ನಾಗೇಶ ಹೆಗಡೆಯವರು ‘ತದಡಿಯ ಕಡಲು ತಡಿಯ ಕದಡಲು ತುಡಿತ’ ಲೇಖನದಲ್ಲಿ (ಪ್ರ.ವಾ., ಮಾ.12) ತದಡಿಯಲ್ಲಿ ಬೃಹತ್ ಬಂದರು ನಿರ್ಮಾಣ ಆದರೆ ವೇಶ್ಯಾವಾಟಿಕೆ ಹೆಚ್ಚಾಗುತ್ತದೆ ಎಂಬಂಥ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಉದಾಹರಣೆಯಾಗಿ ಉಕ್ರೇನಿನ ಒಡೆಸ್ಸಾ ಬಂದರು, ಥಾಯ್ಲೆಂಡಿನ ಫುಕೆಟ್, ಚೀನಾದ ಶೆಂಝುಂಗ್‌ಗಳ ಉದಾಹರಣೆ ಕೊಟ್ಟಿದ್ದಾರೆ.
ಆದರೆ ಜಗತ್ತಿನಲ್ಲಿ ಬಂದರುಗಳಿಂದಲೇ ಖ್ಯಾತಿ ಮತ್ತು ಅಭಿವೃದ್ಧಿ ಹೊಂದಿದ ಸಿಂಗಪುರ, ಹಾಂಕಾಂಗ್, ದುಬೈ, ಲಂಡನ್, ನ್ಯೂಯಾರ್ಕ್, ಜೆಡ್ಡಾ ಮುಂತಾದ ನಗರಗಳನ್ನು ಯಾಕೆ ಮರೆತಿದ್ದಾರೆ? ನಮ್ಮ ದೇಶದ ಮುಂಬೈ, ಗೋವಾ, ಕೊಚ್ಚಿನ್, ವಿಶಾಖಪಟ್ಟಣ, ಕೋಲ್ಕತ್ತದಲ್ಲಿ ಬಂದರುಗಳಿವೆ. ರಾಜ್ಯದಲ್ಲಿ ಮಂಗಳೂರು, ಕಾರವಾರಗಳಲ್ಲಿ ಬಂದರುಗಳಿವೆ. ಹಾಗಾದರೆ ಅಲ್ಲೂ ಇದೇ ಪರಿಸ್ಥಿತಿ ಇದೆಯೇ?
ಈ ಹಿಂದೆ, ಮಿಲಿಟರಿ ಕೇಂದ್ರ ನೆಲೆಗೊಂಡ ಕಡೆಗಳಲ್ಲಿಯೂ ವೇಶ್ಯಾವಾಟಿಕೆ ಹೆಚ್ಚಾಗುತ್ತಿದೆ ಎಂಬ ಮಾತಿತ್ತು. ನಮ್ಮ ರಾಜ್ಯದ ಬೆಳಗಾವಿಯಲ್ಲಿ ಭೂದಳ, ಕಾರವಾರದಲ್ಲಿ ನೌಕಾದಳ, ಬೆಂಗಳೂರು ಮತ್ತು ಬೀದರ್‌ಗಳಲ್ಲಿ ವಾಯುದಳಗಳ ಕಚೇರಿಗಳಿವೆ.
ಆದರೆ, ಅಲ್ಲೆಲ್ಲಾ ಈ ಕಾರಣದಿಂದ ವೇಶ್ಯಾವಾಟಿಕೆಯಲ್ಲಿ ಏರಿಕೆ ಕಂಡು ಬಂದಂತಿಲ್ಲ. ಅಷ್ಟಕ್ಕೂ ಬಂದರುಗಳನ್ನು ಸಮುದ್ರ ತೀರದಲ್ಲಿ ಸ್ಥಾಪಿಸದೇ ಒಳನಾಡಿನಲ್ಲಿ ಸ್ಥಾಪಿಸಲು ಆಗುತ್ತದೆಯೇ? ಸೆಷಲ್ಸ್ ದ್ವೀಪ ಈ ಹಿಂದೆ ಡಕಾಯಿತರ ನಾಡಾಗಿ ಪ್ರಸಿದ್ಧಿ ಹೊಂದಿ ಈಗ ಆಯಕಟ್ಟಿನ ನಾಗರಿಕ ಸಮಾಜವಾಗಿ ಪರಿವರ್ತನೆ ಹೊಂದಿದ್ದನ್ನು ತದಡಿಗೆ ಹೋಲಿಸುವುದು ಸರಿಯಲ್ಲ. ತದಡಿಯಲ್ಲಿ ಸ್ಥಾಪಿಸಬೇಕಾಗಿದ್ದ ಉಷ್ಣಸ್ಥಾವರ ಬೇರೆ ಕಡೆಗೆ ಹೋಗಿದೆ. ಈಗ ಬೃಹತ್ ಬಂದರು ಆರಂಭಗೊಳ್ಳುತ್ತದೆ ಎಂದರೆ ಅದಕ್ಕೂ ಕಲ್ಲು ಹಾಕುವುದು ಎಷ್ಟು ಸರಿ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.