ADVERTISEMENT

ಬರಹಗಾರರ ಶಬ್ದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2015, 19:30 IST
Last Updated 10 ಫೆಬ್ರುವರಿ 2015, 19:30 IST

ಸಾಹಿತಿ ಎಸ್.ಎಲ್. ಭೈರಪ್ಪನವರು ಮತ್ತು ಅವರ ಕೃತಿಗಳ ಕುರಿತು ಕನ್ನಡದ ಲೇಖಕರ ಮಧ್ಯೆ ನಡೆಯುತ್ತಿರುವ ಪರ– ವಿರೋಧ ತಾಕಲಾಟಗಳನ್ನು ನೋಡಿ ಕಸಿವಿಸಿ ಆಗುತ್ತಿದೆ. ಪರಸ್ಪರ ಬಳಕೆ ಆಗುತ್ತಿರುವ ನಂಜಿನ ಭಾಷೆ, ಶಬ್ದ ಸಂಭ್ರಮವನ್ನು ಓದುಗರು ಬೆರಗಿನಿಂದ ನೋಡುವಂತಾಗಿದೆ. ಸಾಹಿತ್ಯ ಲೋಕದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಉದ್ದಕ್ಕೂ  ಇದ್ದವುಗಳೇ. ಇರಬೇಕು ಕೂಡ. ಆದರೆ ಪರಸ್ಪರ ಒಂದುಚೂರು ಘನತೆ, ಗೌರವಗಳಿಲ್ಲದ ವಿವಾದಗಳು ಹಿಂದೆ ಆದಂತಿಲ್ಲ.

ಇಂದಿನ ಕನ್ನಡದ ಓದುಗರು ಪ್ರಬುದ್ಧರಾಗಿದ್ದಾರೆ. ಹಲವಾರು ಮಾಧ್ಯಮಗಳನ್ನು ಅವರು ಬಲ್ಲವರಾಗಿದ್ದಾರೆ. ಯಾವ ಕೃತಿ ಶ್ರೇಷ್ಠ ಯಾವುದು ಕನಿಷ್ಠ ಅನ್ನುವುದನ್ನು ಅವರು ಓದಿ ನಿರ್ಧರಿಸಬಲ್ಲವರಾಗಿದ್ದಾರೆ. ಸಾಹಿತಿಗಳೇ ಕಿತ್ತಾಡಿಕೊಂಡು ಯಾವುದೇ ಒಬ್ಬ ಸಾಹಿತಿಯನ್ನು ಹೀಗಳೆಯುವುದು ಬೇಡ. ಅದು ಓದುಗರನ್ನು ಅವಮಾನಿಸಿದಂತೆ. ಗಟ್ಟಿ ಕೃತಿ ಜನಮನದಲ್ಲಿ ಉಳಿಯುತ್ತದೆ.

ಟೊಳ್ಳಾದದ್ದು ಹಾರಿ ಹೋಗುತ್ತದೆ. ಬರಹಗಾರನಂತೆಯೇ ಓದುಗನಿಗೂ ಅವನದೇ ಆದ ದೃಷ್ಟಿ ಧೋರಣೆಗಳು, ಗ್ರಹಿಕೆಗಳು ಇರುತ್ತವೆ. ಒಂದು ಕೃತಿಯ ನಿಜವಾದ ವಿಮರ್ಶಕ ಅವನೇ. ಖ್ಯಾತ ಸಾಹಿತಿ, ವಿಮರ್ಶಕ ಎಲಿಯಟ್‌ರ ಮಾತುಗಳು ನೆನಪಿಗೆ ಬರುತ್ತಿವೆ. ‘ಒಂದು ಕೃತಿ ಸಾಹಿತ್ಯ ಕೃತಿ ಹೌದೋ ಅಲ್ಲವೋ ಎಂದು ನಿರ್ಧರಿಸಲಿಕ್ಕೆ ಸಾಹಿತ್ಯಕ ಮಾನದಂಡಗಳು ಸಾಕು... --ಆದರೆ ಅದು ಶ್ರೇಷ್ಠ ಸಾಹಿತ್ಯ ಕೃತಿ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಲು ಸಾಹಿತ್ಯಕ ಮಾನದಂಡಗಳು ಸಾಕಾಗುವುದಿಲ್ಲ, ಸಾಹಿತ್ಯೇತರ ಮಾನದಂಡಗಳಿಂದಲೂ ನೋಡಬೇಕಾಗುತ್ತದೆ...

