ADVERTISEMENT

ಪರಿಹಾರ ಮಿಲಿಟರಿಯೇ?!

ಕೆ.ಆರ್.ರಮೇಶ್‌ಕುಮಾರ್
Published 4 ಮಾರ್ಚ್ 2014, 19:30 IST
Last Updated 4 ಮಾರ್ಚ್ 2014, 19:30 IST

‘ಹೀಯಾಳಿಸಲು ನಿಂತ ಅವಸರದ ನಾಯಕರು’ (ರವೀಂದ್ರ ಭಟ್ಟ; ಪ್ರ.ವಾ. ಫೆ. 23)  ಬರಹ ಓದಿದ್ದೇನೆ. ಸಮಾಜ ಸುಧಾರಕ ಎಂದು ಹೇಳಿಕೊಳ್ಳುವ ವ್ಯಕ್ತಿಯ (ಎಸ್‌.ಆರ್‌.ಹಿರೇಮಠ) ನೇತೃತ್ವದಲ್ಲಿ ನಡೆಯುತ್ತಿರುವ ಸಾಂಸ್ಥಿಕ ವ್ಯವಹಾರಗಳ ಕುರಿತಂತೆ ಅವರೇ ನೇಮಿಸಿಕೊಂಡ ಅಧಿಕೃತ ಲೆಕ್ಕಪರಿಶೋಧಕರು, ‘ವಿದೇಶಿ ದೇಣಿಗೆ ಖರ್ಚು ಮಾಡುವ ನಿಯಮಗಳ ಉಲ್ಲಂಘನೆ­ಯಾಗಿದೆ’ ಎಂದು ಸ್ಪಷ್ಟವಾಗಿ ಅಭಿಪ್ರಾಯ­ಪಟ್ಟಿರುವ ಅಧಿಕೃತ ದಾಖಲೆಗಳನ್ನು ವಿಧಾನಸಭೆ ಅಧ್ಯಕ್ಷರ ಮುಖಾಂತರ ಸರ್ಕಾರಕ್ಕೆ ನೀಡಿ ಕ್ರಮ ಜರುಗಿಸಲು ವಿನಂತಿಸಿದ್ದೆ.

ವಿದೇಶಿ ದೇಣಿಗೆ ನಿಯಂತ್ರಣ (F.C.R.A), ಕೇಂದ್ರ ಶಾಸನವಾಗಿರುವುದರಿಂದಲೂ ಮತ್ತು ಇದರ ವಿಚಾರಣೆ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬಾರದೆ ಇರುವುದರಿಂದ, ಸಂದರ್ಭಾನುಸಾರ ದಾಖಲೆಗಳ ಪರಿಶೀಲನೆ ನಂತರ ಮುಂದಿನ ಕ್ರಮ ಜರುಗಿಸಲು ಸೂಚಿಸಿದ್ದು ತಪ್ಪೇ? ಹಾಗಾದರೆ, ಸಮಾಜ ಸುಧಾರಕರು ಎಂಬ ಶಿರೋನಾಮೆ­ಯಲ್ಲಿ ವಿದೇಶಿ ಮೂಲಗಳಿಂದ ಲಕ್ಷಾಂತರ ಡಾಲರ್‌­ಗಳನ್ನು ತಂದು ದೇಣಿಗೆಯ ಮೂಲ ರಹಸ್ಯವಾಗಿಟ್ಟು ಖರ್ಚು ವೆಚ್ಚಗಳನ್ನು ಸಂಶಯಾ­ಸ್ಪದ­ವಾಗಿರಿಸಿದ್ದಾರೆ ಎನ್ನಲಾದ ಆರೋಪಗಳು  ಪ್ರಸ್ತಾಪಕ್ಕೆ ಬಂದಾಗ ಸರ್ಕಾರವು ಅದನ್ನು ಗಣನೆಗೆ ತೆಗೆದುಕೊಂಡರೆ ಅದು ಬಹುಶಃ ಯಾವುದೇ ಒಬ್ಬ ನೈಜ ಸಮಾಜ ಸುಧಾರಕನಿಗೆ ಕೆಡಕನ್ನೇನೂ ಮಾಡುವುದಿಲ್ಲ ಎಂದು ನಂಬಿದ್ದೇನೆ.

