ಕನ್ನಡಿಗರಾದ ರಾಜೇಂದ್ರಕುಮಾರ್ ಅವರು ರಾಷ್ಟ್ರೀಯ ಗ್ರಂಥಾಲಯದ ಮಹಾನಿರ್ದೇಶಕ ಹುದ್ದೆಗೇರಿರುವುದು (ಪ್ರ.ವಾ., ಸೆ.15) ಕನ್ನಡಿಗರು ಹೆಮ್ಮೆಪಡುವ ವಿಷಯ. ಅವರಿಗೆ ಅಭಿನಂದನೆ. ತಮ್ಮ ಸಂದರ್ಶನದಲ್ಲಿ ಅವರು ‘ಲೇಖಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಎಲ್ಲ ರಾಜ್ಯಗಳಲ್ಲಿ ಪುಸ್ತಕ ಸಗಟು ಖರೀದಿ ಯೋಜನೆ ಜಾರಿಯಾಗಿದೆ.
ಇದರಿಂದ ಬಹಳಷ್ಟು ಜನ ಲೇಖಕರಾಗಿ, ಪ್ರಕಾಶಕರಾಗಿ ಬದಲಾಗುತ್ತಿದ್ದಾರೆ. ತಾವು ಪ್ರಕಟಿಸಿದ ನಿರ್ದಿಷ್ಟ ಸಂಖ್ಯೆಯ ಪುಸ್ತಕಗಳು ಖಂಡಿತವಾಗಿಯೂ ಮಾರಾಟವಾಗುತ್ತವೆ ಎಂಬ ಖಾತರಿ ಈ ಯೋಜನೆಯ ಕಾರಣದಿಂದ ಅವರಿಗೆ ದೊರೆತಿದೆ’ ಎಂದಿದ್ದಾರೆ.
ಬೇರೆ ರಾಜ್ಯಗಳಲ್ಲಿ ಹೇಗೋ ಏನೋ. ಆದರೆ, ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿ ಮಾತ್ರ ಇದು ಜಾರಿಗೆ ಬಂದಿಲ್ಲ.
2011ನೇ ಸಾಲಿನಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದೆ ಸಗಟು ಖರೀದಿ ಆಯ್ಕೆಗಾಗಿ ಬಂದ ಪುಸ್ತಕಗಳ ಶೀರ್ಷಿಕೆ ಸಂಖ್ಯೆ ಏಳು ಸಾವಿರಕ್ಕೂ ಹೆಚ್ಚು. ಆದರೆ ಆಯ್ಕೆ ಮಾಡಿ ಖರೀದಿಸಿದ್ದು ಮೂರೂವರೆಯಿಂದ ನಾಲ್ಕು ಸಾವಿರದಷ್ಟು ಮಾತ್ರ. ತಾನೇ ಪ್ರಕಟಿಸಿದ ಅನೇಕ ಲೇಖಕರ ಪುಸ್ತಕಗಳನ್ನು ಇಲಾಖೆ ಆಯ್ಕೆಯೂ ಮಾಡಿಲ್ಲ, ಖರೀದಿಯೂ ಮಾಡಿಲ್ಲ. 2012ನೇ ಸಾಲಿನಲ್ಲೂ ಇದೇ ಕತೆ.
ಬಹುಶಃ ರಾಜಾರಾಮ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನದ (ಆರ್ಆರ್ಎಲ್‌ಎಫ್) ಯೋಜನೆ ಅಡಿಯಲ್ಲಿ ಒಂದು ಸಾವಿರದಷ್ಟು ಶೀರ್ಷಿಕೆಗಳನ್ನು ಮಾತ್ರ ಖರೀದಿ ಮಾಡಲಾಗಿದೆ. ಆಯ್ಕೆಯಾದ ಸಾವಿರಾರು ಪುಸ್ತಕಗಳು ಖರೀದಿ ಆದೇಶವಿಲ್ಲದೆ ಬಿದ್ದಿವೆ. ಖರೀದಿಗೆ ಹಣ ಇಲ್ಲ ಎನ್ನುವುದು ಒಂದು ಸುದ್ದಿಯಾದರೆ, ಪುಸ್ತಕಗಳನ್ನು ಸರ್ಕಾರ ಖರೀದಿ ಮಾಡಬೇಕೆಂದೇನಿಲ್ಲ ಎಂಬ ಮಾತು ಸರ್ಕಾರಿ ವಲಯದಲ್ಲಿ ಕೇಳಿಬರುತ್ತಿದೆ.
2013ನೇ ಸಾಲಿನಲ್ಲಿ ಪ್ರಕಟವಾದ ಪುಸ್ತಕಗಳ ಆಯ್ಕೆಗೆ ಅರ್ಜಿ ಸಲ್ಲಿಸಿ ಏಳೆಂಟು ತಿಂಗಳು ಕಳೆದಿವೆ. ಇವುಗಳ ಆಯ್ಕೆ ಯಾವಾಗ ಎಂಬುದು ಗೊತ್ತಿಲ್ಲ. ಪುಸ್ತಕ ಸಗಟು ಖರೀದಿ ವಿಷಯದಲ್ಲಿ ರಾಜ್ಯ ಸಾರ್ವಜನಿಕ ಗ್ರಂಥಾಲಯದ ನಿಲುವು ಏನೆಂಬುದೇ ಅರ್ಥವಾಗುತ್ತಿಲ್ಲ. ಗ್ರಂಥಾಲಯ ಕಚೇರಿಯಲ್ಲಿ ಪುಸ್ತಕ ಖರೀದಿಯ ಬಗ್ಗೆ ವಿಚಾರಿಸಿದರೆ ಸೂಕ್ತ ಉತ್ತರ ಸಿಗುತ್ತಿಲ್ಲ.
ಇಂಥ ಪರಿಸ್ಥಿತಿ ಇರುವಾಗ ರಾಜ್ಯದ ಲೇಖಕರು, ಪ್ರಕಾಶಕರು ಏನು ಮಾಡಬೇಕು? ಪುಸ್ತಕ ಪ್ರಕಟಿಸುವುದನ್ನು ನಿಲ್ಲಿಸಬೇಕೆ ಅಥವಾ ತಮ್ಮ ದಾರಿಯನ್ನು ತಾವೇ ನೋಡಿಕೊಳ್ಳಬೇಕೆ? ಸಾರ್ವಜನಿಕ ಗ್ರಂಥಾಲಯ ಇಲಾಖೆ ಈ ವಿಷಯದಲ್ಲಿ ಒಂದು ಸ್ಪಷ್ಟವಾದ ನಿಲುವು ತಳೆಯಲಿ.
–ಸುಮುಖಾನಂದ ಜಲವಳ್ಳಿ , ಹೊನ್ನಾವರ, ಉತ್ತರ ಕನ್ನಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.