ಪರಿಶಿಷ್ಟರಿಗಾಗಿ ಸ್ಮಶಾನ ಭೂಮಿ ಖರೀದಿಗೆ ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಲೇಖಕ ಮೂಡ್ನಾಕೂಡು ಚಿನ್ನಸ್ವಾಮಿಯವರು, ಸರ್ಕಾರವೇ ಗ್ರಾಮೀಣ ಸಂಸ್ಕೃತಿಯನ್ನು ಒಡೆದು ಅಸ್ಪೃಶ್ಯತೆಯನ್ನು ಪೋಷಿಸುತ್ತಿದೆ ಎಂದು ಹೇಳಿದ್ದಾರೆ (ವಾ.ವಾ., ಜೂನ್ 14).
ಈ ಮೂಲಕ ಅವರು ಆದರ್ಶ ಸಮಾಜವೊಂದರ ಪರಿಕಲ್ಪನೆಯಲ್ಲಿ, ಹಳ್ಳಿಗಳಲ್ಲಿ ಬದುಕುತ್ತಿರುವ ದಲಿತರ ವಾಸ್ತವ ಬದುಕನ್ನು ಮರೆಮಾಚುತ್ತಿದ್ದಾರೆ. ದಲಿತರ ಸ್ಥಿತಿಗತಿ ಹೇಗಿದೆ ಎಂದರೆ ಸರ್ಕಾರ ಹಳ್ಳಿಗಳಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕ್‌ಗಳನ್ನು ಕಟ್ಟಿಸಿದೆ.
ಆದರೆ ಅವರು ತಮ್ಮ ಕೇರಿಯ ಟ್ಯಾಂಕ್‌ನಲ್ಲಿ ಮಾತ್ರ ನೀರು ಹಿಡಿದುಕೊಳ್ಳಬೇಕು, ಅಪ್ಪಿತಪ್ಪಿಯೂ ಮೇಲ್ಜಾತಿಯವರ ಕೇರಿಗಳಿಗೆ ನೀರಿಗಾಗಿ ಬಿಂದಿಗೆ ಹಿಡಿದುಕೊಂಡು ಹೋಗಲು ಸಾಧ್ಯವಿಲ್ಲದ ಸಾವಿರಾರು ಹಳ್ಳಿಗಳನ್ನು ನೋಡಬಹುದು.
ಹಲವೆಡೆ ದೇವಸ್ಥಾನ, ಹೋಟೆಲ್‌ಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ಸಾರ್ವಜನಿಕ ಸ್ಥಳಗಳಿಗೆ ಸಂಬಂಧಿಸಿದಂತೆ ಇಂತಹ ಅಲಿಖಿತ ಒಪ್ಪಂದ ನಮ್ಮ ಗ್ರಾಮೀಣ ಬದುಕಿನಲ್ಲಿ ಹಾಸುಹೊಕ್ಕಾಗಿದೆ.
ವಾಸ್ತವ ಹೀಗಿರುವಾಗ ಸರ್ಕಾರ ದಲಿತರಿಗೆ ಎಂದಲ್ಲದೆ ಸಾರ್ವಜನಿಕರಿಗೆ ಎಂದು ಸ್ಮಶಾನ ಭೂಮಿ ತೆರೆದರೆ ಅದರ ಪರಿಸ್ಥಿತಿ ಇನ್ನೇನಾಗಬಹುದು? ಬಲಾಢ್ಯರಾಗಿರುವ ಮೇಲ್ಜಾತಿಯವರು ಅದನ್ನು ಪರಿಪೂರ್ಣ ತಮ್ಮದಾಗಿಸಿಕೊಂಡು ದಲಿತರನ್ನು ಪೂರ್ಣವಾಗಿ ಹೊರಹಾಕಬಹುದು.
ಇಲ್ಲವೇ ಅದರೊಳಗೆ ಮೇಲ್ಜಾತಿಯವರೇ ಒಂದು ಕಡೆ, ಕೆಳಜಾತಿಯವರೇ ಒಂದು ಕಡೆ ಶವ ಹೂಳಬಹುದು. ಅಕ್ಕಪಕ್ಕದಲ್ಲಂತೂ ಹೂಳಲು ಸಾಧ್ಯವಾಗುವುದಿಲ್ಲ.
ಈಗಾಗಲೇ ನಗರ ಪ್ರದೇಶಗಳಲ್ಲಿ ವೀರಶೈವ ರುದ್ರಭೂಮಿ, ಬ್ರಾಹ್ಮಣ ರುದ್ರಭೂಮಿ ಎಂದೆಲ್ಲಾ ನೋಡಸಿಗುತ್ತವೆ. ಹೀಗಿರುವಾಗ ಸರ್ಕಾರ ಪ್ರತ್ಯೇಕವಾಗಿ ಪರಿಶಿಷ್ಟರಿಗಾಗಿ ಸ್ಮಶಾನಭೂಮಿ ತೆರೆದರೆ ತಪ್ಪೇನಿದೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.