ಪ್ರಧಾನಿ ನರೇಂದ್ರ ಮೋದಿ ಅವರು ಒಳ್ಳೆಯ ಭಾಷಣಕಾರ. ಆದರೆ ಬೆಳಗಾವಿಯಲ್ಲಿ ಇತ್ತೀಚೆಗೆ ಅವರು ಮಾಡಿದ ಭಾಷಣ ಮಾತ್ರ ಬಹಳ ಸಪ್ಪೆಯಾಗಿತ್ತು.
ರೈತರಿಗಾಗಿಯೇ ಭಾಷಣ ಮಾಡಲು ದೆಹಲಿಯಿಂದ ಬಂದಿದ್ದ ಮೋದಿ ಅಲ್ಲಲ್ಲಿ ಹೇಳಿದ್ದ ಮಾತುಗಳನ್ನು ಪುನರುಚ್ಚರಿಸಿದ್ದು ಬಿಟ್ಟರೆ ಹೊಸದೇನನ್ನೂ ಹೇಳದೆ ನಾಡಿನ ರೈತರಿಗೆ ನಿರಾಶೆ ಉಂಟುಮಾಡಿದರು.
ಬೆಳೆ ಬೆಳೆದು ಫಸಲು ಬರುವವರೆಗಿನ ಅವರ ಮಾತುಗಳು ಹಿತಕರ. ನಂತರ? ಬೆಳೆದ ಬೆಳೆಗೆ ಬೆಲೆ ಸಿಗದೆ ಬೀದಿಗೆ ಚೆಲ್ಲುವ ರೈತನ ಸ್ಥಿತಿ ಇವರ ನೆನಪಿಗೆ ಬಂದಿಲ್ಲ. ರೈತನ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗದಿಯ ಬಗೆಗೆ, ಬೆಲೆ ಬಿದ್ದು ಹೋದಾಗ ರೈತನ ನೆರವಿಗೆ ಆವರ್ತಕ ನಿಧಿ, ಉತ್ತಮ ಮಾರಾಟ ವ್ಯವಸ್ಥೆಯ ಬಗೆಗೆ ಯಾವ ಕ್ರಮವನ್ನೂ ಘೋಷಿಸಲಿಲ್ಲ.
ಉತ್ತರ ಕರ್ನಾಟಕದ ಮತ್ತೊಂದು ಜರೂರಾದ ಕಳಸಾ ಬಂಡೂರಿ ನದಿ ನೀರು ವಿವಾದಕ್ಕೆ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಂಧಾನ ನಡೆಸುವ ಬಗೆಗೂ ಏನೂ ಹೇಳಲಿಲ್ಲ. ಅಷ್ಟು ದೂರದಿಂದ ಹಾರಿ ಬಂದ ಪ್ರಧಾನಿ, ಕನಸಿನಲ್ಲಿ ವರ ಕೊಡಲು ಬಂದ ದೇವರಂತೆ ಹೊರಟೇಹೋದರು, ಯಾವ ಪ್ರಯೋಜನವೂ ಇಲ್ಲದೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.