ಮಕ್ಕಳನ್ನು ಶಾಲೆಗೆ ಕಳಿಸುವುದೇ ಸರಿಯಾಗಿರುವುದನ್ನು ಕಲಿಯಲಿಕ್ಕೆಂದು. ಮಕ್ಕಳಿಗೆ ಕಲಿಯಲು ಕಷ್ಟವಾಗುತ್ತದೆ ಎಂದು ತೀರಾ ಸುಲಭದ ಶಬ್ದಗಳನ್ನೇ ಪಠ್ಯ ಪುಸ್ತಕಗಳಲ್ಲಿ ಅಳವಡಿಸಿದರೆ ದೊಡ್ಡದೊಡ್ಡ ವಾಕ್ಯಗಳನ್ನು, ಕ್ಲಿಷ್ಟಕರ ಶಬ್ದಗಳನ್ನು ಕಲಿಯುವುದು ಯಾವಾಗ? ಚಿಕ್ಕ ವಯಸ್ಸಿನಲ್ಲಿ ಹೊಸಹೊಸ ವಿಷಯಗಳ ಜೊತೆಗೆ ಅಲ್ಪಪ್ರಾಣ, ಮಹಾಪ್ರಾಣ, ಕಠಿಣ ಶಬ್ದಗಳನ್ನು ಕಲಿತಷ್ಟು ಶೀಘ್ರವಾಗಿ ಒಂದು ಹಂತದ ವಯಸ್ಸು ದಾಟಿದ ನಂತರ ಕಲಿಯುವುದು, ನೆನಪಿನಲ್ಲಿ ಇಟ್ಟುಕೊಳ್ಳುವುದು ಬಹಳ ಕಷ್ಟವಾಗುತ್ತದೆ.
ಮಕ್ಕಳ ಮನಸ್ಸು ಯಾವುದನ್ನಾದರೂ ಬಹಳ ಬೇಗ ಕಲಿಯುತ್ತದೆ. ಮನೆಯಲ್ಲಿ ಪ್ರತಿದಿನ ಒಂದಕ್ಕಿಂತ ಹೆಚ್ಚು ಭಾಷೆಗಳು ಮಗುವಿನ ಕಿವಿಯ ಮೇಲೆ ಬೀಳುತ್ತಿದ್ದರೆ ಮೂರ್ನಾಲ್ಕು ವರ್ಷದ ಮಗು ಆ ಎಲ್ಲ ಭಾಷೆ ಗಳನ್ನೂ ಮಾತನಾಡಲು ಕಲಿತಿರುತ್ತದೆ. ಆ ವಯಸ್ಸಿನಲ್ಲಿ ಕಲಿತದ್ದು ಕೊನೆಯವರೆಗೂ ನೆನಪಿನಲ್ಲಿ ಉಳಿಯುತ್ತದೆ ಎಂಬುದನ್ನು ಮರೆಯದಿರೋಣ.
ಇನ್ನು ಅನ್ನದಾನೇಶರು ಹೇಳಿದಂತೆ (ವಾ.ವಾ., ಜುಲೈ 9) ಪಠ್ಯಪುಸ್ತಕದ ಭಾಷೆಯನ್ನು ಆಡುಮಾತಿನ ಹತ್ತಿರ ಕೊಂಡೊಯ್ಯಬೇಕೆಂದರೆ ಕರ್ನಾಟಕದ ಒಂದೊಂದು ಭಾಗಕ್ಕೂ ಒಂದೊಂದು ಪಠ್ಯಪುಸ್ತಕ ತಯಾರಿಸಬೇಕಾಗುತ್ತದೆ. ಉತ್ತರ ಕರ್ನಾಟಕ, ಕರಾವಳಿ, ಮಂಡ್ಯ-ಮೈಸೂರು ಕಡೆಯ ಆಡು ಮಾತಿನ ಎಷ್ಟೋ ಶಬ್ದಗಳು ಇತರ ಭಾಗದವರಿಗೆ ಅರ್ಥವಾಗುವುದು ಕಷ್ಟ.
ಪಠ್ಯಪುಸ್ತಕಗಳಲ್ಲಿರುವ ದೋಷಗಳ ಪರಿಶೀಲನೆಗೆಂದು ತಡವಾಗಿಯಾದರೂ ಬರಗೂರು ರಾಮಚಂದ್ರಪ್ಪ ನೇತೃತ್ವ ದಲ್ಲಿ ವಿಷಯತಜ್ಞರ ಸಮಿತಿ ನೇಮಕಗೊಂಡಿರುವುದನ್ನು ಸ್ವಾಗತಿಸೋಣ. ಶಾಲೆಗಳು ಶುರುವಾಗುವ ಒಂದೆರಡು ತಿಂಗಳ ಮುಂಚಿತವಾಗಿಯೇ ಈ ಕೆಲಸವಾಗಿದ್ದರೆ ಒಳ್ಳೆಯ ದಿತ್ತು. ಇದು ‘ಬೆಂಕಿ ಬಿದ್ದಾಗ ಬಾವಿ ತೋಡುವ’ ಕೆಲಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.