ಗಜೇಂದ್ರಗಡದಲ್ಲಿ ವಿದ್ಯುತ್ ಮಗ್ಗಗಳ ಮಾಲೀಕರು ಅಖಿಲ ಭಾರತ ಕೈಮಗ್ಗ ನೇಕಾರರ ಒಕ್ಕೂಟದ ಚಳವಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವುದು ಹಾಗೂ ಹೋರಾಟಗಾರರಿಗೆ ಬೆದರಿಕೆ ಹಾಕಿರುವುದು ದುರದೃಷ್ಟಕರ.
ಅಖಿಲ ಭಾರತ ಕೈಮಗ್ಗ ನೇಕಾರರ ಒಕ್ಕೂಟ ತನ್ನ ಹೋರಾಟದಲ್ಲಿ ವಿದ್ಯುತ್ ಮಗ್ಗಗಳ ವಿರುದ್ಧ ಎಂದೂ ಮಾತನಾಡಿಲ್ಲ. ವಿದ್ಯುತ್ ಮಗ್ಗಗಳಲ್ಲಿ ಕೆಲಸ ಮಾಡುತ್ತಿರುವವರು ನಮ್ಮ ಜನರೇ ಎಂಬ ಸ್ಪಷ್ಟ ಅರಿವು ಒಕ್ಕೂಟಕ್ಕಿದೆ.
ಸರ್ಕಾರವು ಕೈಮಗ್ಗದ ಉಳಿವಿಗಾಗಿ ಕಾನೂನಿನ ವ್ಯಾಪ್ತಿಯಲ್ಲಿ ನೀಡಿರುವ ರಕ್ಷಣೆಯನ್ನು ಸೂಕ್ತ ರೀತಿಯಲ್ಲಿ ಜಾರಿಗೊಳಿಸಲು ಒತ್ತಾಯ ಮಾಡುತ್ತಿದೆ ಅಷ್ಟೆ. ಕೈಮಗ್ಗ ಮತ್ತು ವಿದ್ಯುತ್ಮಗ್ಗಗಳ ಜನರ ಸಂಬಂಧವನ್ನು ಮುರಿಯುವ ಪ್ರಯತ್ನವನ್ನು ಸಂಘಟನೆ ಎಂದೂ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ಕೈಮಗ್ಗಕ್ಕೆ ಸಂಬಂಧಿಸಿದ ಕಾನೂನನ್ನು ಸರ್ಕಾರ ಪ್ರಾಮಾಣಿಕವಾಗಿ ಜಾರಿಗೊಳಿಸಿದರೂ ವಿದ್ಯುತ್ ಮಗ್ಗಗಳಿಗೆ ತೊಂದರೆ ಉಂಟಾಗುವುದಿಲ್ಲ. ಬಟ್ಟೆಗೆ ಬರುತ್ತಿರುವ ಬೇಡಿಕೆಯನ್ನು ಕೈಮಗ್ಗದ ನೇಕಾರರು ಎಂದೂ ಪೂರೈಸಲಾರರು. ಇಂದು ದೇಶದ ಬಟ್ಟೆಯ ಉತ್ಪಾದನೆಯಲ್ಲಿ ಶೇ ೫೯ ಭಾಗವನ್ನು ವಿದ್ಯುತ್ ಮಗ್ಗಗಳು ಉತ್ಪಾದಿಸುತ್ತಿದ್ದರೆ ಕೇವಲ ಶೇ ೧೧ ಭಾಗವನ್ನು ಕೈಮಗ್ಗದ ಉದ್ಯಮ ಉತ್ಪಾದಿಸುತ್ತಿದೆ. ಈಗಾಗಲೇ ಉದ್ಯಮದ ದೊಡ್ಡ ಭಾಗವನ್ನು ಹಿಡಿದು ಕೊಂಡಿರುವ ವಿದ್ಯುತ್ ಮಗ್ಗಗಳ ಮಾಲೀಕರು ಕೈ ಮಗ್ಗಗಳು ತಮಗೆ ಸಂಚಕಾರ ತರುತ್ತವೆ ಎಂದು ಭಾವಿಸಿದರೆ ಅದು ಮೂರ್ಖತನವಾಗುತ್ತದೆ. ಎಲ್ಲ ಕಾಲದಲ್ಲೂ ವಿದ್ಯುತ್ ಮಗ್ಗಗಳು ಕೈಮಗ್ಗಕ್ಕೆ ಸಂಚಕಾರ ತರಬಲ್ಲವೆ ಹೊರತು ಕೈಮಗ್ಗಗಳು ಎಂದೂ ವಿದ್ಯುತ್ ಮಗ್ಗಗಳಿಗೆ ಸವಾಲಾಗಿ ನಿಲ್ಲಲಾರವು.
