ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿದ್ದ ನಿಯಮಕ್ಕೆ ವಿರುದ್ಧವಾಗಿ ಶನಿಶಿಂಗ್ಣಾಪುರದ ಶನಿಶಿಲೆಯನ್ನು ಮಹಿಳೆಯರು ಸ್ಪರ್ಶಿಸಬಹುದು ಎಂದು ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್, ಇದಕ್ಕೆ ಮಹಾರಾಷ್ಟ್ರದ ಹಿಂದೂ ಕಾಯ್ದೆಯ ನಿಯಮವನ್ನು ಉದಾಹರಿಸಿದೆ. ಆದರೆ ಮಹಿಳೆಯರು ಕೆಲವೆಡೆ ದೇವಸ್ಥಾನ ಪ್ರವೇಶಿಸಬಾರದು, ದೇವರ ಮೂರ್ತಿ ಮುಟ್ಟಬಾರದು ಎನ್ನುವ ನಿಯಮಗಳು ಖಂಡಿತವಾಗಿಯೂ ಲಿಂಗತಾರತಮ್ಯವೆಂದು ಅನಿಸುವುದಿಲ್ಲ. ಇದು ಕೇವಲ ಧರ್ಮಾಚರಣೆಯಷ್ಟೆ.
ಮಹಿಳೆಯರಿಗೆ ಋತುಸ್ರಾವವಾದಾಗ ಶುಚಿತ್ವ ಹಾಗೂ ಅವರ ಆರೋಗ್ಯ ತುಂಬಾ ಮುಖ್ಯವಾಗಿರುತ್ತದೆ. ಕೆಲವು ದೇವಾಲಯಗಳಲ್ಲಿ ಮಹಿಳೆಯರಿಗೆ ಬೇರೆ ಬೇರೆ ಕಾರಣಗಳಿಗಾಗಿ ಪ್ರವೇಶ ನಿಷೇಧ ಇರುತ್ತದೆ. ಶಬರಿಮಲೆ ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿ. ಧರ್ಮಸ್ಥಳದ ಅಣ್ಣಪ್ಪ ಸ್ವಾಮಿಯ ದೇವಸ್ಥಾನ ಪ್ರವೇಶ ಮಹಿಳೆಯರ ಸಹಿತ ಮಕ್ಕಳಿಗೂ ನಿಷಿದ್ಧ. ಶನಿಶಿಂಗ್ಣಾಪುರದಲ್ಲಿ ಮತ್ತೊಂದು ವಿಚಾರಧಾರೆ ಇರಬಹುದು. ಹಾಗೆಂದು ಎಲ್ಲ ದೇವಾಲಯಗಳಲ್ಲೂ ಮಹಿಳೆಯರಿಗೆ ನಿಷೇಧವೇನೂ ಇಲ್ಲವಲ್ಲ.
ಇಂದಿನ ಮಕ್ಕಳು ಜಂಕ್‌ಫುಡ್ ತಿಂದು ಬಹಳ ಬೇಗ ಪ್ರೌಢಾವಸ್ಥೆ ತಲುಪುತ್ತಾರೆ. ಹೀಗಿರುವಾಗ ಕೆಲವು ದೇವಸ್ಥಾನಗಳಲ್ಲಿ ಶುಚಿತ್ವ ಹಾಗೂ ಮಡಿವಂತಿಕೆ ಕಾಪಾಡಲು 12ರಿಂದ 50 ವರ್ಷದವರೆಗಿನ ಮಹಿಳೆಯರಿಗೆ ಪ್ರವೇಶ ನಿಷೇಧ ಹೇರುವುದು ತಪ್ಪಾಗದು. ಇದಕ್ಕೆ ಸಾಕಷ್ಟು ಮಹಿಳೆಯರ ಸಹಕಾರವೂ ಇದೆ. ಗೋಕರ್ಣದಲ್ಲಿ ಈಶ್ವರನ ದೇವಸ್ಥಾನ ಪ್ರವೇಶಕ್ಕೆ ಮುನ್ನ ಪುರುಷರು ತಮ್ಮ ಶರ್ಟುಗಳನ್ನು ತೆಗೆದಿಟ್ಟು ಬರಿಮೈಯಲ್ಲಿ ಒಳಪ್ರವೇಶಿಸುತ್ತಾರೆ. ಹಾಗೆಂದು ಈ ನಿಯಮಗಳನ್ನು ಮಹಿಳೆಯರಿಗೆ ಅಳವಡಿಸುವುದು ಸಾಧ್ಯವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.