ADVERTISEMENT

ನಿಂದನೆಯಲ್ಲ

ಚಂದ್ರಕಾಂತ ನಾಮಧಾರಿ ಅಂಕೋಲಾ
Published 9 ಫೆಬ್ರುವರಿ 2016, 19:38 IST
Last Updated 9 ಫೆಬ್ರುವರಿ 2016, 19:38 IST

ಬೆಂಗಳೂರಿನಲ್ಲಿ ತಾಂಜಾನಿಯಾ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆ ಪ್ರಕರಣ ಗುಂಪು ಘರ್ಷಣೆಯೇ ವಿನಾ ಜನಾಂಗೀಯ ನಿಂದನೆ ಅಲ್ಲ. ಯಾವುದೇ ವ್ಯಕ್ತಿ– ಈ ದೇಶದವನಾಗಿರಲಿ ಅಥವಾ ಪರಕೀಯನಾಗಿರಲಿ– ಕಂಠಪೂರ್ತಿ ಕುಡಿದು ವಾಹನ ಚಲಾಯಿಸಿ ಮಹಿಳೆಯ ಸಾವಿಗೆ ಕಾರಣನಾದಾಗ ಜನ ದಂಗೆಯೇಳದೆ ಇರುತ್ತಾರೆಯೇ? ಈ ದೇಶದ ಜನಪ್ರಿಯ ನಟ ಸಲ್ಮಾನ್‌ ಖಾನ್‌ ಅವರಿಗೂ ಕಾನೂನು ತನ್ನ ಚಾಟಿ ಬೀಸಿತ್ತು. ಹಾಗಿರುವಾಗ ಆಫ್ರಿಕಾ ಖಂಡದವರಿರಲಿ ಅಮೆರಿಕ ಮೂಲದವರಾಗಿರಲಿ ಎಲ್ಲರೂ ಈ ದೇಶದ ಕಾನೂನಿಗೆ ತಲೆಬಾಗಲೇಬೇಕಲ್ಲವೇ?

ಭಾರತೀಯರಿಗೆ, ಅದರಲ್ಲೂ ವಿಶೇಷವಾಗಿ ಕರ್ನಾಟಕದವರಿಗೆ ಕಪ್ಪು, ಬಿಳುಪು  ಅಥವಾ ಕೆಂಪು ಬಣ್ಣದವರೆಂಬ ಭೇದಭಾವ ಖಂಡಿತವಾಗಿಯೂ ಇಲ್ಲ. ಇದಕ್ಕೆ ತಾಜಾ ಉದಾಹರಣೆ ಉತ್ತರ ಕನ್ನಡ ಜಿಲ್ಲೆಯಲ್ಲಿನ ಸಿದ್ಧಿ ಜನಾಂಗ. ಹಿಂದೆ ಪೋರ್ಚುಗೀಸರು ಗೋವಾದ ಮೂಲಕ ಈ ಜಿಲ್ಲೆಗೆ ಆಫ್ರಿಕಾ ಮೂಲದ ಮೊಜಾಂಬಿಕ್ ದೇಶದವರನ್ನು ಪರಿಚಯಿಸಿದರು. ಪ್ರಾರಂಭದಲ್ಲಿ ಗುಡ್ಡ ಬೆಟ್ಟಗಳಲ್ಲಿಯೇ ನೆಲೆಸಿದ್ದ ಈ ಸಂತತಿ ಇಂದು ಜಿಲ್ಲೆಯ ಅವಿಭಾಜ್ಯ ಅಂಗವಾಗಿದೆ.

ಕ್ರೀಡೆಗಳಲ್ಲೂ ಗಮನ ಸೆಳೆದಿದೆ. ಕಪ್ಪುವರ್ಣೀಯರಾದ ಸಿದ್ಧಿಗಳು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮವನ್ನು ಅವಲಂಬಿಸಿದ್ದಾರೆ. ಅರಳು ಹುರಿದಂತೆ ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲ ರಾಜೇಶ ಎನ್ನುವ ಸಿದ್ಧಿ ಯುವಕ ಇಂದು ಕನ್ನಡ ಚಿತ್ರರಂಗದವರಿಗೆ ಅಚ್ಚುಮೆಚ್ಚು. ನಮ್ಮಲ್ಲಿ ಜನಾಂಗೀಯ ಭೇದವಿಲ್ಲ, ಆದರೆ ಕಾನೂನು ಮಾತ್ರ ಎಲ್ಲರಿಗೂ ಒಂದೇ ಎಂಬುದನ್ನು ತಾಂಜಾನಿಯಾದ ರಾಯಭಾರಿಗಳು ಅರಿಯಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.