ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶಗಳು ಬಂದ ದಿನದಿಂದಲೂ ಬಳ್ಳಾರಿಯ ರಸ್ತೆ, ವೃತ್ತಗಳ ತುಂಬ ಖಾಸಗಿ ಕಾಲೇಜುಗಳ ಬಣ್ಣ-ಬಣ್ಣದ ಜಾಹೀರಾತುಗಳೇ ತುಂಬಿವೆ. ಎತ್ತ ಕಣ್ಣು ಹಾಯಿಸಿದರೂ ಯಾವುದೋ ಒಂದು ಕಾರ್ಪೊರೇಟ್ ಕಾಲೇಜಿನ ಫ್ಲೆಕ್ಸ್, ಬ್ಯಾನರುಗಳೇ ಕಣ್ಣಿಗೆ ರಾಚಿ, ಹಿಂಸೆ ನೀಡುತ್ತವೆ. ಇವುಗಳಲ್ಲಿ ಬಹುತೇಕ ಬ್ಯಾನರ್‌ಗಳು ಅನಧಿಕೃತ. ಈ ಮೂಲಕ ಶಿಕ್ಷಣವು ಸೇವಾ ಕ್ಷೇತ್ರದಿಂದ ಸಂಪೂರ್ಣ ವಾಣಿಜ್ಯ ಕ್ಷೇತ್ರಕ್ಕೆ ಅಸಹ್ಯಕರ ಕಪ್ಪೆ ಜಿಗಿತ ಮಾಡಿದ್ದಕ್ಕೆ ಇವುಗಳು ಪುರಾವೆ ನೀಡುತ್ತಿವೆ.
ಇವುಗಳ ಪ್ರಚಾರದ ಭರಾಟೆ ಎಷ್ಟಿದೆ ಎಂದರೆ ಸೋಪು-ಶ್ಯಾಂಪು ಪ್ರಚಾರವನ್ನೂ ನಾಚಿಸುತ್ತಿವೆ. ಮತ್ತೆ, ತಮ್ಮ ಗ್ರಾಹಕ ಪೋಷಕರನ್ನು ಸೆಳೆಯಲು ಐಸಿಎಸ್‌ಇ, ಸಿಬಿಎಸ್‌ಇ ಪಠ್ಯಕ್ರಮ ಎಂದೂ, ಸಿಇಟಿ, ಐಐಟಿ, ಜೆಇಇ ಕೋಚಿಂಗ್ ಎಂದೆಲ್ಲಾ ಮರುಳು ಮಾಡುವ ತಂತ್ರಗಳ ಮೂಲಕ ಎಷ್ಟು ಸಾಧ್ಯವೋ ಅಷ್ಟು ದುಡ್ಡು ಪೀಕಲು ತುದಿಗಾಲಲ್ಲಿ ನಿಂತಿವೆ. ಶಿಕ್ಷಣ ರಂಗದ ಎಲ್ಲ ಮೌಲ್ಯಗಳನ್ನೂ ಗಾಳಿಗೆ ತೂರಿವೆ! ಸಾಕಪ್ಪ ಈ ಖಾಸಗಿ ಶಾಲಾ-ಕಾಲೇಜುಗಳ ಸಹವಾಸ ಎನ್ನುವಂತೆ ಮಾಡಿವೆ.
ಆದರೆ ನಿನ್ನೆ ಸುರಿದ ಭಾರೀ ಮಳೆ ಮತ್ತು ಗಾಳಿ, ಬಳ್ಳಾರಿಯ ರಣಬಿಸಿಲನ್ನು ಮಾತ್ರ ತಂಪು ಮಾಡಲಿಲ್ಲ, ಈ ಖಾಸಗಿ ಶಿಕ್ಷಣ ಸಂಸ್ಥೆಗಳ ಬ್ಯಾನರ್‌ಗಳನ್ನೆಲ್ಲಾ ನೆಲಕ್ಕುರುಳಿಸಿ, ಹಚ್ಚ ಹಸಿರ ಮರಗಳನ್ನು ಕಣ್ಣಿಗೆ ಕಾಣುವಂತೆ ಮಾಡಿ, ಮನಕ್ಕೆ ಮುದ ನೀಡಿ ಆಹ್ಲಾದಕರ ವಾತಾವರಣ ಸೃಷ್ಟಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.