ರಾಜ್ಯದಲ್ಲಿ ಇತ್ತೀಚೆಗೆ ಆಗುತ್ತಿರುವ ರೈತರ ಸರಣಿ ಆತ್ಮಹತ್ಯೆ ಪ್ರಕರಣಗಳು ಎಂಥವರನ್ನೂ ಬೆಚ್ಚಿಬೀಳಿಸುತ್ತವೆ. ಈ ಮೊದಲು, ಅನಾವೃಷ್ಟಿ–ಅತಿವೃಷ್ಟಿಯಿಂದ ಬೆಳೆಗಳು ನಾಶವಾಗಿ ರೈತರು ಸಂಕಷ್ಟಕ್ಕೆ ಈಡಾಗುತ್ತಿದ್ದರು. ಆದರೆ ಈಗ ಬೆಳೆದ ಬೆಳೆಗೆ ಯೋಗ್ಯ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ. ಅದರಲ್ಲೂ ಕಬ್ಬು ಬೆಳೆಗಾರರ ಬವಣೆ ಹೇಳತೀರದು.
ಸರ್ಕಾರ ನಡೆಸುವವರು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಮುಖಂಡರು ತಾವು ರೈತರ ಪರವಾಗಿಯೇ ಇದ್ದೇವೆ ಎಂದು ಹೇಳುತ್ತಲೇ ಇದ್ದಾರೆ. ಆದರೆ ರೈತರ ಸಮಸ್ಯೆ ಮಾತ್ರ ಹಿಮಚೆಂಡಿನಂತೆ ದೊಡ್ಡದಾಗುತ್ತಿದೆ. ಇಷ್ಟಾದರೂ ರೈತರು ಸಾವನ್ನು ಬೆನ್ನಿಗೆ ಕಟ್ಟಿಕೊಂಡೇ ಕಬ್ಬು ಬೆಳೆಯುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ಹಾಗೂ ರಾಜ್ಯ ಸರ್ಕಾರವು ರೈತರಿಗೆ ಯೋಗ್ಯ ಬೆಲೆ ದೊರಕಿಸಿಕೊಡುವಲ್ಲಿ ವಿಫಲವಾಗಿವೆ. ಆದಕಾರಣ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಸಮಸ್ಯೆಗೆ ಪರಿಹಾರ ರೂಪಿಸಲು ಗಂಭೀರವಾಗಿ ಯತ್ನಿಸಬೇಕು.
ಆಕಾಶವಾಣಿಯ ‘ಮನ್ ಕಿ ಬಾತ್’ ಹೆಸರಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುತ್ತಿದ್ದಾರೆ. ಮುಂಬರುವ ಕಾರ್ಯಕ್ರಮದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಯ ಬಗ್ಗೆ ಪ್ರಧಾನಿ ಮನಬಿಚ್ಚಿ ಮಾತನಾಡಲಿ. ಈ ಸಮಸ್ಯೆ ತಾರ್ಕಿಕ ಅಂತ್ಯ ಕಾಣಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.