ಎಂ.ಎಂ. ಕಲಬುರ್ಗಿ ಅವರು ಈ ನಾಡು ಕಂಡ ಅಪರೂಪದ ಸಾಹಿತಿ, ಚಿಂತಕ. ಇವರ ಸಾವು, ಸಾರಸ್ವತ ಲೋಕದಲ್ಲಿ ತಲ್ಲಣ, ದಿಗ್ಭ್ರಮೆ ಉಂಟುಮಾಡಿದೆ. ಕನ್ನಡ ಸಾಹಿತ್ಯ ಲೋಕದಲ್ಲಿ ಸಾಹಿತಿಯೊಬ್ಬರು ಹಂತಕನ ಗುಂಡಿಗೆ ಬಲಿಯಾದುದು ಇದೇ ಮೊದಲು! ಈ ಹಿಂದೆ ಸಾಹಿತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಯಿದೆ.
ಹೇಮ–ಭೂಮಿ–ಮಾನಿನಿಯರಿಗಾಗಿ ಹತ್ಯೆಗೊಳಗಾದವರು ಕೋಟಿ. ಆದರೆ, ಸರಸ್ವತಿಪುತ್ರ ಸಾಹಿತಿಯೊಬ್ಬರು ಹಂತಕನ ಗುಂಡಿಗೆ ಬಲಿಯಾದುದು ಇದೇ ಮೊದಲು! ನಿರಂಕುಶಮತಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಉತ್ತರ ರೂಪವಾಗಿ ಹತ್ಯೆ ಖಂಡಿತವಾಗಿ ಪರ್ಯಾಯ ಮಾರ್ಗವಲ್ಲ. ಸಾಧುವೂ ಅಲ್ಲ!
ಕಲಬುರ್ಗಿಯವರು ಕಲ್ಯಣನಗರ (ಧಾರವಾಡ) ದಿಂದ ಹಂಪಿಗೆ (ಕನ್ನಡ ವಿಶ್ವವಿದ್ಯಾಲಯ) ಕ್ರಮಿಸಿದ ‘ಮಾರ್ಗ’ ಅಷ್ಟೊಂದು ಸುಲಭವಾಗಿರಲಿಲ್ಲ. ಮಾರ್ಗದುದ್ದಕ್ಕೂ
ಕಲ್ಲು, ಮುಳ್ಳು ಕಂಟೆಗಳು ನಡೆಯುವವರ ಕಾಲುಗಳಿಗೆ ಚುಚ್ಚಿ ಗಾಯ ಮಾಡಿರುವುದು ನಿಜ. ಈ ನೋವು ಪ್ರಜಾಪ್ರಭುತ್ವ, ಅಭಿವ್ಯಕ್ತಿ ಸ್ವಾತಂತ್ರ್ಯ, ಮತ್ತೊಬ್ಬರ ನಂಬಿಕೆಗಳ ಮೇಲೆ ಪ್ರಹಾರ, ಸಾಮಾಜಿಕ ಬದ್ಧತೆ, ಪ್ರಚಾರಕ್ಕಾಗಿ ವಿವಾದ ಇವುಗಳ ಬೆಳಕಿನಲ್ಲಿ ನೋಡಿದರೆ, ತೀವ್ರ ವೇದನೆಗಳ ಜತೆ ಬೇರೆ ಬೇರೆ ಭಾವಗಳನ್ನು ಮೂಡಿಸಬಹುದು. ಈ ಅನುಭವಗಳು ಅವರವರ ಭಾವಕ್ಕೆ ಅವರವರ ತೆರನಾಗಿ ಕಟು ಸತ್ಯ ಗೋಚರಿಸಿದರೆ ಆಶ್ಚರ್ಯಪಡಬೇಕಿಲ್ಲ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.