ಕೈಮಗ್ಗ ಬಡವರ, ಅಶಕ್ತರ ಮತ್ತು ಕುಶಲಕರ್ಮಿಗಳ ಕ್ಷೇತ್ರ. ವಿದ್ಯುತ್ ಮಗ್ಗ ಉಳ್ಳವರ ಮತ್ತು ಶಕ್ತರ ಕ್ಷೇತ್ರ. ವಿದ್ಯುತ್ ಮಗ್ಗಗಳ ಮಾಲೀಕರು ಕೈಮಗ್ಗದ ನೇಕಾರರನ್ನು ತಮ್ಮ ಸಹೋದರರು ಎಂದು ಭಾವಿಸಬೇಕು ಮತ್ತು ಶತಮಾನಗಳಿಂದ ಬಂದಿರುವ ಕೈಮಗ್ಗದ ನೇಕಾರಿಕೆಯ ಕೌಶಲವನ್ನು ಎಲ್ಲ ಪ್ರತಿಕೂಲ ಪರಿಸ್ಥಿತಿಯಲ್ಲೂ ಉಳಿಸಿಕೊಂಡು ಬರುತ್ತಿರುವುದಕ್ಕೆ ಅಭಿಮಾನ ತೋರಬೇಕು.
ಪ್ರಪಂಚದಾದ್ಯಂತ ಕೈಮಗ್ಗಗಳು ಅವಸಾನದ ಅಂಚಿನಲ್ಲಿವೆ. ಉಳಿದಿರುವ ಕೈಮಗ್ಗಗಳಲ್ಲಿ ಹೆಚ್ಚಿನವು ಭಾರತದಲ್ಲಿವೆ. ಇಂದು ಕೈಮಗ್ಗದ ಬಟ್ಟೆಗಳು ತಮ್ಮ ವಿಶಿಷ್ಟ ವಿನ್ಯಾಸ ಮತ್ತು ರಚನೆಯಿಂದಾಗಿ ಜಾಗತಿಕ ಮಟ್ಟದಲ್ಲಿ ಅತ್ಯಂತ ಬೇಡಿಕೆಯ ಮತ್ತು ಆಕರ್ಷಣೆಯ ಉತ್ಪನ್ನವಾಗಿ ಮಾನ್ಯತೆ ಪಡೆದುಕೊಳ್ಳುತ್ತಿವೆ. ವಿದ್ಯುತ್ ಮಗ್ಗಗಳಲ್ಲಿ ತಯಾರಿಸಲಾಗದ ಹಲವು ರೀತಿಯ ಬಟ್ಟೆಗಳು ಕೈಮಗ್ಗದಲ್ಲಿ ತಯಾರಾಗುತ್ತಿವೆ. ಕೈಮಗ್ಗ ನಮ್ಮ ದೇಶದ ಮತ್ತು ಸಂಸ್ಕೃತಿಯ ಹೆಮ್ಮೆಯ ಉದ್ಯಮ. ಅದನ್ನು ಉಳಿಸಿ ಬೆಳೆಸಲು ಎಲ್ಲರೂ ಅಖಿಲ ಭಾರತ ಕೈಮಗ್ಗ ನೇಕಾರರ ಒಕ್ಕೂಟದೊಂದಿಗೆ ಕೈ ಜೋಡಿಸಬೇಕು.
ವಾಸ್ತವದಲ್ಲಿ ಕೈಮಗ್ಗಗಳು ವಿದ್ಯುತ್ ಮಗ್ಗಗಳ ತಾಯಿಯಿದ್ದಂತೆ. ಕೈಮಗ್ಗಗಳನ್ನು ಕೊಂದೇ ನಾವು ಬದುಕಬೇಕು ಎಂದು ವಿದ್ಯುತ್ ಮಗ್ಗಗಳ ಮಾಲೀಕರು ಭಾವಿಸಿದರೆ ಅದಕ್ಕಿಂತ ದುರಂತ ಮತ್ತೊಂದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.