‘ಕನ್ನಡದ ಈ ಆ್ಯಪ್ ಕಬ್ಬಿಣದ ಕಡಲೆ’ (ಪ್ರ.ವಾ., ಸೆ. 21) ವರದಿಯಲ್ಲಿ ನಾನು ವಿನ್ಯಾಸಗೊಳಿಸಿದ ಕನ್ನಡ ಕೀಲಿಮಣೆಯ ಪ್ರಸ್ತಾಪವಿರುವುದರಿಂದ ಈ ಪತ್ರ. ನಾನು ಕನ್ನಡ ಕೀಲಿಮಣೆಯ ವಿನ್ಯಾಸವನ್ನು ರೂಪಿಸುವಾಗ ಎರಡೂ ಕೈಗಳನ್ನು ಬಳಸಿ QWERTY ಕೀಲಿಮಣೆಯಲ್ಲಿ ಟೈಪ್ ಮಾಡುವ ವಿಧಾನ ಮನಸ್ಸಿನಲ್ಲಿತ್ತು.
ರೋಮನ್ ಲಿಪಿಯ 26 ಅಕ್ಷರಗಳ ಮಿತಿಯಲ್ಲಿ ರೂಪುಗೊಂಡಿದ್ದ QWERTY ಕೀಲಿಮಣೆಯಲ್ಲಿ ಕನ್ನಡದ ಎಲ್ಲಾ ಅಕ್ಷರಗಳನ್ನು ಮೂಡಿಸುವುದಕ್ಕೆ ಶಿಫ್ಟ್ ಬಳಸಿಕೊಳ್ಳುವುದು ಅಗತ್ಯವೂ ಆಗಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಇದು ಭೌತಿಕವಾದ ಕೀಲಿಮಣೆ. ಇದನ್ನೇ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್‌ಗಳಲ್ಲಿ ಟೈಪ್ ಮಾಡುವುದಕ್ಕೂ ಅನ್ವಯಿಸುವುದು ಸರಿಯಲ್ಲ.
ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಲ್ಲಿ ಟೈಪ್ ಮಾಡುವ ಕ್ರಿಯೆಯಲ್ಲಿ ಬಳಕೆಯಾಗುವುದು ಒಂದು ಬೆರಳೇ ಹೊರತು ಎರಡೂ ಕೈಗಳಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ ಈಗಿನ ಟಚ್ ಸ್ಕ್ರೀನ್ ಮೊಬೈಲ್ ಫೋನ್‌ಗಳಲ್ಲಿರುವುದು ಭೌತಿಕವಾದ ಕೀಲಿಮಣೆಯಲ್ಲ. ಆದ್ದರಿಂದ ಅದಕ್ಕೆ ಅನುಕೂಲವಾಗುವಂತೆ ಹೊಸ ಕನ್ನಡ ಕೀಲಿಮಣೆ ವಿನ್ಯಾಸ ಮಾಡಬೇಕು. ಇಂಗ್ಲಿಷ್‌ನಲ್ಲಿ QWERTY ಕೀಲಿಮಣೆಯನ್ನೇ ಮೊಬೈಲ್ ಫೋನುಗಳು ಒದಗಿಸುತ್ತಿವೆ.
ಆದ್ದರಿಂದ ಕನ್ನಡಕ್ಕೂ ಅದೇ ಮಾದರಿಯನ್ನೇ ಏಕೆ ಅನ್ವಯಿಸಬಾರದು ಎಂಬ ಪ್ರಶ್ನೆ ಅನೇಕರ ಮನಸ್ಸಿನಲ್ಲಿರಬಹುದು. QWERTY ಕೀಲಿಮಣೆಯಲ್ಲಿ ಶಿಫ್ಟ್ ಬಳಸದೆಯೂ ರೋಮನ್ ಲಿಪಿಯ ಎಲ್ಲಾ 26 ಅಕ್ಷರಗಳನ್ನೂ ಟೈಪ್ ಮಾಡಬಹುದು. ಆದರೆ ಕನ್ನಡದಲ್ಲಿ ಶಿಫ್ಟ್ ಬಳಸದೇ ಇದ್ದರೆ ಅನೇಕ ಅಕ್ಷರಗಳನ್ನು ಮೂಡಿಸಲು ಸಾಧ್ಯವಿಲ್ಲ.
ಆದ್ದರಿಂದ ಇಂಗ್ಲಿಷ್‌ನ ಮಾದರಿಯನ್ನು ಕನ್ನಡಕ್ಕೆ ಅನ್ವಯಿಸುವುದು ಸರಿಯಲ್ಲ. ತಂತ್ರಜ್ಞಾನ ಬೆಳೆದಂತೆ ಭಾಷೆಯನ್ನು ಬಳಸುವುದಕ್ಕೆ ಅನುವು ಮಾಡಿಕೊಡುವ ಪರಿಕರಗಳ ಸ್ವರೂಪ ಬದಲಾಗುತ್ತದೆ. ಇದಕ್ಕೆ ಅನುಗುಣವಾಗಿ ಬಳಕೆಯ ವಿಧಾನವೂ ಮಾರ್ಪಾಡಾಗು-ತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೀಲಿಮಣೆಯ ವಿನ್ಯಾಸವೂ ಬದಲಾಗಬೇಕು. ಒಂದು ಬೆರಳಿನಲ್ಲಿ ಟೈಪಿಸುವುದಕ್ಕೆ ಅನುಕೂಲವಾಗುವ ಹೊಸ ಕನ್ನಡ ಕೀಲಿಮಣೆಯನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಯುವ ತಂತ್ರಜ್ಞರು ಆಲೋಚಿಸಬೇಕು.
–ಕೆ.ಪಿ. ರಾವ್, ಉಡುಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.