ಸಾಹಿತ್ಯೇತರ ಮಾನದಂಡ ಅಂದರೆ ಲೇಖಕನ ಜೀವಪರ, ಜನಪರ ಕಾಳಜಿ, ಸಾಮಾಜಿಕತೆ, ಪುರುಷಾರ್ಥಗಳು, ಧರ್ಮ, ಅಧ್ಯಾತ್ಮ, ಜೀವನಪ್ರೀತಿ, ಜೀವಪರತೆ ಎಲ್ಲ ಇದರಲ್ಲಿ ಸೇರಿರುತ್ತದೆ. ಇದರಲ್ಲಿ ಹೆಚ್ಚಿನ ಬದಲಾವಣೆಗಳಾಗುವುದಿಲ್ಲ. ಆದರೆ ಅವುಗಳ ಮೇಲೆ ಬೀಳುವ ಒತ್ತುಗಳು ಬದಲಾಗುತ್ತಿರುತ್ತವೆ...’

ಈ ಹಿನ್ನೆಲೆಯಲ್ಲಿ ಒಂದೊಂದು ಕೃತಿ ಒಬ್ಬೊಬ್ಬ ಓದುಗನಿಗೆ ಒಂದೊಂದು ಕಾರಣಕ್ಕಾಗಿ ಇಷ್ಟ ಆಗಬಹುದು, ಆಗದಿರಬಹುದು. ಲೇಖಕ ಬರೆಯುವುದು ಓದುಗನಿಗಾಗಿ. ಬಲವಾದ ವಿಮರ್ಶಾ ಮಾನದಂಡಗಳಿಂದ, ಪೂರ್ವಗ್ರಹಗಳಿಂದ ಓದುಗರನ್ನು ಪ್ರಭಾವಿಸುವುದು ಸಲ್ಲ. ಹೊಸ ಓದುಗ ಪೀಳಿಗೆಯ ಸೃಷ್ಟಿಯೇ ನಿಂತಂತಾಗಿರುವ ಈ ಸಂದರ್ಭದಲ್ಲಿ ಬರಹಗಾರರು ಆ ಕಡೆಗೆ ಗಮನ ನೀಡಬೇಕಾಗಿದೆ.

ಸಾಹಿತ್ಯಕ್ಕಿಂತ ಬದುಕು ದೊಡ್ಡದೆಂದು ಹೇಳುತ್ತಾರೆ. ಒಬ್ಬ ಲೇಖಕನ ಬದುಕು ಕೂಡ ಅವನ ಕೃತಿಯ ಓದುಗರನ್ನು ಕೆಲಮಟ್ಟಿಗೆ ಪ್ರಭಾವಿಸುತ್ತದೆ. ಬದುಕುವುದೊಂದು ಬರೆಯುವುದೊಂದು ಬಗೆಯಾದಲ್ಲಿ, ಸಾಹಿತಿಯ ನಡೆ–ನುಡಿಯಲ್ಲಿ ಅಜಗಜಾಂತರ ಇದ್ದರೆ ಅದನ್ನು ಓದುಗರು ಮೆಚ್ಚರು. ಮೇರು ವ್ಯಕ್ತಿತ್ವದ ಸಾಹಿತಿಗಳೇ ಅಪರೂಪವಾಗಿದ್ದಾರೆ. ಸಾಲು ಮರದ ತಿಮ್ಮಕ್ಕ, ಕ್ಯೆಲಾಶ್ ಸತ್ಯಾರ್ಥಿ, ಅಣ್ಣಾ ಹಜಾರೆ ಅಂಥವರ  ನಿಸ್ಪೃಹ ಬದುಕು ನೂರು ಕಾವ್ಯಗಳಿಗೂ ಮಿಗಿಲು. ಆದ್ದರಿಂದ ತಮ್ಮತಮ್ಮ ತನುವ ಸಂತೈಸಿಕೊಳ್ಳುವುದು, ತಮ್ಮತಮ್ಮ ಮನವ ಸಂತೈಸಿಕೊಳ್ಳುವುದು ಒಳಿತು.                         
    – ವೆಂಕಟೇಶ ಮಾಚಕನೂರ, ಧಾರವಾಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.