಯನ್ನು ವಿರೋಧಿಸುತ್ತಿದ್ದ ಪುರುಷರಿಗೂ ಅವರು ಧರಿಸುತ್ತಿದ್ದ ಪ್ಯಾಂಟು-ಷರ್ಟು ಅನುಕೂಲಕರವೆನಿಸಿ ಅವನ್ನು ತೊಡಲು ಅಭ್ಯಂತರವೇನಿರಲಿಲ್ಲವಷ್ಟೇ. ಮುಂದೆಯೂ ಈ ಪೋಷಾಕು ಭಾರತೀಯವೇ ಎನಿಸುವಷ್ಟು ಎಲ್ಲರೂ ತೊಡುತ್ತಿದ್ದಾರೆ. ಆದರೆ, ಮಹಿಳೆಯರು ಇದೇ ಬಟ್ಟೆ ತೊಟ್ಟರೆ ಅಥವಾ ಅಪ್ಪಟ ಭಾರತೀಯವೇ ಆದ ಚೂಡಿದಾರ್ ಧರಿಸಿದರೆ, ಹಿಂದೂ ಸಂಪ್ರದಾಯವಾದಿಗಳ ಕಣ್ಣೇಕೆ ಕೆಂಪಾಗುತ್ತದೆ?
ಮನೆಯಲ್ಲಿ ಕೆಲಸ ಮಾಡುವಾಗಲೋ, ದ್ವಿಚಕ್ರ ವಾಹನ ಚಾಲಕರೋ- ಹಿಂಬದಿ ಪ್ರಯಾಣಿಕರೋ ಆದಾಗ ಅಥವಾ ಉದ್ಯೋಗದ ಸ್ಥಳಗಳಲ್ಲಿ ಸೀರೆಗಿಂತ ಚೂಡಿದಾರ್ ಅಥವಾ ಪ್ಯಾಂಟು-ಷರ್ಟು ಅನುಕೂಲಕರವೆನಿಸಿ ಮಹಿಳೆಯರು ಅದನ್ನು ಉಟ್ಟರೆ, ಅದಕ್ಕೇಕೆ ಅಷ್ಟೊಂದು ಆಕ್ಷೇಪ? ಅದು ಹೇಗೆ ಅಸಭ್ಯವಾಗುತ್ತದೆ?
ಸೀರೆ, ದ್ವಿಚಕ್ರ ವಾಹನದ ಚಕ್ರಗಳಿಗೆ ಅಥವಾ ಕಾರ್ಖಾನೆಗಳ ಯಂತ್ರಗಳಿಗೆ ಸಿಲುಕಿ ಭೀಕರ ಅಪಘಾತಗಳನ್ನು ಉಂಟುಮಾಡುವುದರ ಬಗ್ಗೆ ಇವರಿಗೆ ಅರಿವಿದೆಯೇ? ಅಲ್ಲದೆ ತಮಗೆ ತೊಡಲು, ಓಡಾಡಲು ಸಲೀಸು ಎಂಬ ಕಾರಣದಿಂದ ತಮಗೆ ಬೇಕಾದ ಉಡುಗೆಯನ್ನು ತೊಡುವ ಹಕ್ಕು ಹೆಣ್ಣುಮಕ್ಕಳಿಗೆ ಇದೆಯಲ್ಲವೇ! ಈ ಹಿಂದೂ ಸಂಸ್ಕೃತಿ ವಕ್ತಾರರೇಕೆ ಚಿತ್ತ ವಿಕಾರಗೊಳಿಸುವ ಅಶ್ಲೀಲ ಚಲನಚಿತ್ರ, ಇಂಟರ್‌ನೆಟ್ ಫೋಟೊ-ವಿಡಿಯೊಗಳ ಬಗ್ಗೆ ಸೊಲ್ಲೆತ್ತುವುದಿಲ್ಲ?
ಅಂದರೆ, ಇದು ಹೆಣ್ಣುಮಕ್ಕಳ ಕುರಿತಾದ, ಅವರ ಉಡುಗೆ-ತೊಡುಗೆ, ಅವರ ಸ್ವಾತಂತ್ರ್ಯದ ಕುರಿತಾದ ಅಸಹನೆ ಎಂದು ತಿಳಿದರೆ ತಪ್ಪಾದೀತೇ? ಅವರು ಧರಿಸುವ ಬಟ್ಟೆಗೂ ಅವರ ಮೇಲಿನ ಅತ್ಯಾಚಾರಕ್ಕೂ ನಂಟು ಕಲ್ಪಿಸುವುದು, ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಅವರದ್ದೇ ಎನ್ನುವ ಹಾಗೆ ಮಾತನಾಡುವುದು, ಅವರ ಮೇಲೆ ವಸ್ತ್ರ ಸಂಹಿತೆ ಹೇರಲು ಪ್ರಯತ್ನಿಸುವುದು... ಇವೆಲ್ಲಾ ಹಿಂದಿನ ಊಳಿಗಮಾನ್ಯ ಮೌಲ್ಯಗಳ ಪಳೆಯುಳಿಕೆಗಳಾಗಿ ಹೆಣ್ಣುಮಕ್ಕಳ ಜೀವನವನ್ನು ನಿರ್ದೇಶಿಸಲು ಹೊರಟಿವೆ. ಈ ದಾಳಿಯನ್ನು ಪ್ರತಿರೋಧಿಸಲೇಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.