ADVERTISEMENT

ಕಳಸಾ– ಬಂಡೂರಿ

ಪಂಪಾಪತಿ ಹಿರೇಮಠ ಧಾರವಾಡ
Published 17 ಜುಲೈ 2016, 19:30 IST
Last Updated 17 ಜುಲೈ 2016, 19:30 IST

ಕಳಸಾ– ಬಂಡೂರಿ, ಮಹಾದಾಯಿ ನದಿ ತಿರುವು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಉತ್ತರ ಕರ್ನಾಟಕದ  ನಾಲ್ಕೈದು ಜಿಲ್ಲೆಗಳ ಜನರು ನಾಲ್ಕು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ನರಗುಂದದಲ್ಲಿ ನೀರಿಗಾಗಿ ನಿರಂತರ ನಿರಶನ ಆರಂಭವಾಗಿ ಒಂದು ವರ್ಷ ಕಳೆದರೂ ಜನಪ್ರತಿನಿಧಿಗಳಿಂದ ಸರಿಯಾದ ಸ್ಪಂದನ ವ್ಯಕ್ತವಾಗಿಲ್ಲ.

ನದಿ ತಿರುವು ಯೋಜನೆಯನ್ನು ಚುನಾವಣೆ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ರಾಜಕೀಯ ಅಸ್ತ್ರವನ್ನಾಗಿ ಬಳಸಿದರು. ಆದರೆ ಯೋಜನೆ ಜಾರಿಗೆ  ಪ್ರಾಮಾಣಿಕ ಪ್ರಯತ್ನ ಮಾಡಲೇ ಇಲ್ಲ. ಸಮಸ್ಯೆಯ ತೀವ್ರತೆಯನ್ನು ಅರ್ಥ ಮಾಡಿಕೊಳ್ಳಲಿಲ್ಲ.

ಕಳಸಾ ಬಂಡೂರಿ ನಾಲೆಯನ್ನು ಮಲಪ್ರಭಾ ನದಿಗೆ ಜೋಡಿಸಿದರೆ ಪಶ್ಚಿಮ ಘಟ್ಟಗಳ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಗೋವಾ ಸರ್ಕಾರ ಮೊಂಡು ವಾದ ಮಾಡುತ್ತಿದೆ. ಸಮುದ್ರದ ಪಾಲಾಗುವ ನೀರನ್ನು ಕರ್ನಾಟಕಕ್ಕೆ ಹರಿಸಲು ಅನುವು ಮಾಡಿಕೊಟ್ಟರೆ ಯಾವುದೇ ನಷ್ಟವಾಗುವುದಿಲ್ಲ. ಆದರೆ ಆ ರಾಜ್ಯ ಈ ವಿಷಯವನ್ನು ಪ್ರತಿಷ್ಠೆ ಮಾಡಿಕೊಂಡಿದೆ.

ಈ ಯೋಜನೆಯ ಅನುಷ್ಠಾನದಿಂದ ಉತ್ತರ ಕರ್ನಾಟಕದ ಕೆಲವು ನಗರ–ಪಟ್ಟಣಗಳ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯಲಿದೆ. ಮಾತುಕತೆ ಮೂಲಕ ವ್ಯಾಜ್ಯ ಇತ್ಯರ್ಥಕ್ಕೆ ಪ್ರಯತ್ನಗಳು ನಡೆಯಬೇಕು. ರಾಜಕೀಯ ಲಾಭ–ನಷ್ಟದ ಲೆಕ್ಕಾಚಾರ ಬದಿಗಿಟ್ಟು ಎಲ್ಲ ಪಕ್ಷಗಳ ಪ್ರಮುಖರು ಇದಕ್ಕೆ ಸಹಕರಿಸಬೇಕು. ವಿವಾದವನ್ನು ಸೌಹಾರ್ದದಿಂದ ಬಗೆಹರಿಸಲು ಕೈಜೋಡಿಸಬೇಕು.  ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಭಾವ ಬೀರಿ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮನವೊಲಿಸಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.