ವರ್ಷದ ಹಿಂದೆ ಹದಿವಯಸ್ಸಿನ ಮಕ್ಕಳು ನಮ್ಮ ಅಂಗಡಿಗೆ ಮೈಕ್ರೊ ಜೆರಾಕ್ಸ್ ಮಾಡಿಸಿಕೊಳ್ಳಲು ಬರುತ್ತಿದ್ದರು. ಅವರೆಲ್ಲ ಸುಮಾರು ಐದರಿಂದ ಹತ್ತನೇ ತರಗತಿಯವರೆಗಿನ ಮಕ್ಕಳು. ಮೊದಮೊದಲು ಯಾಕೆಂದು ಗೊತ್ತಾಗದೇ ಖುಷಿಯಿಂದ ಅತ್ಯಂತ ಚಿಕ್ಕದಾಗಿ, ಆದರೆ ಓದಬಹುದಾದಷ್ಟು ರೀತಿಯಲ್ಲಿ ಒಂದು ಪುಟದ ಒಂದೇ ಬದಿಯಲ್ಲಿ ಪುಸ್ತಕದ ನಾಲ್ಕಾರು ಪೇಜುಗಳನ್ನು ಫೋಟೊ ಕಾಪಿ ಮಾಡಿಕೊಡುತ್ತಿದ್ದೆ.
ಒಮ್ಮೆ ಒಬ್ಬ ಹುಡುಗನ ಬಳಿ ‘ಯಾಕೆ ಹೀಗೆ ಮಾಡಿಸ್ತೀರಾ?’ ಎಂದು ಕೇಳಿದೆ. ಅವನು ಮೊದಮೊದಲು ಬಾಯಿಬಿಡಲಿಲ್ಲ. ನಂತರ ಗೊತ್ತಾಯಿತು, ಪರೀಕ್ಷೆಯಲ್ಲಿ ಕಾಪಿ ಮಾಡಲು ಅನುಕೂಲವಾಗುವಂತೆ ಹೀಗೆ ಮಾಡಿಸುತ್ತಾರೆಂದು! ಅದು ಗೊತ್ತಾದ ಮೇಲೆ ನಾನು ಮೈಕ್ರೊ ಜೆರಾಕ್ಸ್ ಮಾಡಿಕೊಡುತ್ತಿಲ್ಲ.
ಇನ್ನೊಂದು ಉದಾಹರಣೆ. ಕೊಳೆಗೇರಿ ಬಡಾವಣೆಯ ಮಕ್ಕಳಿಗೆ ಉಚಿತ ಟ್ಯೂಷನ್ ಮಾಡುವ ಗೆಳತಿ ಹೇಳುವ ಪ್ರಕಾರ, ಶಾಲೆಗಳಲ್ಲಿ ಮಕ್ಕಳ ಪರೀಕ್ಷೆಗೆ ಕೆಲ ದಿನಗಳ ಮುಂಚಿತವಾಗಿಯೇ ಪ್ರಶ್ನೆಪತ್ರಿಕೆಯ ಎಲ್ಲ ಪ್ರಶ್ನೆಗಳನ್ನೂ (ಗಣಿತದ ಲೆಕ್ಕಗಳನ್ನು ಸಹ) ಉತ್ತರ ಸಮೇತ ಬರೆಸಿ ಬಾಯಿಪಾಠ ಮಾಡಿಸುತ್ತಾರೆ. ಮಕ್ಕಳು ಯೋಚಿಸುವುದೂ ಬೇಡ. ಹಾಗೊಂದು ವೇಳೆ ಬರೆಯದಿದ್ದರೂ ಫೇಲಂತೂ ಮಾಡುವುದಿಲ್ಲವಲ್ಲ.
ಕೆ.ಟಿ.ಗಟ್ಟಿಯವರು ಹೇಳುವಂತೆ (ಪ್ರ.ವಾ., ಅಭಿಮತ, ಜ. 23) ಪರೀಕ್ಷೆಯನ್ನೇ ರದ್ದುಗೊಳಿಸಬೇಕು. ಶಿಕ್ಷಕರು, ಪಾಲಕರೇ ನಕಲು ಮಾಡಲು ಮಕ್ಕಳನ್ನು ಪ್ರೋತ್ಸಾಹಿಸಿದರೆ ಭವಿಷ್ಯದಲ್ಲಿ ಆ ಮಕ್ಕಳು ಎಷ್ಟರಮಟ್ಟಿಗೆ ಉತ್ತಮ ಪ್ರಜೆಗಳಾಗಬಲ್ಲರು? ಇಂತಹ ಇಂದಿನ ಮಕ್ಕಳೇ ನಾಳಿನ ಆಡಳಿತಗಾರರು, ವೈದ್ಯರು, ಎಂಜಿನಿಯರುಗಳು. ಇವರಿಂದ ಸಮಾಜಕ್ಕೆ ನಾವು ಯಾವ ಬಗೆಯ ಕೊಡುಗೆಯನ್ನು ನಿರೀಕ್ಷಿಸಬಹುದು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.