ಈಶಾನ್ಯ ರಾಜ್ಯ ತ್ರಿಪುರಾ ಈಗ ಕಮ್ಯುನಿಸ್ಟ್ ಆಡಳಿತದಿಂದ ಮುಕ್ತಗೊಂಡಿದೆ. ಅಲ್ಲಿ ಬಿಜೆಪಿಯ ಕೇಸರಿ ಧ್ವಜ ಹಾರಾಡುತ್ತಿದೆ. ಪ್ರಜಾಸತ್ತೆಯಲ್ಲಿ ಇಂಥ ಬದಲಾವಣೆ ಸಹಜ ಪ್ರಕ್ರಿಯೆ. ಆದರೆ, ಅಧಿಕಾರಕ್ಕೆ ಏರಿಬಿಟ್ಟೆನೆಂಬ ಠೇಂಕಾರವು ಬಿಜೆಪಿಯ ನೆತ್ತಿಗಡರಿದ ಪರಿಣಾಮವಾಗಿ, ಆ ಪಕ್ಷವು ದೇಶಕ್ಕೆ ಸಾರುತ್ತಿರುವ ಸಂದೇಶ ಭಯಾನಕ ಮತ್ತು ದುರದೃಷ್ಟಕರ.
ಸಮಾನತೆಯ ಸಂದೇಶವನ್ನು ಪ್ರಪಂಚಕ್ಕೆ ಸಾರಿದ್ದ ವ್ಲಾಡಿಮಿರ್ ಲೆನಿನ್ ಅವರು ಕಮ್ಯುನಿಸ್ಟ್ ಪಕ್ಷಕ್ಕೆ ಸೀಮಿತಗೊಂಡಿದ್ದ ವ್ಯಕ್ತಿಯಲ್ಲ. ಅವರದ್ದು ಮಾರ್ಕ್ಸ್‌ವಾದಿ ಪಂಥ. ಆದ್ದರಿಂದ ಕಮ್ಯುನಿಸ್ಟ್ ಪಕ್ಷಕ್ಕೆ ಅವರು ಆರಾಧ್ಯ ದೈವ. ತ್ರಿಪುರಾವನ್ನು 25 ವರ್ಷ ಆಳಿದ ಕಮ್ಯುನಿಸ್ಟ್ ಪಕ್ಷವು ಅವರ ಪ್ರತಿಮೆಗಳ ಸ್ಥಾಪನೆಗೆ ಇಂಬು ಕೊಟ್ಟಿದ್ದು ಕೂಡ ಸಹಜವೇ. ಆದರೆ ಆ ಪಕ್ಷ ಅಧಿಕಾರ ಕಳೆದುಕೊಂಡ ತಕ್ಷಣ, ಜಗದ್ವಂದ್ಯ ದಾರ್ಶನಿಕನನ್ನು ‘ವಿದೇಶಿಗ’ ಎಂದು ಜರಿದು, ಆತನ ಪ್ರತಿಮೆಗಳನ್ನು ಕೆಡವುವುದು ಏನನ್ನು ಸೂಚಿಸುತ್ತದೆ? ವಿದೇಶಗಳಲ್ಲಿರುವ ನಮ್ಮ ಮಹಾತ್ಮನ ಪ್ರತಿಮೆಗಳಿಗೂ ಇದೇ ಗತಿ ಒದಗಿಬಂದರೆ ಯಾರನ್ನು ದೂಷಿಸೋಣ?
ತ್ರಿಪುರಾದ ಚುನಾವಣೋತ್ತರ ಹಿಂಸೆಯನ್ನು ಖಂಡಿಸಬೇಕಾಗಿದ್ದ ಕೇಂದ್ರದ ಗೃಹಮಂತ್ರಿ ರಾಜನಾಥ ಸಿಂಗ್ ಅವರು, ‘ಅಧಿಕಾರದ ಪ್ರಮಾಣವಚನ ಸ್ವೀಕರಿ
ಸುವವರೆಗಾದರೂ ಶಾಂತತೆ ಕಾಪಾಡಿಕೊಳ್ಳಿ’ ಎಂದು ತಮ್ಮ ಪಕ್ಷದವರಿಗೆ ನೀಡಿದ ಬಾಲಿಶ ಸಂದೇಶವೂ ಆಘಾತಕಾರಿ.
– ಅಮ್ಮೆಂಬಳ ಆನಂದ, ಮಣಿಪಾಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.