ಸದಾ ಆರೋಪಗಳನ್ನೇ ಮಾಡುವ ವ್ಯಕ್ತಿ, ತಮ್ಮ ಮೇಲೆ ಬಂದ ಆರೋಪಗಳಿಗೆ ವಿಚಾರಣೆ­ಯನ್ನು ಎದುರಿಸಬೇಕು. ತಾವು ನಿರ್ದೋಷಿ ಎಂದು ಸಾಬೀತು ಮಾಡಬೇಕು. ಆಗ ಅವರ ಗೌರವ ಹೆಚ್ಚಾಗುತ್ತದೆ. ಒಂದು ವೇಳೆ, ಈ ಆರೋಪ­ಗಳಿಂದ ಅವರ ಮನಸ್ಸಿಗೆ ನೋವಾ­ಗುತ್ತದೆ ಎಂದಾದರೆ,  ಇವರಿಂದ ನಿಂದಿತರಾದ­­ವರಿಗೆ ಮನಸ್ಸು ಇರುವುದಿಲ್ಲವೆ? ಅಥವಾ ಅವರೇನು ನಿರ್ಜೀವ ವಸ್ತುಗಳೇ? ಹಾಗಿಲ್ಲದಿದ್ದಲ್ಲಿ ಇನ್ನೊಂದು ಪರ್ಯಾಯ ಅರ್ಥ ಎಂದರೆ ಸಾರ್ವಜನಿಕ ಜೀವನದಲ್ಲಿ ಇರುವವರು ಎಲ್ಲರೂ ಭ್ರಷ್ಟರೆ.

ಅದಕ್ಕೆ ಪರಿಹಾರ– ಈ ದೇಶವನ್ನು  ಪ್ರಜಾಸತ್ತೆ ವ್ಯವಸ್ಥೆಯಿಂದ ಬದಲಿಸಿ ಮಿಲಿಟರಿಗೆ ಒಪ್ಪಿಸುವುದು. ಎಲ್ಲಾ ರಾಜಕಾರಣಿಗಳನ್ನು ಕಾರಾ­ಗೃಹದಲ್ಲಿಡುವುದು. ಯಾವುದೇ ಆರೋಪ­ವನ್ನು, ಸಾಕ್ಷ್ಯಾಧಾರಗಳಿದ್ದರೆ ಜವಾಬ್ದಾರಿಯಿಂದ ಸಮರ್ಥಿಸಿಕೊಂಡು ಅಂತಹವರಿಗೆ ಕಾನೂನು ರೀತ್ಯ ಶಿಕ್ಷೆ ಆಗುವಂತೆ ಮಾಡುವುದು ನೈಜ ಹೋರಾಟಗಾರನ ಗುಣ. ‘ಹಿಟ್‌ ಅಂಡ್‌ ರನ್‌’ ಎಂಬಂತೆ ಅಗ್ಗದ ಪ್ರಚಾರಕ್ಕೆ ಜೋತುಬಿದ್ದು ಮತ್ತೊಬ್ಬರ ಚಾರಿತ್ರ್ಯವಧೆ ಮಾಡುವವರಿಗೆ ಎಷ್ಟು ಗೌರವ ಕೊಡಬೇಕು ಎಂದು ನಿರ್ಣ­ಯಿಸುವ ಶಕ್ತಿಯನ್ನು  ಸಮಾಜ ಪರಂಪರಾಗತ­ವಾಗಿ ಮೈಗೂಡಿಸಿಕೊಂಡಿದೆ. ಅನ್ಯಥಾ ಭಾವಿಸು­ವುದು ಬೇಡ. ನನಗೆ ಸರಿ ಕಂಡದ್ದು ಬರೆದಿದ್ದೇನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.