ADVERTISEMENT

ಕಾರಣ ತಿಳಿಸಬೇಕಿತ್ತು

ಗಿರೀಶ ವಿ.ವಾಘ್
Published 23 ಅಕ್ಟೋಬರ್ 2015, 19:30 IST
Last Updated 23 ಅಕ್ಟೋಬರ್ 2015, 19:30 IST

ವಿಧಾನ ಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ಶಿಫಾರಸನ್ನು  ಅನುಸರಿಸಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇತರೆ ಹಿಂದುಳಿದ ಜಾತಿಯವರಿಗೂ (ಒಬಿಸಿ) ಬ್ಯಾಕ್‌ಲಾಗ್‌ ಸೌಲಭ್ಯವನ್ನು ಅನ್ವಯಿಸಿದೆ ಎಂದು ವರದಿ ಮಾಡಲಾಗಿದೆ (ಪ್ರ.ವಾ., ಅ. 6). ವಿಧಾನ ಮಂಡಲದ ಸಮಿತಿ ಈ ಶಿಫಾರಸು ಮಾಡಬೇಕಾಗಿ ಬಂದುದಕ್ಕೆ ಕಾರಣಗಳನ್ನು ತಿಳಿಸಿದ್ದರೆ ಉಪಯುಕ್ತವಾಗುತ್ತಿತ್ತು.

ಹಿಂದುಳಿದ ಜಾತಿಗಳನ್ನು ಐದು ಪ್ರವರ್ಗಗಳಾಗಿ ವಿಂಗಡಿಸಲಾಗಿದೆ. ಇವುಗಳಲ್ಲಿ ಯಾವ ಯಾವ ಪ್ರವರ್ಗಕ್ಕೆ ಮೀಸಲಾಗಿಡಲಾಗಿದ್ದ ಯಾವ ಯಾವ ಹುದ್ದೆಗಳಿಗೆ, ನಿಗದಿಯಾಗಿದ್ದ ಅರ್ಹತೆಯುಳ್ಳ ಅಭ್ಯರ್ಥಿಗಳು ಲಭ್ಯವಾಗಿಲ್ಲ ಮತ್ತು ಇಂತಹ ಸಂದರ್ಭ ಎಷ್ಟು ಸಾರಿ ಉದ್ಭವಿಸಿತ್ತು ಎಂಬುದನ್ನು ಸಮಿತಿಯು ಅಧ್ಯಯನ ಮಾಡಿ ಈ ಶಿಫಾರಸು ಮಾಡಿರಬೇಕು.

ನಮ್ಮ ರಾಜ್ಯವು ಈಗ ಒಳಗೊಂಡಿರುವ ಬಹುಪಾಲು ಪ್ರದೇಶಗಳಲ್ಲಿ ತೊಂಬತ್ತು ವರ್ಷಗಳಿಂದ ಒಬಿಸಿಗಳಿಗೆ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ಜಾರಿಯಲ್ಲಿದೆ. ಕಳೆದ ಮೂವತ್ತು ವರ್ಷಗಳಿಂದ ನಮ್ಮಲ್ಲಿ ಬಹುಪಾಲು ತಾಲ್ಲೂಕು ಕೇಂದ್ರಗಳಲ್ಲೂ ಉನ್ನತ ಶಿಕ್ಷಣದ ಸೌಲಭ್ಯಗಳು ಲಭ್ಯ ಇವೆ. ಈ ಸೌಲಭ್ಯಗಳನ್ನು ಬಳಸಿಕೊಳ್ಳಲು ಒಬಿಸಿ ವರ್ಗದವರಿಗೆ ಹಾಸ್ಟೆಲ್‌ ಸೌಲಭ್ಯ ಸೇರಿ ಇತರ ಸೌಲಭ್ಯಗಳನ್ನು ಸರ್ಕಾರ ಕೊಟ್ಟಿದೆ. ಹೀಗಿದ್ದರೂ ಅರ್ಹ ಅಭ್ಯರ್ಥಿಗಳು ಏಕೆ ಸಿಗುತ್ತಿಲ್ಲ ಎಂಬುದಕ್ಕೆ ಸಮಿತಿ ಕಾರಣಗಳನ್ನು ಗುರುತಿಸಿ ತಿಳಿಸಬೇಕಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT