ಎಚ್.ಡಿ. ಕುಮಾರಸ್ವಾಮಿ ಪ್ರಮಾಣವಚನ ಸ್ವೀಕರಿಸಿದ ವೇದಿಕೆಯೇ ಪರೋಕ್ಷವಾಗಿ ಪರ್ಯಾಯ ರಾಜಕೀಯ ಶಕ್ತಿಯ ಉದಯಕ್ಕೂ ವೇದಿಕೆ ಆಗಿರುವುದು ಸಂಭ್ರಮದ ಸಂಗತಿ.
ಇಲ್ಲಿ ಗಮನಸೆಳೆಯುವ ಅಂಶ ಎಂದರೆ, ವೇದಿಕೆಯಲ್ಲಿದ್ದ ಬಹಳಷ್ಟು ಪಕ್ಷಗಳು ಒಂದಾನೊಂದು ಕಾಲದಲ್ಲಿ ಬಿಜೆಪಿಯೊಂದಿಗೆ ಕೈಜೋಡಿಸಿ ಅಧಿಕಾರ ಹಂಚಿಕೊಂಡವುಗಳೇ. ಆಂಧ್ರಪ್ರದೇಶದ ಮುಖ್ಯಮಂತ್ರಿ ತಮ್ಮ ರಾಜ್ಯಕ್ಕೆ ವಿಶೇಷ ಸ್ಥಾನಮಾನ ಸಿಗಲಿಲ್ಲ ಎಂದು ಇತ್ತೀಚೆಗಷ್ಟೆ ಎನ್‌ಡಿಎಯಿಂದ ಹೊರಬಂದಿದ್ದಾರೆ.
ಜೆಡಿಎಸ್ ಸಹ ಕೆಲವು ವರ್ಷಗಳ ಹಿಂದೆ ಬಿಜೆಪಿಯ ಜೊತೆ ಕೈ ಜೋಡಿಸಿ ಕೆಲವು ತಿಂಗಳು ಅಧಿಕಾರ ನಡೆಸಿದೆ. ಈ ಎಲ್ಲ ಕಾರಣಗಳಿಂದ ‘ಸೆಕ್ಯುಲರ್’ ಮತ್ತು ‘ಡೆಮಾಕ್ರೆಟಿಕ್’ ಮೈತ್ರಿಯಾಗಿ ಹೊರಹೊಮ್ಮಲಿರುವ ಈ ಒಕ್ಕೂಟಕ್ಕೆ ಹೊಸ ಮುಖ್ಯಮಂತ್ರಿ ಅಧಾರ ಸ್ತಂಭವಾಗಿ ನಿಲ್ಲುತ್ತಾರೆಯೇ ಎಂಬ ಕುತೂಹಲ ಮತದಾರರಲ್ಲಿ ಮೂಡುವುದು ಸಹಜ.
ಹಿಂದಿನದನ್ನು ಮರೆತು ಹೊಸ ಸ್ನೇಹದಿಂದ ಮುನ್ನಡೆಯುವುದೇ ಇಂದಿನ ರಾಜಕೀಯ. ಈ ವೇದಿಕೆಯಲ್ಲಿದ್ದ ಎಲ್ಲ ಮುಖಂಡರೂ ‘ಹಿಂದಿನ ವಿಚಾರಗಳನ್ನು ಮಾತಾಡುವುದು ಬೇಡ.
ಜನರು ಒಂದು ಹೊಸ ಒಕ್ಕೂಟ ಉದಯದ ನಿರೀಕ್ಷೆಯಲ್ಲಿದ್ದಾರೆ. ಅವರ ನಂಬಿಕೆ ಉಳಿಸಿಕೊಳ್ಳಲು ಎಂದೂ ಯಾವ ಕಾರಣಕ್ಕೂ ಎನ್‌ಡಿಎ ಸೇರುವುದಿಲ್ಲ, ಕಷ್ಟವೋ ಸುಖವೋ ಸೆಕ್ಯುಲರ್ ಒಕ್ಕೂಟವನ್ನು ಯಾವ ಕಾರಣಕ್ಕೂ ತ್ಯಜಿಸುವುದಿಲ್ಲ’ ಎಂದು ಪ್ರಮಾಣ ಮಾಡುವುದು ಅಗತ್ಯ. ಇದರಿಂದ ಮತದಾರ ನಿರುಮ್ಮಳನಾಗಿ ಇರಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.