ಕಸ ವಿಂಗಡಿಸದಿದ್ದರೆ ವಿಲೇವಾರಿ ಮಾಡುವುದಿಲ್ಲ. ದಂಡ ವಿಧಿಸಲಾಗುವುದು ಮತ್ತು ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಬಿ.ಬಿ.ಎಂ.ಪಿ. ಎಚ್ಚರಿಕೆ ನೀಡಿದೆ. ತಮಾಷೆಯ ಸಂಗತಿ ಏನೆಂದರೆ ಬಿ.ಬಿ.ಎಂ.ಪಿ. ಕಟ್ಟುನಿಟ್ಟಾಗಿ, ಸಮಯಕ್ಕೆ ಸರಿಯಾಗಿ ಕಸ ಸಂಗ್ರಹ ಕೆಲಸ ಮಾಡದಿರುವುದು. ಬೆಂಗಳೂರಿನ ಹಲವಾರು ಕಡೆಗಳಲ್ಲಿ, ರಸ್ತೆ ಬದಿಗಳೇ ಕಸ ಸಂಗ್ರಹ ಕೇಂದ್ರವಾಗುತ್ತಿರುವುದು ಇದಕ್ಕೆ ಸಾಕ್ಷಿ. ಎಷ್ಟೋ ಅಪಾರ್ಟ್‌ಮೆಂಟ್‌ಗಳಲ್ಲಿ ಕಸ ಸಂಗ್ರಹಕ್ಕೆ ಹದಿನೈದು ಇಪ್ಪತ್ತು ದಿವಸಕ್ಕೊಮ್ಮೆ ಬಂದರೆ ದೊಡ್ಡದು! ಬಿ.ಬಿ.ಎಂ.ಪಿ. ಗುತ್ತಿಗೆದಾರರು ಹೀಗೆ ನಿರ್ಲಕ್ಷ್ಯ ತೋರಿಸಿದರೆ ನಾಗರಿಕರು ಕಸವನ್ನು ಏನು ಮಾಡಬೇಕು? ಅಪಾರ್ಟ್‌ಮೆಂಟ್‌ಗಳಲ್ಲಿ ಕಸದ ರಾಶಿ ಜಾಸ್ತಿಯಾಗುವುದನ್ನೇ ಕಾದು, ಮಾಮೂಲಿ ಕೊಡುವುದಕ್ಕಿಂತ ಹೆಚ್ಚು ಹಣ ಕಕ್ಕಿಸುವುದು ಈ ಗುತ್ತಿಗೆದಾರರ ಬ್ಲ್ಯಾಕ್‌ಮೇಲ್ ತಂತ್ರ ಕೂಡಾ.
ಆದ್ದರಿಂದ ನಾಗರಿಕರಿಗೆ ದಂಡ, ಜೈಲು ಎಂದೆಲ್ಲಾ ಹೆದರಿಸುವ ಮೊದಲು ಬಿ.ಬಿ.ಎಂ.ಪಿ. ಅಧಿಕಾರಿಗಳು ಕಸ ಸಂಗ್ರಹ ಕಾರ್ಯದಲ್ಲಿ ವಿಳಂಬ ನೀತಿ ತೋರಿಸಲೇಬಾರದೆಂದು ಗುತ್ತಿಗೆದಾರರಿಗೆ ತಾಕೀತು ಮಾಡಬೇಕು. ಅಷ್ಟೇ ಅಲ್ಲ, ಕಸದ ಮರುಬಳಕೆಯತ್ತ ಗಮನ ಕೊಡುವುದು ಇಂದಿನ ತುರ್ತು. ಪಕ್ಕದ ಹಳ್ಳಿಗಳಿರುವುದು ಕಸ ಸುರಿಯಲು ಅಲ್ಲ. ಅಲ್ಲಿ ವಾಸಿಸುವವರೂ ನಮ್ಮ ನಿಮ್ಮಂತೆ ಮನುಷ್ಯರು ಎಂಬ ಸಾಮಾನ್ಯಜ್ಞಾನ ಸರ್ಕಾರಕ್ಕಿದ್ದಿದ್ದರೆ ಮುಗ್ಧಹಳ್ಳಿಗರು ಈಗ ಚೀರಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಕಸದಿಂದ ದೊಡ್ಡ ಮಟ್ಟದಲ್ಲಿ ವಿದ್ಯುತ್ ಮತ್ತು ಗೊಬ್ಬರ ಉತ್ಪಾದಿಸುವ ಕೆಲಸ ಎಂದೋ ಆಗಬೇಕಿತ್ತು. ಇದನ್ನು ಇನ್ನಾದರೂ ಪ್ರಾಮಾಣಿಕವಾಗಿ ಮಾಡದೆ ಹೋದರೆ ಬಿ.ಬಿ.ಎಂ.ಪಿ. ಈಗ ಮಾಡುತ್ತಿರುವ ‘ಜಾಗೃತಿ’ ಬರೀ ಪ್ರಹಸನವಾಗುತ್ತದೆ. ಮುಂದೊಂದು ದಿನ ಪಕ್ಕದ ಹಳ್ಳಿಗಳು ಮಾತ್ರವಲ್ಲ ಇಡೀ ಬೆಂಗಳೂರು ವಾಸಕ್ಕೆ ಯೋಗ್ಯವಲ್ಲದ ನಗರವಾಗುವುದರಲ್ಲಿ ಸಂಶಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.