ADVERTISEMENT

ದಾಸರ ಮಾತು ಪಾಲಿಸಿ

ವಿಕಾಸ ಆರ್ ಮೌರ್ಯ, ಬೆಂಗಳೂರು
Published 15 ಜನವರಿ 2016, 19:31 IST
Last Updated 15 ಜನವರಿ 2016, 19:31 IST

ಸುಧೀಂದ್ರ ಬುಧ್ಯ ಅವರು ತಮ್ಮ ಅಂಕಣ ಬರಹದಲ್ಲಿ  (ಜ. 15) ಪೇಜಾವರ ಶ್ರೀಗಳು, ದಲಿತರ ಕೇರಿಗೆ ಹೋಗುವುದನ್ನೇ ಕ್ರಾಂತಿಯೆಂದು ಹೇಳಿದ್ದಾರೆ. ಇದು ಮೇಲ್ಜಾತಿಗಳಿಗೆ ಅಂಟಿರುವ ಚಟ. ನನ್ನ ಕೆಲವು ಮೇಲ್ಜಾತಿ ಸ್ನೇಹಿತರು ಸಹ ‘ನನಗೆ ದಲಿತರೇ ಹೆಚ್ಚು ಸ್ನೇಹಿತರು’, ‘ನಾನು ದಲಿತರ ಮನೆಯಲ್ಲಿ ಊಟ ಮಾಡುತ್ತೇನೆ’, ‘ನಾನು ದಲಿತರ ಮನೆಗೆ ಹೋಗುತ್ತೇನೆ’ ಎಂದೆಲ್ಲಾ ಕೊಚ್ಚಿಕೊಳ್ಳುತ್ತಿರುತ್ತಾರೆ.

ಆಗ ನಾನು ಅವರಿಗೆ ಮರುಪ್ರಶ್ನೆ ಹಾಕುತ್ತೇನೆ, ‘ನಿನ್ನ ಮನೆಯ ಊಟಕ್ಕೆ ಎಷ್ಟು ಬಾರಿ ನಿಮ್ಮೂರಿನ ದಲಿತರನ್ನು ಆಹ್ವಾನಿಸಿರುವೆ?’, ‘ಕನಿಷ್ಠಪಕ್ಷ ನಿಮ್ಮ ಮನೆಯೊಳಗೆ ಅವರಿಗೆ ಆಹ್ವಾನವಿದೆಯೇ?’

ಆಗ ಅವರ ಬಳಿ ಉತ್ತರ ಇರುತ್ತಿರಲಿಲ್ಲ. ಮೇಲ್ಜಾತಿಗಳ ಜನರಲ್ಲಿ ಸಮಾಜದೊಳಗೆ ಒಳ್ಳೆಯವರೆನಿಸಿಕೊಳ್ಳುವ ಚಟವಿದೆ. ಆದರೆ ತಮ್ಮ ಸಂಪ್ರದಾಯಗಳನ್ನು ಕಾಪಾಡಿಕೊಂಡು ಹೋಗಬೇಕೆಂಬ ಬದ್ಧತೆ ಇದೆ. ಎಂದೆಂದಿಗೂ ಬದ್ಧತೆ ಗೆಲ್ಲುತ್ತದೆಯೇ ಹೊರತು ಚಟವಲ್ಲ. ಪೇಜಾವರ ಶ್ರೀಗಳಿಗೆ  ದಲಿತರ ಮೇಲೆ ಅಷ್ಟು ಕಾಳಜಿ ಇದ್ದರೆ ಅವರ ಶಿಷ್ಯನಾಗಿ ದಲಿತನೊಬ್ಬನನ್ನು ಸ್ವೀಕರಿಸಿ ಪೀಠಾರೋಹಣ ಮಾಡಿಸಲಿ. ದಲಿತರಿಂದ ಪಾದ ಪೂಜೆ ಮಾಡಿಸಿಕೊಳ್ಳಲು ಸೈ ಎನ್ನುವ ಅವರು ದಲಿತರ ಪ್ರಸಾದವನ್ನೂ ಸ್ವೀಕರಿಸಲಿ.

ವಿಜಯದಾಸರು ‘ಬಳಗ ಬರಲು ಬಿಟ್ಟು ಒಳಗುಂಬುವನು ಹೊಲೆಯ’ ಎಂದಿದ್ದಾರಂತೆ. ಉಡುಪಿಯ ದೇಗುಲಕ್ಕೆ ಶೂದ್ರರು, ದಲಿತರೆಲ್ಲರನ್ನೂ ಕರೆದು ಅವರಿಗೆ ಬೇರೆ ಪಂಕ್ತಿಯಲ್ಲಿ ಊಟ ಹಾಕಿಸಿ, ಬ್ರಾಹ್ಮಣರೆಲ್ಲ ಪ್ರತ್ಯೇಕವಾಗಿ ಊಟ ಮಾಡುವುದು ಸರಿಯೇ? ‘ಹಿಂದೂ ನಾವೆಲ್ಲ ಒಂದು’ ಎನ್ನುವ ಪೇಜಾವರ ಶ್ರೀಗಳು ಬುಧ್ಯರಂತಹವರ ಬೇಡಿಕೆಗಳನ್ನು ಈಡೇರಿಸುತ್ತಾರೆಯೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.