‘ನಮ್ಮ ಮೆಟ್ರೊ’ ರೀಚ್ 2ರ ಸಂಚಾರ ಸೋಮವಾರ ವಿಜೃಂಭಣೆಯಿಂದ ಉದ್ಘಾಟನೆಯಾಗಿದೆ (ಪ್ರ.ವಾ.,ನ. 17). ಆ ಹೊತ್ತಿನಲ್ಲಿ ಪುರೋಹಿತರು ಧಾರ್ಮಿಕ ವಿಧಿಗಳನ್ನು ನಡೆಸುತ್ತಿದ್ದುದನ್ನು ಮಾಧ್ಯಮಗಳಲ್ಲಿ ಕಂಡು ಸಂಬಂಧಪಟ್ಟವರಿಗೆ ಕೆಲವು ಪ್ರಶ್ನೆಗಳನ್ನು ಕೇಳಬೇಕೆನಿಸಿದೆ.
ಸರ್ಕಾರಿ ಕಚೇರಿ ಹಾಗೂ ಕಾರ್ಯಕ್ರಮಗಳಲ್ಲಿ ಇಂಥ ಆಚರಣಾ ವಿಧಿಗಳನ್ನು ಸಂಪನ್ನಗೊಳಿಸುತ್ತಾ ಬಂದಿರುವುದು ಹೊಸದಲ್ಲ. ಆದರೆ, ಸೋಮವಾರ ಒಂದೆಡೆ ಮೌಢ್ಯಾಚರಣೆ ಪ್ರತಿಬಂಧಕ ಕಾಯ್ದೆ ಜಾರಿಗಾಗಿ ಆಗ್ರಹಿಸಿ ಬೃಹತ್ ಸಮಾವೇಶ ನಡೆದ ಹೊತ್ತಿನಲ್ಲೇ ಮತ್ತೊಂದೆಡೆ ಮತ್ತದೇ ಬಗೆಯ ಧಾರ್ಮಿಕ ನಂಬಿಕೆಗಳನ್ನು ಉಳಿಸಿಕೊಳ್ಳುವ ಯತ್ನ ಸರ್ಕಾರದ ವತಿಯಿಂದಲೇ ನಡೆದ ವಿಪರ್ಯಾಸದ ಬಗ್ಗೆ ವಿಮರ್ಶಿಸಬೇಕಾಗಿದೆ.
ಅಷ್ಟಕ್ಕೂ ಇಂಥ ಪೂಜಾ ವಿಧಿಗಳನ್ನು ನಡೆಸಲು ಆಹ್ವಾನಿತರಾಗುವವರು ಬಹುಮಟ್ಟಿಗೆ ಒಂದೇ ವರ್ಗಕ್ಕೆ ಸೇರಿದವರಾಗಿರುತ್ತಾರೆ. ಈ ಪೂಜಾ ವಿಧಿಗಳು ಆ ವರ್ಗದವರಿಂದ ಮಾತ್ರವೇ ಆದರೆ ಶ್ರೇಯಸ್ಕರವೇ? ಬೇರೆ ಜಾತಿ, ಧರ್ಮದವರು ನಿಷಿದ್ಧರೆ? ಇತರರಿಗೆ ಪೂಜಾ ವಿಧಿಗಳು ಗೊತ್ತಿರುವುದಿಲ್ಲವೇ? ಸಂಬಂಧಿಸಿದ ಅಧಿಕಾರಿಗಳು ತಮ್ಮ ಕುಲ, ಗೋತ್ರಕ್ಕೆ ಸೇರಿದವರನ್ನು ಆ ಹೊತ್ತಿನ ಪೂಜೆಗೆ ಆಹ್ವಾನಿಸುವ ಪದ್ಧತಿ ಬೆಳೆದಿದೆಯೇ ಅಥವಾ ಸರ್ಕಾರದಲ್ಲಿ ಇದಕ್ಕಾಗಿ ಕೆಲವರನ್ನು ಕಾಯಂ ಆಗಿ ಆಯ್ಕೆ ಮಾಡಲಾಗಿರುತ್ತದೆಯೇ?
ಇಂಥ ಪೂಜೆಗಳು ಯಾರ ತೃಪ್ತಿಗಾಗಿ? ಅವುಗಳಿಲ್ಲದೇ ಕಾರ್ಯಕ್ರಮಗಳು ಉದ್ಘಾಟನೆಯಾದರೆ ಏನಾದರೂ ಕೇಡು ಸಂಭವಿಸಬಹುದೇ? ಇಂಥವರಿಂದ ಪೂಜೆ ಆದರೆ ಯಾವ ವಿಪತ್ತುಗಳೂ ಇಲ್ಲದೆ ಯೋಜನೆ ಯಶಸ್ವಿಯಾಗುವುದೇ? ಸರ್ಕಾರ ಸಾರ್ವಜನಿಕರಿಗೆ ವೈಚಾರಿಕತೆ ಬಗ್ಗೆ ತಿಳಿ ಹೇಳುವ ಮೊದಲು, ಸ್ವತಃ ಕೆಲವು ಬದಲಾವಣೆಗಳನ್ನು ಅಳವಡಿಸಿಕೊಳ್ಳುವುದು ವಿವೇಕಯುತ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.