ADVERTISEMENT

ಪ್ರತಿಗಾಮಿ ಧೋರಣೆ

ಶ್ರಿನಿವಾಸ ಕಾರ್ಕಳ, ಮಂಗಳೂರು
Published 10 ಜುಲೈ 2016, 19:30 IST
Last Updated 10 ಜುಲೈ 2016, 19:30 IST

ಹಿಂದೆ ನಮ್ಮಲ್ಲಿ ಬಾಲ್ಯವಿವಾಹ, ಸತಿಸಹಗಮನ, ದೇವದಾಸಿ, ಬೆತ್ತಲೆ ಸೇವೆ ಮೊದಲಾದ ಸಾಮಾಜಿಕ ಅನಿಷ್ಟಗಳು ವ್ಯಾಪಕವಾಗಿ ರೂಢಿಯಲ್ಲಿದ್ದವು ಮತ್ತು ಅವೆಲ್ಲವಕ್ಕೂ ಜನಸಾಮಾನ್ಯರ ನಂಬಿಕೆಗಳೇ ಆಧಾರವಾಗಿದ್ದವು. ಆ ಅನಿಷ್ಟ ಸಂಪ್ರದಾಯಗಳ ನಿಷೇಧಕ್ಕೆ ವ್ಯಾಪಕ ವಿರೋಧ ಇದ್ದ ಹೊರತಾಗಿಯೂ ಅವು ಆಧುನಿಕ ನಾಗರಿಕ ಸಮಾಜಕ್ಕೆ ಸಲ್ಲದ ಆಚರಣೆಗಳು ಎಂಬ ನೆಲೆಯಲ್ಲಿ ಪ್ರಭುತ್ವಗಳು ಅವನ್ನು ದಿಟ್ಟವಾಗಿ ನಿಷೇಧಿಸಿದವು.

ವಿಸ್ತೃತ ಜನಸಮುದಾಯದ ಭವಿಷ್ಯದ ಹಿತಾಸಕ್ತಿಯನ್ನು ರಕ್ಷಿಸುವ ದೃಷ್ಟಿಯಿಂದ ಹೀಗೆ ನಿಷೇಧಿಸುವುದು ಪ್ರಭುತ್ವದ ಹೊಣೆಗಾರಿಕೆ ಕೂಡಾ ಆಗಿರುತ್ತದೆ. ನಾನಾ ಬಗೆಯ ಶೋಷಣೆಗೆ, ದೌರ್ಜನ್ಯಕ್ಕೆ ದಾರಿಮಾಡಿಕೊಡುವ ಮತ್ತು ಮಾನವ ಘನತೆಗೆ ತೀವ್ರ ಕುಂದುಂಟು ಮಾಡುವ ಮೌಢ್ಯಗಳನ್ನು ನಿರ್ಬಂಧಿಸುವ ಕರ್ನಾಟಕ ಸರ್ಕಾರದ ಯೋಚನೆಯನ್ನು ವಿರೋಧಿಸುವವರೆಲ್ಲರೂ ಈ ಅಂಶವನ್ನು ಬಹುಮುಖ್ಯವಾಗಿ ಗಮನದಲ್ಲಿರಿಸಿಕೊಳ್ಳಬೇಕಾದ ಅಗತ್ಯವಿದೆ; ತಾವು ಮೌಢ್ಯಗಳ ಪರವಿದ್ದೇವೆಯೋ ವಿರುದ್ಧವಿ
ದ್ದೇವೆಯೋ ಎಂದು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳುವ ಅಗತ್ಯವಿದೆ. ಇಲ್ಲಿ ಚಿಲ್ಲರೆ ರಾಜಕೀಯ ಸಲ್ಲದು.

ಕಾಂಗ್ರೆಸ್‌ನ ಭವಿಷ್ಯದ ದೃಷ್ಟಿಯಿಂದ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಕೂಡದು ಎಂದು ಯಾರೋ ಆ ಪಕ್ಷದ  ‘ಹಿರಿಯ’ ಸಚಿವರು ಆಗ್ರಹಿಸಿದರು ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಇಂಥವರಿಗೆ ನಾಡಿನ ಮುಗ್ಧ ಜನಸಮುದಾಯದ ಹಿತಾಸಕ್ತಿ ರಕ್ಷಣೆಗಿಂತಲೂ ಪಕ್ಷದ ಭವಿಷ್ಯ ಮುಖ್ಯವಾಗಿರುವುದು ದುರಂತವೇ ಸರಿ. ನಮ್ಮನ್ನು ಆಳುವವರ ಇಂಥ ಪ್ರತಿಗಾಮಿ ಧೋರಣೆಗಳಿಂದ ಮತ್ತು ಮತ ರಾಜಕಾರಣದಿಂದಾಗಿಯೇ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯ ಸಾಮಾಜಿಕ ಅಭಿವೃದ್ಧಿಯ ಅನೇಕ ಸೂಚ್ಯಂಕಗಳಲ್ಲಿ ತೀರಾ ಹಿಂದುಳಿದಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.